ಕೊಡಗಿನ ಅಪ್ರಾಪ್ತ ವಯಸ್ಕ ಬಾಲಕಿ ಕೊಲೆ: ಗೃಹ ಸಚಿವ ಸಾಂತ್ವನ

| Published : May 17 2024, 12:33 AM IST

ಸಾರಾಂಶ

ಸೋಮವಾರಪೇಟೆ ಸಮೀಪದ ಕುಂಬಾರಗಡಿಗೆ ಗ್ರಾಮದಲ್ಲಿ ಅಪ್ರಾಪ್ತೆ ಮೀನಾ ಎಂಬ ಬಾಲಕಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಕುಟುಂಬದವರನ್ನು ಗುರುವಾರ ಭೇಟಿ ಮಾಡಿ ಸಾಂತ್ವನ ಹೇಳಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಶಾಸಕ ಎಚ್‌.ಡಿ.ರೇವಣ್ಣ ಹಾಗೂ ಹಾಗೂ ಪೆನ್‍ಡ್ರೈವ್ ಪ್ರಕರಣದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಉತ್ತರಿಸಲು ನಿರಾಕರಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕುಂಬಾರಗಡಿಗೆ ಗ್ರಾಮದಲ್ಲಿ ಅಪ್ರಾಪ್ತೆ ಮೀನಾ ಎಂಬ ಬಾಲಕಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಕುಟುಂಬದವರನ್ನು ಗುರುವಾರ ಭೇಟಿ ಮಾಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿಗೆ ಬಂದಿರುವುದು ಅಪ್ರಾಪ್ತೆಯ ಕೊಲೆಯಿಂದ ನೊಂದ ಕುಟುಂಬದವರಿಗೆ ಸಾಂತ್ವನ ಹೇಳಲು. ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಹೊರನಡೆದು ಗ್ರಾಮಸ್ಥರೊಂದಿಗೆ ಚರ್ಚಿಸಲು ಮುಂದಾದರು.

ಶಾಸಕ ಎಚ್‌.ಡಿ.ರೇವಣ್ಣ ಹಾಗೂ ಹಾಗೂ ಪೆನ್‍ಡ್ರೈವ್ ಪ್ರಕರಣದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಗೃಹ ಸಚಿವರ ಡಾ.ಜಿ.ಪರಮೇಶ್ವರ್‌ ಉತ್ತರಿಸಲು ನಿರಾಕರಿಸಿದರು.

ಪ್ಲಾಸ್ಟಿಕ್ ಹೊದಿಕೆಯ ಗುಡಿಸಿಲಿನ ಒಳಗೆ ಮೃತಳ ತಂದೆ, ತಾಯಿ, ಸಹೋದರ, ಸಹೋದರಿಯೊಂದಿಗೆ ಮಾತಾನಾಡಿದ ಗೃಹಸಚಿವರು ಅವರ ಸಂಕಷ್ಟವನ್ನು ಕೇಳಿ ಮರುಗಿದರು.

ಶಾಸಕ ಡಾ.ಮಂತರ್ ಗೌಡ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್, ಡಿಜಿಪಿ ಅಮಿತ್‍ಸಿಂಗ್, ಎಸ್.ಪಿ.ರಾಮರಾಜನ್, ಡಿವೈಎಸ್‍ಪಿ ಗಂಗಾಧರಪ್ಪ, ಡಿಸಿಸಿ ಮಹಿಳಾ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ವಿ.ಪಿ.ಶಶಿಧರ್, ಪ್ರಮುಖರಾದ ಮನು ಮೇದಪ್ಪ, ಮಾದಪುರ ಹರೀಶ್ ಕೆ.ಎ.ಯಾಕುಬ್, ಶೀಲಾ ಡಿಸೋಜ, ಎಚ್.ಆರ್.ಸುರೇಶ್, ಕೆ.ಎ.ಆದಂ, ಮತ್ತಿತರರು ಇದ್ದರು,

ಘಟನೆ ಹಿನ್ನೆಲೆ:

ಮೇ. 9ರಂದು ಕುಂಬಾರಗಡಿಗೆ ಗ್ರಾಮದ ಕೃಷಿಕ ಸುಬ್ರಮಣಿ ಎಂಬವರ ಮಗಳು ಮೀನಾ(16) ಹತ್ಯೆಯಾಗಿತ್ತು. ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡವನಿಂದ ಭೀಕರ ಹತ್ಯೆಯಾಗಿದ್ದಳು. ಈಕೆ ಸೂರ್ಲಬ್ಬಿ ಸರ್ಕಾರಿ ಶಾಲೆಯಲ್ಲಿ ಮೀನಾ ಹತ್ತನೆ ತರಗತಿ ವ್ಯಾಸಂಗ ಮಾಡಿದ್ದು, ಓರ್ವ ವಿದ್ಯಾರ್ಥಿನಿಯಾಗಿದ್ದಳು.

ಮೇ 9ರಂದು ಫಲಿತಾಂಶ ಪ್ರಕಟವಾಗಿದ್ದು ಉತ್ತೀರ್ಣವಾಗುವ ಮೂಲಕ ಶಾಲೆಗೂ ಶೇ.100ರ ಫಲಿತಾಂಶ ದೊರೆತ್ತಿತ್ತು. ಅದೇ ದಿನ ಪ್ರಕಾಶ್ ಎಂಬ 34 ವರ್ಷ ಪ್ರಾಯದ ಯುವಕನೊಂದಿಗೆ ಮನೆಯಲ್ಲಿ ಸರಳವಾಗಿ ನಿಶ್ಚಿತಾರ್ಥ ನೇರವೇರಿ ಉಂಗುರು ಬದಲಾಯಿಸಿಕೊಂಡಿದ್ದರು. ಮಧ್ಯಾಹ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ಸಿಕ್ಕಿ ಮೀನಾಳ ಮನೆಗೆ ಅಧಿಕಾರಿಗಳು ಆಗಮಿಸಿ, ಎರಡು ಕಡೆಯವರಿಗೆ ತಿಳಿ ಹೇಳಿದರು. ಅಪ್ರಾಪ್ತೆಯೊಂದಿಗೆ ಮದುವೆ ನಿಷಿದ್ಧ ಎಂದು ಹೇಳಿದರು. ಬಾಲಕಿಗೆ 18 ವರ್ಷ ವಯಸ್ಸು ಆಗುವವರೆ ಮದುವೆಯಾಗುವಂತಿಲ್ಲ ಹೇಳಿದರು.

ಅಧಿಕಾರಿಗಳಿಗೆ ಮೀನಾ ಕುಟುಂಬದವರೆ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ ಪ್ರಕಾಶ್‌, ಮದ್ಯಪಾನ ಮಾಡಿ ಜಗಳ ತೆಗೆದು ಮೀನಾ ತಾಯಿ ಕೈಗೆ ಕತ್ತಿಯಿಂದ ಕಡಿದು, ಮೀನಾ 500 ಮೀಟರ್ ದೂರಕ್ಕೆ ಎಳೆದೊಯ್ದು ರುಂಡವನ್ನು ಕತ್ತರಿಸಿಕೊಂಡು ನಾಪತ್ತೆಯಾಗಿದ್ದ. ನಂತರ ಮೂರು ದಿನಗಳ ನಂತರ ಪೊಲೀಸರಿಗೆ ಶರಣಾಗಿದ್ದ.