ಸೇವೆ ಕಾಯಂಗಾಗಿ ಅಂಗನವಾಡಿ ನೌಕರರ ಪ್ರತಿಭಟನೆ

| Published : Dec 19 2024, 12:35 AM IST

ಸಾರಾಂಶ

ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ವರ್ಗ 3 ಮತ್ತು 4 ಎಂಬುದಾಗಿ ಪರಿಗಣಿಸಿ, ಸೇವೆ ಕಾಯಂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಸಂಘಟನೆ ರಾಜ್ಯವ್ಯಾಪಿ ಕರೆ ಮೇರೆಗೆ ಜಿಲ್ಲಾಡಳಿತ ಭವನ ಎದುರು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ ನಗರದಲ್ಲಿ ಮಂಗಳವಾರದಿಂದ ಎರಡು ದಿನಗಳ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿತು.

- ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಸೇವಾ ಭದ್ರತೆಗೆ ಕೆ.ಎಚ್.ಆನಂದರಾಜ ಒತ್ತಾಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ವರ್ಗ 3 ಮತ್ತು 4 ಎಂಬುದಾಗಿ ಪರಿಗಣಿಸಿ, ಸೇವೆ ಕಾಯಂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಸಂಘಟನೆ ರಾಜ್ಯವ್ಯಾಪಿ ಕರೆ ಮೇರೆಗೆ ಜಿಲ್ಲಾಡಳಿತ ಭವನ ಎದುರು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ ನಗರದಲ್ಲಿ ಮಂಗಳವಾರದಿಂದ ಎರಡು ದಿನಗಳ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿತು.

ನೇತೃತ್ವ ವಹಿಸಿದ್ದ ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್.ಆನಂದರಾಜು ಮಾತನಾಡಿ, ಗುಜರಾತ್ ಹೈಕೊರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ರಾಜ್ಯ ಸರ್ಕಾರವೂ ಪರಿಗಣಿಸಿ, ಸೇವೆ ಕಾಯಂಗೊಳಿಸುವ ಮೂಲಕ ಬದುಕಿಗೆ ಭದ್ರತೆ ಒದಗಿಸಬೇಕು. ಕೇಂದ್ರ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ₹26 ಸಾವಿರಕ್ಕೆ ಗೌರವಧನ ಹೆಚ್ಚಿಸಬೇಕು. ನಿವೃತ್ತರಾದ ಅಂಗನವಾಡಿ ನೌಕರರಿಗೆ ಇಡಿಗಂಟು ಅಥಪಾ ಒಪಿಎಸ್‌ ಹಣವನ್ನು ಹಾಗೂ ₹10 ಸಾವಿರ ಮಾಸಿಕ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಆರಂಭವಾಗಿ 50 ವರ್ಷವಾಗುತ್ತಿದೆ. 2009ರ ಕಡ್ಡಾಯ ಶಿಕ್ಷಣ ಕಾಯ್ದೆ ಕರ್ತವ್ಯಗಳನ್ನು ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟ ಅಂಗನವಾಡಿ ಕೇಂದ್ರಗಳ ಮುಖಾಂತರ ಅಂಗನವಾಡಿ ನೌಕರರು ಜಾರಿ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್‌ಗಳು ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು 3 ಮತ್ತು 3ನೇ ಗ್ರೇಡ್‌ ನೌಕರರಾಗಿ ಪರಿಗಣಿಸಿ, ಜಂಟಿ ನಿಯಮಗಳನ್ನು ಕೇಂದ್ರ, ರಾಜ್ಯ ಸರ್ಕಾರಗಳು ರೂಪಿಸುವಂತೆ ನಿರ್ದೇಶನ ನೀಡಿವೆ. ಸುಪ್ರೀಂ ಕೋರ್ಟ್ 1972 ಗ್ರಾಚ್ಯುಟಿ ಪಾವತಿ ಕಾಯ್ದೆಯಡಿ ಅರ್ಹರೆಂದು ತೀರ್ಪು ನೀಡಿದೆ. ಹೀಗಿದ್ದರೂ ಈವರೆಗೆ ಅದನ್ನು ಜಾರಿಗೊಳಿಸಲು ಮೀನ-ಮೇಷ ಎಣಿಸಲಾಗುತ್ತಿದೆ ಎಂದು ದೂರಿದರು.

ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಸುವುದರಲ್ಲಿ ಸರ್ಕಾರಗಳ ವೈಫಲ್ಯತೆ ಎದ್ದು ಕಾಣುತ್ತಿದೆ. ಅಂಗನವಾಡಿ ನೌಕರರ ವೇತನವನ್ನು ಸಹ ಏರಿಕೆ ಮಾಡಿಲ್ಲ. ಇಂದಿನ ದುಬಾರಿ ದಿನಗಳಲ್ಲಿ ಅಲ್ಪ ಮೊತ್ತದ ಗೌರವಧನಕ್ಕೆ ದುಡಿಯುವ ಮಹಿಳೆಯರ ಜೀವನ ಭದ್ರತೆಗೆ ಸೇವೆ ಕಾಯಂಗೊಳಿಸಿ, ಸರ್ಕಾರ ಸ್ಪಂದಿಸಲಿ ಎಂದು ಅವರು ಆಗ್ರಹಿಸಿದ ಅವರು, ಕೇಂದ್ರ, ರಾಜ್ಯ ಸರ್ಕಾರಗಳು ಗೌರವಧನ ಹೆಚ್ಚಿಸುವ ಜೊತೆಗೆ ಸಾಮೂಹಿಕ ಆರೋಗ್ಯ ವಿಮೆ ಜಾರಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಜಿಲ್ಲಾಡಳಿತ ಮೂಲಕ ಉಭಯ ಸರ್ಕಾರಗಳಿಗೆ ಮನವಿ ಅರ್ಪಿಸಲಾಯಿತು.

ಸಂಘಟನೆ ಮುಖಂಡರಾದ ಗೀತಾ, ನಾಗರತ್ನ, ಶೀಲಾ, ಚಂದ್ರಕಲಾ, ಹೇಮಾವತಿ, ಲತಾ, ಸಿದ್ದಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

- - -

ಕೋಟ್‌ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಪರಿಕಲ್ಪನೆಗೆ ಬದಲಾಗಿ 2014ರ ನಂತರ ನೀತಿ ಆಯೋಗದ ಶಿಫಾರಸಿನಂತೆ 60:40ರ ಅನುಪಾತದ ಆಧಾರದಲ್ಲಿ ಕೇಂದ್ರ ಸರ್ಕಾರ ತನ್ನ ಮೂಲ ಜವಾಬ್ದಾರಿಯಿಂದ ನುಣುಚಿಕೊಂಡು, ಬಜೆಟ್ ಅನುದಾನವನ್ನು ನಿರಂತರ ಕಡಿಮೆ ಮಾಡುತ್ತಿದೆ. ಅಂಗನವಾಡಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದ ಘಟಕ ವೆಚ್ಚ 2018ರಿಂದ ಹೆಚ್ಚಿಸಿಲ್ಲ

- ಕೆ.ಎಚ್‌. ಆನಂದರಾಜು, ಜಿಲ್ಲಾ ಸಂಚಾಲಕ

- - -

-17ಕೆಡಿವಿಜಿ4, 5:

ಸೇವೆ ಕಾಯಂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ದಾವಣಗೆರೆ ಜಿಲ್ಲಾಡಳಿತ ಭವನ ಎದುರು ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ರಾಜ್ಯ ಸಮಿತಿ ಕರೆಯ ಮೇರೆಗೆ ಅಂಗನವಾಡಿ ನೌಕರರು ಪ್ರತಿಭಟಿಸಿದರು.