ಅಪ್ರಾಪ್ತನಿಂದ ಮಹಿಳೆ ಮೇಲೆ ಹಲ್ಲೆ, ಚಿನ್ನಾಭರಣ ಅಪಹರಣ: ಬಂಧನ

| Published : Oct 31 2025, 01:30 AM IST

ಸಾರಾಂಶ

ಅಪ್ರಾಪ್ತ ನೋರ್ವ ಸರ್ವಮಂಗಳನವರ ಮೇಲೆ ದಾಳಿ ಮಾಡಿ ಆಕೆ ಧರಿಸಿದ್ದ ಕೊರಳಿನ ಮಾಂಗಲ್ಯ ಸರ ಕಸಿಯಲು ಯತ್ನಿಸಿದ್ದಾನೆ. ಗಾಭರಿಗೊಂಡ ಸರ್ವಮಂಗಳ ಪ್ರತಿರೋಧ ತೋರಿದ್ದಾರೆ.

ತುರುವೇಕೆರೆ: ಅಪ್ರಾಪ್ತನೋರ್ವ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಆಕೆ ಧರಿಸಿದ್ದ ಲಕ್ಷಾಂತರ ರು. ಬೆಳೆ ಬಾಳುವ ಚಿನ್ನದ ಆಭರಣವನ್ನು ಕಿತ್ತು ಪರಾರಿಯಾಗಿರುವ ಘಟನೆ ತಾಲೂಕಿನ ಕಣತೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ದಬ್ಬೇಘಟ್ಟ ಹೋಬಳಿಯ ಕಣತೂರು ಗ್ರಾಮದ ಸರ್ವಮಂಗಳ (58) ಎಂಬುವವರು ಎಂದಿನಂತೆ ತಮ್ಮ ತೋಟದಲ್ಲಿ ಎಮ್ಮೆ ಮೇಯಿಸುತ್ತಿದ್ದರು. ಆ ವೇಳೆ ಅದೇ ಗ್ರಾಮದ 17 ವರ್ಷದ ಅಪ್ರಾಪ್ತ ನೋರ್ವ ಸರ್ವಮಂಗಳನವರ ಮೇಲೆ ದಾಳಿ ಮಾಡಿ ಆಕೆ ಧರಿಸಿದ್ದ ಕೊರಳಿನ ಮಾಂಗಲ್ಯ ಸರ ಕಸಿಯಲು ಯತ್ನಿಸಿದ್ದಾನೆ. ಗಾಭರಿಗೊಂಡ ಸರ್ವಮಂಗಳ ಪ್ರತಿರೋಧ ತೋರಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಾಲಕ ಮರದ ತುಂಡಿನಿಂದ ತಲೆಗೆ ತೀವ್ರ ಹಲ್ಲೆ ನಡೆಸಿದ್ದಾನೆ. ಪರಿಣಾಮ ಮಹಿಳೆ ಮೂರ್ಛೆ ಹೋಗಿದ್ದಾರೆ. ಮಹಿಳೆ ಮೃತಳಾಗಿದ್ದಾರೆಂದು ಭ್ರಮಿಸಿ ಆಕೆಯು ಧರಿಸಿದ್ದ ಕಿವಿಯ ಓಲೆ, ಕೈಯಲ್ಲಿದ್ದ ಬಳೆ ಮತ್ತು ಕೊರಳಿನ ಸರ ಸೇರಿದಂತೆ ಒಟ್ಟು 54 ಗ್ರಾಂ ಚಿನ್ನಾಭರಣ ಕಸಿದು ಬಾಲಕ ಪರಾರಿಯಾಗಿದ್ದ. ಕೆಲ ಸಮಯದ ನಂತರ ಎಚ್ಚರಗೊಂಡ ಸರ್ವಮಂಗಳ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ದಾರಿ ಹೋಕರು ಆಕೆಯನ್ನು ರಕ್ಷಿಸಿದಾರೆ. ಆ ವೇಳೆ ಸರ್ವಮಂಗಳ ತನಗಾದ ಕೃತ್ಯಕ್ಕೆ ತಮ್ಮ ಗ್ರಾಮದವನಾದ ಆ ಬಾಲಕನೇ ಕಾರಣ ಎಂದು ಬಾಲಕನ ಹೆಸರನ್ನು ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಲಾಯಿತು. ಬಂಧನ: ತಾನು ಹಲ್ಲೆ ಮಾಡಿದ್ದ ಮಹಿಳೆ ಸತ್ತು ಹೋಗಿದ್ದಾಳೆಂದು ಭ್ರಮಿಸಿದ್ದ ಬಾಲಕ ಮಹಿಳೆಯಿಂದ ಕದ್ದಿದ್ದ ಆಭರಣಗಳನ್ನು ತಮ್ಮ ಕುಟುಂಬಕ್ಕೆ ಸೇರಿದ್ದ ಕೈತೋಟದಲ್ಲಿದ್ದ ಹುಲ್ಲಿನ ಬಣವೆಯಲ್ಲಿ ಮುಚ್ಚಿಟ್ಟು, ಗ್ರಾಮದಲ್ಲೆ ಇದ್ದನೆಂದು ಹೇಳಲಾಗಿದೆ. ದೂರು ಸ್ವೀಕರಿಸಿದ ಪೊಲೀಸರು ಸ್ಥಳ ಮಹಜರು ನಡೆಸಿ ಘಟನೆ ಆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಾಲಕನನ್ನು ಬಂಧಿಸಿ ಆತನಿಂದ ಕಳವು ಮಾಡಲಾಗಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ. ತೀವ್ರವಾಗಿ ಹಲ್ಲೆಗೊಳಗಾಗಿದ್ದ ಸರ್ವಮಂಗಳರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದುದರಿಂದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪಿಎಸ್ಐ ಮೂರ್ತಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

30 ಟಿವಿಕೆ 4 – ತುರುವೇಕೆರೆ ತಾಲೂಕು ಕಣತೂರಿನಲ್ಲಿ ಬಾಲಕನಿಂದ ಹಲ್ಲೆಗೊಳಗಾದ ಸರ್ವಮಂಗಳರನ್ನು ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುತ್ತಿರುವುದು.