ಸಾರಾಂಶ
ಎನ್‌ಎಸ್‌ಎಸ್ ಶಿಬಿರದಲ್ಲಿ ಪವಾಡ ಬಯಲು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಗಣ್ಯರು ಪಾಲ್ಗೊಂಡರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪದವಿ ಪೂರ್ವ ಶಿಕ್ಷಣ ಇಲಾಖೆ, ಮಾದಾಪುರ ಡಿ.ಚನ್ನಮ್ಮ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಕಾಲೇಜಿನಲ್ಲಿ ನಡೆಯುತ್ತಿರುವ ಎನ್‌ಎಸ್‌ಎಸ್ ಶಿಬಿರದಲ್ಲಿ ಪವಾಡ ಬಯಲು ಉಪನ್ಯಾಸ ಕಾರ್ಯಕ್ರಮ ನಡೆಯಿತು.ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕನ್ನಡ ಭಾಷಾ ಅಧ್ಯಾಪಕ ಹಾಗು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಸದಸ್ಯ ಎಂ.ಎನ್.ವೆಂಕಟನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪವಾಡಗಳ ಹೆಸರಿನಲ್ಲೂ ಮೋಸ ವಂಚನೆಗಳು ದಿನನಿತ್ಯ ನಡೆಯುತ್ತಿದೆ. ಪವಾಡಗಳ ಹಿಂದಿರುವ ಸತ್ಯ ಹಾಗೂ ವೈಜ್ಞಾನಿಕ ಕಾರಣಗಳನ್ನು ವಿದ್ಯಾರ್ಥಿಗಳು ತಿಳಿಯುವ ಪ್ರಯತ್ನ ಮಾಡಬೇಕಿದೆ. ವಿದ್ಯಾರ್ಥಿಗಳು ಮೊದಲು ಅನ್ಯಾಯ, ಮೋಸ, ವಂಚನೆಗಳನ್ನು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಶೂನ್ಯದಿಂದ ಬೂದಿ, ನೀರು ಸೃಷ್ಟಿ ಮತ್ತಿತರ ಪವಾಡಗಳ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ತಮ್ಮ ಬಾಯಿಯಲ್ಲಿ ಮತ್ತು ಕೈಯಲ್ಲಿ ಕರ್ಪೂರ ಇಟ್ಟುಕೊಂಡು ಬೆಂಕಿ ಹಚ್ಚಿ ಉರಿಯುವುದನ್ನು ತೋರಿಸಿದರು. ಕೈ ಗಳಿಗೆ ಬಣ್ಣ ಹಚ್ಚಿ ಮೋಸ ಮಾಡುವ ಹಿಂದಿರುವ ಸತ್ಯವನ್ನು ವಿದ್ಯಾರ್ಥಿಗಳಿಗೆ ವೆಂಕಟನಾಯಕ್ ತಿಳಿಸಿದರು.ವಿಜ್ಞಾನ ಕಾರ್ಯಕ್ರಮಗಳ ಸಂಘಟಕ ಟಿ.ಜಿ. ಪ್ರೇಮಕುಮಾರ್, ‘ವೈಜ್ಞಾನಿಕ ಮನೋಭಾವ ಬೆಳವಣಿಗೆ’ ಕುರಿತು ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಸಿ.ಜಿ.ಮಂದಪ್ಪ ಮಾತನಾಡಿ, ಯಾವುದೇ ಸಮಸ್ಯೆಯನ್ನು ನಾವು ವೈಜ್ಞಾನಿಕವಾಗಿ ಚಿಂತನೆ ಮಾಡಿದರೆ. ಅದಕ್ಕೆ ಪರಿಹಾರವನ್ನು ಸುಲಭವಾಗಿ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಎನ್.ಎನ್. ಮನೋಹರ್, ಹರದೂರು ಗ್ರಾಮ ಪಂಚಾಯಿತಿ ಸದಸ್ಯೆ ಉಷಾ, ಉಪನ್ಯಾಸಕ ಕೆ.ವಿ. ರಾಜಸುಂದರಂ ಇದ್ದರು.