ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬಿಜೆಪಿ ಸರ್ಕಾರದಲ್ಲಿ ನಡೆಸಿದ ಹೋರಾಟದಲ್ಲಿದ್ದ ಇಂದಿನ ಸಚಿವೆ ನಮ್ಮ ಸರ್ಕಾರ ಬಂದ ೨೪ ತಾಸಿನಲ್ಲಿ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಕಲ್ಪಿಸುವುದಾಗಿ ಬೊಗಳೆ ಬಿಟ್ಟಿದ್ದರು. ಆದರೀಗ ಅವರು ಏನೂ ಮಾತನಾಡುತ್ತಿಲ್ಲ ಶಾಸಕ ಸಿದ್ದು ಸವದಿ ಆಕ್ರೋಶ ಹೊರಹಾಕಿದರು.ರಬಕವಿಯ ದಲಾಲ್ ಪರಿವಾರದ ಚನ್ನಮ್ಮಾ ಫಾರ್ಮಹೌಸ್‌ನಲ್ಲಿ ಶನಿವಾರ ಬಾಗಲಕೋಟ ಜಿಲ್ಲಾ, ರಬಕವಿ-ಬನಹಟ್ಟಿ ತಾಲೂಕು ಪಂಚಮಸಾಲಿ ಮಹಾಸಭಾ ಮತ್ತು ವಕೀಲರ ಪರಿಷತ್ ಜಂಟಿಯಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮದೇ ಸರ್ಕಾರವಿದ್ದರೂ ಪ್ರತಿಭಟನೆ ನಡೆಸಿ, ಸಿಎಂ ಭೇಟಿ ಮಾಡಿಸಿ ೨ಡಿ ಮೀಸಲಾತಿ ಕಲ್ಪಿಸಿದ್ದರೂ ಅದನ್ನು ಸುಪ್ರೀಂನಲ್ಲಿ ಪ್ರಶ್ನಿಸಿ ತಡೆ ತಂದ ಕಾರಣ ನಮ್ಮ ಸಮುದಾಯ ಮೀಸಲಾತಿಯಿಂದ ವಂಚಿತವಾಗಿದೆ. ಸರ್ಕಾರ ಬಂದು ಒಂದೂವರೆ ವರ್ಷ ಗತಿಸಿದರೂ ಬೊಗಳೆ ಬಿಟ್ಟವರು ತೆಪ್ಪಗಿರುವುದನ್ನು ಸಮಾಜ ಖಂಡಿಸಬೇಕೆಂದು ಕರೆ ನೀಡಿದರು.ಕೂಡಲಸಂಗಮ ಜಗದ್ಗುರು ಜಯಮೃತ್ಯುಂಜಯ ಶ್ರೀಗಳು ಮಾತನಾಡಿ, ಕಳೆದ ಮೂರುವರೆ ವರ್ಷಗಳ ಹೋರಾಟಕ್ಕೆ ತೀವ್ರ ಬಲ ಬಂದಿದೆ. ಇದೀಗ ಕನಿಷ್ಟವೆಂದರೂ ೧೦ ಸಾವಿರ ವಕೀಲರು ಹಾಗೂ ೫ ಸಾವಿರ ಟ್ರ್ಯಾಕ್ಟರ್‌ಗಳ ಮೂಲಕ ಡಿ.೧೦ ರಂದು ಸುವರ್ಣಸೌಧ ಮುತ್ತಿಗೆ ಹಾಕುವ ಮೂಲಕ ಪಂಚಮಸಾಲಿ ಹೋರಾಟದ ಸ್ವರೂಪ ಬದಲಾವಣೆಯೊಂದಿಗೆ ಮೀಸಲಾತಿ ಹೋರಾಟದ ಜಯ ಸಾಧಿಸಲಿದೆ ಎಂದರು.
ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹೋರಾಟವಾಗಿದ್ದು, ಯಾವುದೇ ಪಕ್ಷದ ವಿರುದ್ಧವಲ್ಲ. ಪ್ರತಿ ಗ್ರಾಮದಿಂದಲೂ ಜನರು ಆಗಮಿಸಲಿದ್ದಾರೆ. ಲಕ್ಷಾಂತರ ಪಂಚಮಸಾಲಿ ಸಮಾಜದ ಹೋರಾಟಗಾರರು ಭಾಗಿಯಾಗಲಿದ್ದಾರೆ. ಹೋರಾಟಗಾರರು ಯಾವುದೇ ವದಂತಿಗಳಿಗೆ ಕಿವಿಗೊಡದೇ ಬಂಧನವಾದರೂ ಅದೇ ಸ್ಥಳದಲ್ಲಿ ಅಡುಗೆ ಮಾಡಿಕೊಂಡು ಹೋರಾಟ ನಡೆಸಲು, ತ್ಯಾಗ-ಬಲಿದಾನಕ್ಕೂ ಸನ್ನದ್ಧವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.ಜನಪ್ರತಿನಿಧಿಗಳ ಮನಸ್ಥಿತಿ ಬದಲಾದೀತು ಆದರೆ ಸಮಾಜದ ಹೋರಾಟಗಾರರದ್ದು ಮೀಸಲಾತಿ ದೊರಕುವುದೊಂದೇ ಉದ್ದೇಶ. ಈ ಹೋರಾಟದಿಂದ ಮತ್ತೊಂದು ನರಗುಂದ ಬಂಡಾಯವಾಗುವುದು ನಿಶ್ಚಿತ ಎಂದು ಬಸವಜಯ ಮೃತ್ಯುಂಜಯ ಶ್ರೀಗಳು ತಿಳಿಸಿದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಸಮಾಜದ ಮೇಲೆ ಈಗಾಗಲೇ ಕೆಲ ರಾಜಕಾರಣಿಗಳು ಕುತಂತ್ರ ನಡೆಸುತ್ತಿದ್ದಾರೆ. ಹೋರಾಟ ಸಂದರ್ಭ ಸಮಾಜದ ಮೇಲೆ ಪೊಲೀಸ್, ಮಿಲಿಟರಿ ಎಂದು ಬಲಪ್ರಯೋಗ ಮಾಡಿದರೆ ೨೪ ಗಂಟೆಯೊಳಗೆ ಸರ್ಕಾರ ಕಿತ್ತು ಹೋಗುತ್ತದೆ ಎಂದು ಗುಡುಗಿದರು.ಈ ವೇಳೆ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗ್ಲಿಕರ, ತಾಲೂಕಾಧ್ಯಕ್ಷ ಶ್ರೀಶೈಲ ದಲಾಲ, ಏಗಪ್ಪ ಸವದಿ, ಬಾಬಾಗೌಡ ಪಾಟೀಲ, ಸಿದ್ಧನಗೌಡ ಪಾಟೀಲ, ಜಯವಂತ ಮಿಳ್ಳಿ, ಲಕ್ಕಪ್ಪ ಪಾಟೀಲ, ಮಹಾದೇವ ಕೊಟ್ಯಾಳ, ಪ್ರಭು ಪಾಲಭಾಂವಿ, ಪ್ರಭು ನೇಸೂರ, ಸಂಜಯ ತೆಗ್ಗಿ, ನ್ಯಾಯವಾದಿ ಎಸ್.ಬಿ.ಗೌಡಪ್ಪನವರ, ರವೀಂದ್ರ ಸಂಪಗಾಂವಿ, ಅಪ್ಪು ಪಾಟೀಲ ಸೇರಿದಂತೆ ರಬಕವಿ-ಬನಹಟ್ಟಿ, ತೇರದಾಳ, ರಾಯಭಾಗ, ಮಹಾಲಿಂಗಪುರ, ಬೆಳಗಲಿ, ಚಿಮ್ಮಡ, ಜಗದಾಳ, ನಾವಲಗಿ, ಯಲ್ಲಟ್ಟಿ ಗ್ರಾಮಗಳ ಪ್ರಮುಖರಿದ್ದರು.