ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕ್ಷುಲ್ಲಕ ಕಾರಣಕ್ಕೆ ನಗರದ ನಾಗರಬಾವಿ ಹೊರವರ್ತುಲ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರ ಜತೆ ಬೈಕ್ ಸವಾರರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.ಈ ಸಂಬಂಧ ನಗರ ಪೊಲೀಸ್ ಆಯುಕ್ತರಿಗೆ ‘ಎಕ್ಸ್’ ಜಾಲತಾಣದಲ್ಲಿ ಸಂತ್ರಸ್ತೆ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕೃತ್ಯ ಎಸಗಿ ಪರಾರಿಯಾಗಿರುವ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ದೊಡ್ಡಬೆಟ್ಟ ಗ್ರಾಮದ ಅಜಯ್ ಎಂಬಾತನ ಪತ್ತೆಗೆ ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಮ್ಮ ಕುಟುಂಬದ ಜತೆ ಭಾನುವಾರ ರಾತ್ರಿ ಕಾರಿನಲ್ಲಿ ಸಂತ್ರಸ್ತೆ ತೆರಳುತ್ತಿದ್ದರು. ಆ ವೇಳೆ ಅವರ ಕಾರಿಗೆ ಹಿಂದಿನಿಂದ ಬೈಕ್ ಡಿಕ್ಕಿಯಾಗಿದೆ. ಆಗ ಕಾರು ನಿಲ್ಲಿಸಿ ಡಿಕ್ಕಿ ಬಗ್ಗೆ ವಿಚಾರಿಸಿದ್ದಕ್ಕೆ ಸಂತ್ರಸ್ತೆ ಜತೆ ಯುವಕರು ಜಗಳಕ್ಕಿಳಿದಿದ್ದಾರೆ. ಈ ವೇಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಈ ಬಗ್ಗೆ ‘ಎಕ್ಸ್’ ತಾಣದಲ್ಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಸಂತ್ರಸ್ತೆ, ನಾಗರಬಾವಿ ಹೊರವರ್ತು ರಸ್ತೆಯಲ್ಲಿ ರಾತ್ರಿ ವೇಳೆ ಪುಂಡರ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.
ಬಡಗಿ ಕೆಲಸಗಾರ?:ಈ ಘಟನೆ ಸಂಬಂಧ ಬೈಕ್‌ನ ನೋಂದಣಿ ಸಂಖ್ಯೆ ಆಧರಿಸಿ ಕೊಳ್ಳೇಗಾಲ ತಾಲೂಕಿನ ದೊಡ್ಡಬೆಟ್ಟದ ಅಜಯ್ ಎಂಬುದು ಗೊತ್ತಾಗಿದೆ. ಆತನ ಬಡಗಿ ಕೆಲಸ ಮಾಡಿಕೊಂಡಿದ್ದು, ಗೆಳೆಯನ ಜತೆ ಭಾನುವಾರ ರಾತ್ರಿ ನಗರಕ್ಕೆ ಬಂದು ಊರಿಗೆ ಮರಳಿದ್ದಾನೆ. ಈತನ ಮೊಬೈಲ್ ನಂಬರ್ ಪತ್ತೆ ಹಚ್ಚಿ ಕರೆ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸಲಾಯಿತು. ಆದರೆ ಬಂಧನ ಭೀತಿಯಿಂದ ಈಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಮತ್ತು ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.