ಸಾರಾಂಶ
ಗಡಿಭಾಗದಲ್ಲಿದ್ದುಕೊಂಡು ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಮಿರ್ಜಿ ಅಣ್ಣಾರಾಯರ ಹೆಸರಿನಲ್ಲಿ ಟ್ರಸ್ಟ್ ರಚನೆ ಆಗಬೇಕು ಎಂದು ಧಾರವಾಡದ ಜೆಎಸ್‌ಎಸ್‌ನ ಡಾ.ಡಿ.ವೀರೇಂದ್ರ ಹೆಗ್ಗಡೆ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಜಿನದತ್ತ ಹಡಗಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಗಡಿಭಾಗದಲ್ಲಿದ್ದುಕೊಂಡು ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಮಿರ್ಜಿ ಅಣ್ಣಾರಾಯರ ಹೆಸರಿನಲ್ಲಿ ಟ್ರಸ್ಟ್ ರಚನೆ ಆಗಬೇಕು ಎಂದು ಧಾರವಾಡದ ಜೆಎಸ್‌ಎಸ್‌ನ ಡಾ.ಡಿ.ವೀರೇಂದ್ರ ಹೆಗ್ಗಡೆ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಜಿನದತ್ತ ಹಡಗಲಿ ಹೇಳಿದರು.ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳದಲ್ಲಿ ಮಿರ್ಜಿ ಅಣ್ಣಾರಾಯ ಸ್ಮಾರಕ ಸಾಹಿತ್ಯ ಪ್ರತಿಷ್ಠಾನದಿಂದ ಇತ್ತೀಚೆಗೆ ಜರುಗಿದ ಮಿರ್ಜಿ ಅವರ 49ನೇ ಪುಣ್ಯಸ್ಮರಣೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಡಿ ಭಾಗದಲ್ಲಿಯೇ ಇದ್ದುಕೊಂಡು ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡುವ ಮೂಲಕ ಈ ಭಾಗದಲ್ಲಿ ಕನ್ನಡದ ಬೆಳವಣಿಗೆಗೆ ತಮ್ಮದೆಯಾದ ಛಾಪನ್ನು ಮೂಡಿಸಿದ್ದಾರೆ ಎಂದರು.
ಮಿರ್ಜಿ ಅಣ್ಣಾರಾಯರು ಸರಿಸುಮಾರು 57 ಕೃತಿಗಳನ್ನು ರಚಿಸಿದ್ದಾರೆ. ಮಾತ್ರವಲ್ಲ, ಅವರು ರಚಿಸಿದ ಕೃತಿಗಳ ಭಾಗದಿಂದ ಆಯ್ಕೆ ಮಾಡಿಕೊಂಡು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಠ್ಯವಾಗಿವೆ. ಹೀಗಾಗಿ ರಾಜ್ಯ ಸರ್ಕಾರವು ಮಿರ್ಜಿ ಅಣ್ಣಾರಾಯರ ಹೆಸರಿನಲ್ಲಿ ಟ್ರಸ್ಟ್ ರಚನೆ ಮಾಡಬೇಕು. ಜತೆಗೆ ಈ ಟ್ರಸ್ಟ್ ಮೂಲಕ ಗಡಿ ಭಾಗಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ದತ್ತಿ ಉಪನ್ಯಾಸಗಳನ್ನು ಕೂಡ ನಡೆಸಬೇಕು ಎಂದು ಹೇಳಿದರು.ಕೇವಲ ಶಿಕ್ಷಕರಾಗಿದ್ದುಕೊಂಡು ಸಾಹಿತ್ಯದಲ್ಲಿ ಉತ್ತಮ ಕಾಣಿಕೆ ನೀಡಿರುವ ಮಿರ್ಜಿ ಅವರಿಗೆ ಸರ್ಕಾರದಿಂದ ಸಲ್ಲಬೇಕಾದ ಗೌರವ ಇನ್ನೂ ಸಿಕ್ಕಿಲ್ಲ. ಹೀಗಾಗಿ ಸರ್ಕಾರವು ಈ ಕೂಡಲೇ ಮಿರ್ಜಿ ಅವರ ಹೆಸರಲ್ಲಿ ಟ್ರಸ್ಟ್ ರಚಿಸಬೇಕು. ಅವರಿಗೆ ಗೌರವ ತರುವ ಕೆಲಸವನ್ನು ಮಾಡಬೇಕು ಎಂದರು.
ಮಿರ್ಜಿ ಅಣ್ಣಾರಾಯ ಸ್ಮಾರಕ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಡಾ.ಅಶೋಕ ಪಾಟೀಲ, ಧಾರವಾಡ ಜೈನ ಮಿಲನದ ಅಧ್ಯಕ್ಷರಾದ ಸುಜಾತಾ ಜಿ. ಹಡಗಲಿ ಮಾತನಾಡಿದರು. ಆರಂಭದಲ್ಲಿ ಮಿರ್ಜಿ ಅಣ್ಣಾರಾಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಅಲ್ಲದೆ, ಮಿರ್ಜಿ ಅಣ್ಣಾರಾಯರ ಸಾಹಿತ್ಯದ ಕುರಿತಾಗಿ ಪ್ರಾಥಮಿಕ, ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಜಿನ್ನಮ್ಮ ನಾಮನಿ, ಪಿ.ಜಿ.ಕೋರೆ, ಸುಜಾತಾ ಯಂದಗೌಡರ, ಶಾಂತಿನಾಥ ಮಗದುಮ್ಮ, ಭರತ ನಾಂದ್ರೆ, ಮಹಾವೀರ ಗಣಿ, ಗಿರಿಗೌಡ ಪಾಟೀಲ ಸೇರಿದಂತೆ ಇತರರು ಪಾಲ್ಗೊಂಡಿದ್ದರು.