ಸಾರಾಂಶ
ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕಲ್ಯಾಣಕ್ಕಾಗಿ ಮೀಸಲಿರಿಸಿದ್ದ ಹಣವನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಪರಿಶಿಷ್ಟ ವರ್ಗದ ಅಭಿವೃದ್ದಿಯನ್ನು ಕಡೆಗಣಿಸಿದೆ. ಸರ್ಕಾರದ ವಿರುದ್ಧ ಜೂ.28ರ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಕನ್ನಡಪ್ರಭವಾರ್ತೆ ಚಳ್ಳಕೆರೆ
ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕಲ್ಯಾಣಕ್ಕಾಗಿ ಮೀಸಲಿರಿಸಿದ್ದ ಹಣವನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಪರಿಶಿಷ್ಟ ವರ್ಗದ ಅಭಿವೃದ್ದಿಯನ್ನು ಕಡೆಗಣಿಸಿದೆ. ಸರ್ಕಾರದ ವಿರುದ್ಧ ಜೂ.28ರ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.ನಗರದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಬಿಜೆಪಿ ಎಸ್ಟಿ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಪ್ರತಿಭಟನೆ ಬಗ್ಗೆ ಪೂರ್ವಸಿದ್ದತೆಯಲ್ಲಿ ಮಾತನಾಡಿದರು.
ವಿಪರ್ಯಾಸವೆಂದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಚುನಾಯಿತ ಕಾಂಗ್ರೆಸ್ ಸಚಿವರು, ಹಾಗೂ ಶಾಸಕರಿದ್ದರೂ ಇದರ ಬಗ್ಗೆ ಚಕಾರವೆತ್ತುತ್ತಿಲ್ಲ. ಕಳೆದ ಮೇ ತಿಂಗಳಲ್ಲಿ ಬಿಜೆಪಿಯ ನಿರಂತರ ಪ್ರತಿಭಟನೆಗೆ ಗಲಿಬಿಲಿಗೊಂಡು ಕಾಂಗ್ರೆಸ್ ಬಿ.ನಾಗೇಂದ್ರರವರ ರಾಜೀನಾಮೆ ಪಡೆಯಿತು. ಪರಿಶಿಷ್ಟ ವರ್ಗದ 187 ಕೋಟಿ ಹಣ ದುರುಪಯೋಗ ಹಿನ್ನೆಲೆ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಸದ್ದಾರೆ. ಆದರೆ ಸಚಿವರಾಗಲಿ ಅಥವಾ ಸರ್ಕಾರವಾಗಲಿ ದುರುಪಯೋಗವಾದ ಬಗ್ಗೆ ಯಾವುದೇ ಸ್ವಷ್ಟ ಮಾಹಿತಿ ನೀಡುತ್ತಿಲ್ಲ. ಇವರ ಧನದಾಹಕ್ಕೆ ಎರಡೂ ಜನಾಂಗಗಳನ್ನು ಬಲಿಪಶು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜೂ.28ರ ಶುಕ್ರವಾರ ಅನುದಾನ ದುರುಪಯೋಗದ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.ಯುವ ಮುಖಂಡ ಕೆ.ಟಿ. ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಲಜ್ಜೆಗೆಟ್ಟ ಸರ್ಕಾರವಾಗಿದೆ. ಇದುವರೆಗೂ ಸರ್ಕಾರದಿಂದ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ವಿಶೇಷವೆಂದರೆ ಎಲ್ಲಾ ಇಲಾಖೆಯಲ್ಲೂ ಹಣದ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರದಲ್ಲಿ ಪಾರದರ್ಶಕತೆ ಮಾಯವಾಗಿದೆ. ಸಚಿವರು ಮತ್ತು ಶಾಸಕರು ತಮ್ಮ ವೈಯಕ್ತಿಕ ಹಿತಾಸಕ್ತಿ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಶಿಷ್ಟ ವರ್ಗದ ಸುಮಾರು 15 ಶಾಸಕರಿದ್ದರೂ ಸರ್ಕಾರದ ವಿರುದ್ಧ ಮಾತನಾಡದೇ ಮೌನಕ್ಕೆ ಜಾರಿರುವುದು ಬೇಸರದ ಸಂಗತಿ ಎಂದರು.
ಸಭೆಯಲ್ಲಿ ಜಿಲ್ಲಾ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಶಿವಣ್ಣ, ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ರಾಜ್ಯ ಪರಿಶಿಷ್ಟ ವರ್ಗಗಳ ಕಾರ್ಯಕಾರಿ ಸಮಿತಿ ಸದಸ್ಯೆ ಕವನ, ನಗರಸಭಾ ಸದಸ್ಯ ವೆಂಕಟೇಶ್, ಜಯಪಾಲಯ್ಯ, ದೊರೆಬೈಯಣ್ಣ, ದೊರೆನಾಗರಾಜು, ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ನವೀನ್ ಮುಂತಾದವರು ಭಾಗವಹಿಸಿದ್ದರು.೨೪ಸಿಎಲ್‌ಕೆ೧
ಚಳ್ಳಕೆರೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಬಿಜೆಪಿ ಎಸ್ಟಿ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿದರು.