ಸಾರಾಂಶ
ಬೆಂಗಳೂರು : ರಾಜ್ಯಾದ್ಯಂತ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಣೆಕಟ್ಟುಗಳು ಭರ್ತಿಯಾಗಿದ್ದು, ಇಲಾಖೆಯ ವ್ಯಾಪ್ತಿಯ ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳನ್ನು ತುಂಬಿಸಬೇಕು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಸೂಚನೆ ನೀಡಿದ್ದಾರೆ.
ರಾಜ್ಯದ ಶೇ.67ರಷ್ಟು ಕೆರೆಗಳಲ್ಲಿ ಅರ್ಧದಷ್ಟೂ ನೀರಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಯ ಕೆರೆಗಳ ಸ್ಥಿತಿಗತಿ ಕುರಿತು ‘ಕನ್ನಡಪ್ರಭ’ ಬುಧವಾರವಷ್ಟೇ ವರದಿ ಪ್ರಕಟಿಸಿತ್ತು.ಬುಧವಾರ ವಿಕಾಸಸೌಧದಲ್ಲಿ ಕೇಂದ್ರ ಅನುದಾನ ಸಂಬಂಧ ಕೇಂದ್ರ ಜಲ ಆಯೋಗ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಅಣೆಕಟ್ಟುಗಳು ತುಂಬಿವೆ.
ಆದರೂ ಕೆಲವು ಕೆರೆಗಳಲ್ಲಿ ಹೆಚ್ಚಿನ ನೀರಿನ ಸಂಗ್ರಹವಾಗದಿರುವ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ. ಅಣೆಕಟ್ಟುಗಳಲ್ಲಿ ನೀರಿನ ಲಭ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಕೆರೆ ತುಂಬಿಸುವ ಕಾರ್ಯವನ್ನು ಮರುಚಾಲನೆಗೊಳಿಸಬೇಕು. ಎಲ್ಲಾ ಕೆರೆಗಳು ತುಂಬುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಹಲವು ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಕಾಲಕ್ರಮೇಣ ಹಲವು ನಿಷ್ಕ್ರಿಯಗೊಂಡಿವೆ. ಈ ಹಿನ್ನೆಲೆಯಲ್ಲಿ ನಿಷ್ಕ್ರಿಯಗೊಂಡಿರುವ ಯೋಜನೆಗಳ ಬಗ್ಗೆ ವರದಿ ನೀಡಬೇಕು ಮತ್ತು ಇವುಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
ಅಲ್ಲದೇ, ಅದಕ್ಕೆ ತಗಲುವ ವೆಚ್ಚದ ಬಗ್ಗೆ ಮಾಹಿತಿ ನೀಡಬೇಕು ಎಂದರು.ಇದೇ ವೇಳೆ ಪಿಎಂಕೆಎಸ್‌ವೈ ಯೋಜನೆಯಡಿಯಲ್ಲಿ ಮಂಜೂರಾಗಿರುವ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ ಸಚಿವರು, ಅಧಿಕಾರಿಗಳಿಂದ ಸಮಗ್ರ ಮಾಹಿತಿಯನ್ನು ಪಡೆದುಕೊಂಡು, ಅಗತ್ಯ ಕ್ರಿಯಾಯೋಜನೆಗಳನ್ನು ಸಲ್ಲಿಸುವಂತೆ ತಿಳಿಸಿದರು.