ಮಿರ್ಜಾನ: ವಿವಾದಿತ ಜಾಗದಲ್ಲಿ ದಫನಗೆ ವಿರೋಧ

| Published : Dec 08 2023, 01:45 AM IST

ಸಾರಾಂಶ

ಸ್ಮಶಾನಕ್ಕೆ ಮಂಜೂರಾದ ಸ್ಥಳವಿದ್ದರೆ ಮಂಜೂರಿ ಫೈಲ್ ತರಿಸಿ, ಎಷ್ಟು ಸ್ಥಳವಿದೆ ಎಂಬುದನ್ನು ಮೂರು ದಿನದಲ್ಲಿ ಸರ್ವೇ ಮಾಡಿಸಿ ಗಡಿ ಗುರುತಿಸಿಕೊಡುವುದಾಗಿ ತಹಸೀಲ್ದಾರ್‌ ಹೇಳಿದ್ದಾರೆ.

ಕುಮಟಾ:

ಮುಸ್ಲಿಂ ಸಮುದಾಯದವರು ತಮಗೆ ನಿಗದಿತ ಜಾಗವನ್ನು ಮೀರಿ ವಿವಾದಿತ ಜಾಗದಲ್ಲಿ ಬೇಕಾಬಿಟ್ಟಿ ದಫನ ಮಾಡುವುದನ್ನು ವಿರೋಧಿಸಿ ಮಿರ್ಜಾನದಲ್ಲಿ ಗ್ರಾಪಂ ಸದಸ್ಯ ಗಣೇಶ ಅಂಬಿಗ ಹಾಗೂ ಇತರರು ಪ್ರತಿಭಟಿಸಿದ ಘಟನೆ ನಡೆದಿದೆ.ಈ ವೇಳೆ ಎರಡು ಕೋಮಿನ ನಡುವೆ ಅನಗತ್ಯ ಸಂಘರ್ಷದ ಸಾಧ್ಯತೆಯನ್ನು ಮನಗಂಡು ತಹಸೀಲ್ದಾರ್‌ ಸತೀಶ ಗೌಡ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಗಣೇಶ ಅಂಬಿಗ ತಹಸೀಲ್ದಾರ್‌ ಅವರಿಗೆ ನೈಜಸ್ಥಿತಿ ವಿವರಿಸಿ, ಇಲ್ಲಿನ ಸರ್ವೇ ನಂ. ೨೪೯, ೨೩೮ರಲ್ಲಿ ೧೯೩೨ನೇ ಸಾಲಿನಿಂದಲೂ ಪಹಣಿ ಪತ್ರಿಕೆಯಲ್ಲಿ ೯ನೇ ಕಾಲಂನಲ್ಲಿ ಸರ್ಕಾರದ ಆಸ್ತಿ ಎಂದಿದ್ದು, ಇತರ ಹಕ್ಕುಗಳ ಕಾಲಂನಲ್ಲಿ ಗೋರಕ್ಷಣೆ ಸ್ಥಳವೆಂದು ನಮೂದಾಗಿದೆ. ಕೆಲ ವರ್ಷಗಳ ಹಿಂದೆ ಮುಸ್ಲಿಂ ಸಮುದಾಯದ ಉಪ ತಹಸೀಲ್ದಾರ್‌ ಹಾಗೂ ಕಂದಾಯ ನಿರೀಕ್ಷಕರು ಪಹಣಿ ಪತ್ರಿಕೆಯಲ್ಲಿ ಖಬರಸ್ತಾನ್ ಎಂದು ಎಂಟ್ರಿ ಆಗುವಲ್ಲಿ ಗೋರಸ್ತಾನ್ ಅಂತ ಎಂಟ್ರಿ ಆಗಿದೆ ಎಂದು ತಿದ್ದುಪಡಿ ಮಾಡಿದ್ದಾರೆ. ಈ ವಿಷಯ ನಮ್ಮ ಗಮನಕ್ಕೆ ಬರುತ್ತಲೇ ಪ್ರಕರಣ ದಾಖಲಿಸಿದ್ದು ಸಂಪೂರ್ಣ ವಿವಾದ ಈಗ ಡಿಸಿಯವರ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ. ಮಿರ್ಜಾನದ ಈ ಭಾಗದಲ್ಲಿ ೪೦೦-೫೦೦ ಕುಟುಂಬ ಇರುವ ಹಿಂದೂ ಸಮುದಾಯಕ್ಕೆ ರುದ್ರಭೂಮಿಗಾಗಿ ಕೇವಲ ೨೧ ಗುಂಟೆ ಅರಣ್ಯ ಭೂಮಿ ಮಂಜೂರಾಗಿದೆ, ಕೇವಲ ೧೫೦ ಕುಟುಂಬ ಇರುವ ಮುಸ್ಲಿಂಮರು ೧೩ ಎಕರೆ ೨೫ ಗುಂಟೆ ಸ್ಥಳ ತಮ್ಮದ್ದೆನ್ನುತ್ತಾರೆ. ಎಲ್ಲೆಲ್ಲಿಂದಲೋ ಮೃತರ ಹೆಣ ತಂದು ಸಮಾಧಿ ಮಾಡುತ್ತಿದ್ದಾರೆ. ಇದಕ್ಕೆ ತಮ್ಮ ತೀವ್ರ ವಿರೋಧವಿದ್ದು ಅವರ ಖಬರಸ್ತಾನ ಸ್ಥಳ ಬಿಟ್ಟು ಹೆಚ್ಚಿಗೆ ೧ ಗುಂಟೆ ಸ್ಥಳ ಅವರ ತಾಬಾ ಕೊಟ್ಟರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.ಇದಕ್ಕೆ ಪ್ರತಿಕ್ರಿಯಿಸಿರುವ ಜಮಾತೆ ಮುಸ್ಲಂ ಕಮಿಟಿ ಅಧ್ಯಕ್ಷ ಇಬ್ರಾಹಿಂ ಬದ್ರುದಿನ್ ಶೇಖ, ನಮ್ಮ ಸ್ಮಶಾನದಲ್ಲಿ ಘೋರಿ ತೆಗೆಯುತ್ತಿರುವಾಗ ಕೆಲವರು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡಿದ್ದೇವೆ. ಖಬರಸ್ತಾನ್‌ವನ್ನು ಘೋರಸ್ಥಾನ್ ಎಂದು ನಮೂದಿಸಿರುವುದೇ ಸಮಸ್ಯೆಗೆ ಕಾರಣವಾಗಿತ್ತು ಎಂದರು. ಎರಡು ಸಮುದಾಯದ್ಳ ಮಾತು ಆಲಿಸಿ ದಾಖಲೆ ಪತ್ರ ಪರಿಶೀಲಿಸಿದ ತಹಸೀಲ್ದಾರ್‌, ಸ್ಮಶಾನಕ್ಕೆ ಮಂಜೂರಾದ ಸ್ಥಳವಿದ್ದರೆ ಮಂಜೂರಿ ಫೈಲ್ ತರಿಸಿ, ಎಷ್ಟು ಸ್ಥಳವಿದೆ ಎಂಬುದನ್ನು ಮೂರು ದಿನದಲ್ಲಿ ಸರ್ವೇ ಮಾಡಿಸಿ ಗಡಿ ಗುರುತಿಸಿಕೊಡುವುದಾಗಿ ಹೇಳಿದರು. ಇದಕ್ಕೆ ಎರಡು ಸಮುದಾಯದವರು ಒಪ್ಪಿಗೆ ನೀಡಿದರು.ಈ ವೇಳೆ ಪಿಎಸ್‌ಐ ಸಂಪತ ಕುಮಾರ ಹಾಗೂ ಸಿಬ್ಬಂದಿ ಬಂದೋಬಸ್ತ್‌ ಒದಗಿಸಿದ್ದರು.