ಶಿಂಷಾ ಸಹಕಾರ ಬ್ಯಾಂಕಿನಲ್ಲಿ ಬಹುಕೋಟಿ ಹಣ ದುರ್ಬಳಕೆ

| Published : Oct 06 2024, 01:30 AM IST

ಸಾರಾಂಶ

ವ್ಯವಸ್ಥಾಪಕ ಉಮಾಶಂಕರ್ ತಮ್ಮ ಹಾಗೂ ಕುಟುಂಬದ ಹೆಸರಿನಲ್ಲಿ ಗಮನಕ್ಕೆ ತರದೆ ಸಾಲ ಪಡೆದು ಆಧಾರವಾಗಿ ನೀಡಿದ್ದ ಸ್ಥಿರಾಸ್ತಿಯನ್ನು ಸಾಲ ಬಾಕಿ ಇರುವಾಗಲೇ ಸಾಲ ಪಾವತಿಯಾಗಿದೆ ಎಂದು ಸಬ್ ರಿಜಿಸ್ಟರ್ ಅವರಿಗೆ ಸುಳ್ಳು ಮಾಹಿತಿ ನೀಡಿ, ಆಸ್ತಿ ಗಳಿಸಿ 26.63 ಲಕ್ಷ ರು.ಗಳನ್ನು ವಂಚನೆ ಮಾಡಿದಾರೆ ಎಂದು ಆಡಳಿತ ದೂರಿನಲ್ಲಿ ಆರೋಪಿಸಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಶಿಂಷಾ ಸಹಕಾರ ಬ್ಯಾಂಕಿನ ಸಾಲ ವಿತರಣೆಯಲ್ಲಿ ನಡೆದಿರುವ ಬಹುಕೋಟಿ ಹಣ ದುರ್ಬಳಕೆ ಹಗರಣ ಸಂಬಂಧ ಜಿಲ್ಲಾ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ನಾರಾಯಣಗೌಡ, ವ್ಯವಸ್ಥಾಪಕ ವಿ.ಉಮಾಶಂಕರ್ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರ ಆದೇಶದ ಮೇರೆಗೆ ಸೈಬರ್ ಕ್ರೈಂ, ಆರ್ಥಿಕ ಟ್ರಸ್ಟ್ ವಿಭಾಗದ ಪೊಲೀಸರು ವಶಕ್ಕೆ ತೆಗೆದುಕೊಂಡು ಹಗರಣ ಕುರಿತಂತೆ ವಿಚಾರಣೆ ನಡೆಸುತ್ತಿದ್ದಾರೆ.

ಸಿಇಒ ಲಕ್ಷ್ಮೀನಾರಾಯಣಗೌಡ, ವ್ಯವಸ್ಥಾಪಕ ಉಮಾಶಂಕರ್, ಕಿರಿಯ ಸಹಾಯಕ ಟಿ.ಗೋಪಿ, ಅಕೌಂಟೆಂಟ್ ಬಿ.ಎನ್. ಕುಮಾರ್ ಎಂಬುವರು ಶಾಮೀಲಾಗಿ ಆಡಳಿತ ಮಂಡಳಿ ಅನುಮೋದನೆ ಇಲ್ಲದೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸ್ಥಿರಾಸ್ತಿ ಸಾಲ, ಗೃಹ ಸಾಲ, ಸಿಬ್ಬಂದಿ ಸಾಲ, ಓಡಿ, ಚೆಕ್ ಡಿಸ್ಕೌಂಟ್, ಆಭರಣ ಸಾಲ ಮತ್ತು ಹರಾಜು ಪ್ರಕ್ರಿಯೆ ಹಾಗೂ 14 ಜನರ ಬೆನಾಮಿ ಹೆಸರಿನಲ್ಲಿ ಸಾಲ ವಿತರಣೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇನಾಮಿಗಳ ಹೆಸರಿನಲ್ಲಿ 1.99 ಕೋಟಿ ರು. ಬ್ಯಾಂಕಿನ ಹಣವನ್ನು ಲಪಟಾಯಿಸಿದ್ದರು.

ಅಲ್ಲದೆ ವ್ಯವಸ್ಥಾಪಕ ಉಮಾಶಂಕರ್ ತಮ್ಮ ಹಾಗೂ ಕುಟುಂಬದ ಹೆಸರಿನಲ್ಲಿ ಗಮನಕ್ಕೆ ತರದೆ ಸಾಲ ಪಡೆದು ಆಧಾರವಾಗಿ ನೀಡಿದ್ದ ಸ್ಥಿರಾಸ್ತಿಯನ್ನು ಸಾಲ ಬಾಕಿ ಇರುವಾಗಲೇ ಸಾಲ ಪಾವತಿಯಾಗಿದೆ ಎಂದು ಸಬ್ ರಿಜಿಸ್ಟರ್ ಅವರಿಗೆ ಸುಳ್ಳು ಮಾಹಿತಿ ನೀಡಿ, ಆಸ್ತಿ ಗಳಿಸಿ 26.63 ಲಕ್ಷ ರು.ಗಳನ್ನು ವಂಚನೆ ಮಾಡಿದಾರೆ ಎಂದು ಆಡಳಿತ ದೂರಿನಲ್ಲಿ ಆರೋಪಿಸಿದೆ.

ಈ ಎಲ್ಲಾ ಹಗರಣಗಳ ಬಗ್ಗೆ ಆಡಳಿತ ಮಂಡಳಿಯ ಬ್ಯಾಂಕಿನ ಅಧ್ಯಕ್ಷ ಎಂ.ಚಂದು ಕಳೆದ 2022 ರ ಆಗಸ್ಟ್ 27ರಂದು ಮದ್ದೂರು ಪೊಲೀಸರಿಗೆ ದೂರು ನೀಡಿದ್ದರು. ಆನಂತರ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 403, 490, 420, 417 ಪ್ರಕರಣ ದಾಖಲಿಸಿಕೊಂಡು ನಂತರ ಆರೋಪಿಗಳ ಮೇಲೆ ಕ್ರಮ ಕೈಗೊಂಡಿರಲಿಲ್ಲ.

ಹಗರಣದ ಬಗ್ಗೆ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಅಧಿಕಾರಿಗಳು ಕಾಯ್ದೆ 64ರ ಅನ್ವಯ ತನಿಖೆ ನಡೆಸಿ ತಪ್ಪಿತಸ್ಥರ ಜಪ್ತಿ ಮಾಡುವಂತೆ ಆದೇಶ ಹೊರಡಿಸಿತ್ತು. ಸಿಇಒ ಲಕ್ಷ್ಮೀ ನಾರಾಯಣ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದರು.

ಇದರ ವಿರುದ್ಧ ಆಡಳಿತ ಮಂಡಳಿ ಅಂತಿಮವಾಗಿ ಸಹಕಾರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಪೊಲೀಸ್ ಅಧೀಕ್ಷಕರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕಿನ ಹಗರಣದ ತನಿಖೆಯನ್ನು ಈಗ ಸೈಬರ್ ಕ್ರೈಂ ಕೈಗೆತ್ತಿಕೊಂಡು ತನಿಖೆ ಚುರುಕುಗೊಳಿಸುವ ಮೂಲಕ ಮೊದಲ ಹಂತದಲ್ಲಿ ಸಿಇಒ ಲಕ್ಷ್ಮೀನಾರಾಯಣಗೌಡ ಹಾಗೂ ವ್ಯವಸ್ಥಾಪಕ ಉಮಾಶಂಕರ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.