ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದ 8ನೇ ತರಗತಿ ಓದುತ್ತಿದ್ದ 13 ವರ್ಷದ ಅಪ್ರಾಪ್ತ ಆನ್‌ಲೈನ್ ಫ್ರೀ ಫೈರ್ ಗೇಮ್ ಆಟಕ್ಕೆ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ.
- ಬಸವ ಇಂಟರ್ ನ್ಯಾಷನಲ್ ಶಾಲೆ 8ನೇ ತರಗತಿಯ ಟಿ.ಆರ್.ಮನೋಜ್ ನೇಣಿಗೆ ಶರಣು
- - -- ಗೇಮ್‌ನ ಐಡಿ ಕೊಡಿಸುವ ವಿಚಾರ ಮುಂದಿಟ್ಟು 4.11 ಲಕ್ಷ ಪಡೆದ ಐವರು ಗೆಳೆಯರು
- ಹಣ ಕೊಡದಿದ್ದರೆ ನಿನ್ನ ಮನೆಯವರಿಗೆ ಗೇಮ್ ವಿಷಯ ತಿಳಿಸುತ್ತೇವೆ ಎಂದು ಮನೋಜಗೆ ಹಲ್ಲೆ- ಚನ್ನಗಿರಿ ಪೊಲೀಸ್ ಠಾಣೆಗೆ ಪೋಷಕರ ದೂರು । ಆನ್‌ಲೈನ್ ಗೇಮ್‌ಗೆ ಕಡಿವಾಣಕ್ಕೆ ಗ್ರಾಮಸ್ಥರ ಆಗ್ರಹ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಪಾಂಡೋಮಟ್ಟಿ ಗ್ರಾಮದ 8ನೇ ತರಗತಿ ಓದುತ್ತಿದ್ದ 13 ವರ್ಷದ ಅಪ್ರಾಪ್ತ ಆನ್‌ಲೈನ್ ಫ್ರೀ ಫೈರ್ ಗೇಮ್ ಆಟಕ್ಕೆ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ.ಪಟ್ಟಣದ ಬಸವ ಇಂಟರ್ ನ್ಯಾಷನಲ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ, ಪಾಂಡೋಮಟ್ಟಿ ಗ್ರಾಮದ ಟಿ.ಆರ್.ಮನೋಜ್ (13) ಆತ್ಮಹತ್ಯೆಗೆ ಶರಣಾದ ಬಾಲಕ.
ಮನೋಜ್‌ಗೆ ಮೊಬೈಲ್ ಮೂಲಕ ಫ್ರೀ ಫೈರ್ ಆಟ ಆಡುವ ವ್ಯಾಮೋಹವಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಅಪ್ರಾಪ್ತ ಐವರು ಗೆಳೆಯ ನಿನಗೆ ಫ್ರೀ ಫೈರ್ ಗೇಮ್ ಆಡಲು ಉತ್ತಮ ಗುಣಮಟ್ಟದ ಐಡಿ ಕೊಡಿಸುತ್ತೇವೆ ಎಂದು ನಂಬಿಸಿ ₹6 ಸಾವಿರವನ್ನು ಪಡೆದಿದ್ದಾರೆ. ಇದಾದ ನಂತರ ಆಟವು ಮನೆಯವರಿಗೆ ತಿಳಿಯದಂತೆ ಮಾಡಲು ಗೇಮ್‌ನ ಐಡಿ ಲಾಕ್-ಅನ್‌ಲಾಕ್ ಮಾಡುವ ತಂತ್ರದ ಬಗ್ಗೆ ಬೇರೆ ಐಡಿ ಕೊಡುತ್ತೇವೆ ಎಂದು ಹೇಳಿ ಮನೋಜನಿಂದ ಹಂತ ಹಂತವಾಗಿ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆಯನ್ನೂ ಹಾಕಿದ್ದಾರೆ. ಹಣ ಕೊಡದಿದ್ದರೆ ನಿಮ್ಮ ಮನೆಯವರಿಗೆ ಈ ವಿಷಯ ತಿಳಿಸುತ್ತೇವೆ ಎಂದು ಮನೋಜಗೆ ದೈಹಿಕ ಮತ್ತು ಮಾನಸಿಕ ಹಿಂಸೆ, ಹಲ್ಲೆ ನಡೆಸಿದ್ದಾರೆ.ಬಳಿಕ ಟಿ.ಆರ್.ಮನೋಜ್ ತನ್ನ ಮನೆಯಲ್ಲಿದ್ದ ₹4.11 ಲಕ್ಷವನ್ನು ಕಂತು ಕಂತಾಗಿ ಕೊಂಡೊಯ್ದು ಬೆದರಿಕೆ ಹಾಕಿದ್ದ ಬಾಲಕರಿಗೆ ನೀಡಿದ್ದಾನೆ. ಈ ವಿಷಯ ಬೆಳಕಿಗೆ ಬಂದ ನಂತರ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ಬಾಲಕ ಮನೋಜ್, ಅಕ್ಟೋಬರ್ 7ರ ಬುಧವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆಗೆ ಸಂಬಂಧಪಟ್ಟಂತೆ ಮನೋಜನ ಪೋಷಕರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ ಮೇರೆಗೆ ತನಿಖೆ ಮುಂದುವರಿದಿದೆ. ಮೃತ ಮನೋಜ್ ಅಂತ್ಯಕ್ರಿಯೆ ಗುರುವಾರ ನಡೆಸಲಾಯಿತು.ಆನ್‌ಲೈನ್ ಗೇಮ್‌ನಿಂದ ಬಾಲಕ ಮನೋಜ್ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಪಾಂಡೋಮಟ್ಟಿ ಗ್ರಾಮದಲ್ಲಿ ಆಘಾತ, ಆತಂಕ ತಂದಿದೆ. ಫ್ರೀ ಫೈಜ್ ಗೇಜ್ ಹಾವಳಿಗೆ ಕೂಡಲೇ ಪೊಲೀಸರು ಕಡಿವಾಣ ಹಾಕಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
- - --8ಕೆಸಿಎನ್ಜಿ4: ಟಿ.ಆರ್.ಮನೋಜ್