ಸಾರಾಂಶ
ಸಿಡಿಪಿಒ ವಿರೂಪಾಕ್ಷಯ್ಯ ಹಿರೇಮಠ ಅವರು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಕೂಡಲೇ ಸಿಡಿಪಿಒ ಅವರ ಮೇಲೆ ಮೇಲಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ತಾಲೂಕಿನ ವಿವಿಧ ಗ್ರಾಮದ ಜನತೆ ಸೋಮವಾರ ಪಟ್ಟಣದ ಸಿಡಿಪಿಒ ಕಾರ್ಯಾಲಯದ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ರೋಣ ಸಿಡಿಪಿಒ ಕಾರ್ಯಾಲಯದ ಎದುರು ಕೆಲ ಕಾಲ ಆಕ್ರೋಶ
ರೋಣ: ಸಿಡಿಪಿಒ ವಿರೂಪಾಕ್ಷಯ್ಯ ಹಿರೇಮಠ ಅವರು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಕೂಡಲೇ ಸಿಡಿಪಿಒ ಅವರ ಮೇಲೆ ಮೇಲಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ತಾಲೂಕಿನ ವಿವಿಧ ಗ್ರಾಮದ ಜನತೆ ಸೋಮವಾರ ಪಟ್ಟಣದ ಸಿಡಿಪಿಒ ಕಾರ್ಯಾಲಯದ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿ ಆಗ್ರಹಿಸಿದರು. ಈ ವೇಳೆ ಬೆಳವಣಕಿ ಗ್ರಾಮದ ಅಜೀತ ನಾಗನೂರ, ಮಂಜುನಾಥ ರಿತ್ತಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ನಾವು ಮಧ್ಯಾಹ್ನ 12 ಗಂಟೆಗೆ ಕಚೇರಿಗೆ ಬಂದಿದ್ದು, ಮಧ್ಯಾಹ್ನ 3.30 ಗಂಟೆಯಾದರೂ ಸಿಪಾಯಿ ಒಬ್ಬರನ್ನು ಹೊರತುಪಡಿಸಿ ಕಚೇರಿಯಲ್ಲಿ ಯಾವದೇ ಸಿಬ್ಬಂದಿ ಇಲ್ಲ. ನಮ್ಮಂತೆ ರೋಣ ತಾಲೂಕಿನ ವಿವಿಧ ಗ್ರಾಮಗಳಿಂದ 50ಕ್ಕೂ ಹೆಚ್ಚು ಜನರು ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಲು, ತಾಂತ್ರಿಕೆ ಸಮಸ್ಯೆ ಕುರಿತು ದೂರು ನೀಡಲು, ಅರ್ಜಿ ಸಲ್ಲಿಸಿದ್ದರೂ ಪ್ರೋತ್ಸಾಹ ಧನ ಈವರೆಗೂ ಬಾರದೇ ಇರುವ ಕುರಿತು ಸೇರಿದಂತೆ ನಾನಾ ಸಮಸ್ಯೆಗಳೊಂದಿಗೆ ಕಚೇರಿ ಬಂದಿದ್ದಾರೆ. ಆದರೆ ನಮ್ಮ ಸಮಸ್ಯೆ ಕೇಳಲು ಇಲ್ಲಿ ಯಾವುದೇ ಸಿಬ್ಬಂದಿ ಇಲ್ಲ. ಈ ಕುರಿತು ಸಿಡಿಪಿಒ ವಿರೂಪಾಕ್ಷಯ್ಯ ಹಿರೇಮಠ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ, ನಾವು ನಿಮ್ಮ ಕಚೇರಿಯಲ್ಲಿ 4 ತಾಸಿನಿಂದ ಕಾಯುತ್ತಿದ್ದೇವೆ. ಇಲ್ಲಿ ಯಾವುದೇ ಸಿಬ್ಬಂದಿ ಇಲ್ಲ. ಹೀಗಾದರೇ ಜನತೆ ಎಷ್ಟು ಬಾರಿ ನಿಮ್ಮ ಕಚೇರಿಗ ಅಲೆಯಬೇಕು? ಎಂದು ಪ್ರಶ್ನಿಸಿದ್ದಲ್ಲಿ. ಅದಕ್ಕೆ ಸಿಡಿಪಿಒ ಅವರು, ಗೃಹಲಕ್ಷ್ಮೀ ಯೋಜನೆ ಪುಕ್ಸಟ್ಟೆ ಯೋಜನೆಯಾಗಿದ್ದು, ಈ ಯೋಜನೆ ನಿಮಗೆ ಬೇಕಿದ್ದರೇ ನೀವು ಕಾಯಲೇಬೇಕು. ಪುಕ್ಸಟ್ಟೆ ಸೀಗುತ್ತೆ ಅಂತಲೇ ನೀವೆಲ್ಲ ಬಂದಿದ್ದಿರಿ, ನಾವು ಎಷ್ಟೊತ್ತಿಗೆ ಬರುತ್ತೇವೋ ಅಲ್ಲಿತನ ಕಾಯಿರಿ ಎಂದು ಬೇಜವಾಬ್ದಾರಿಯಿಂದ ಮಾತಾಡಿದ್ದು ನಮಗೆ ತೀವ್ರ ಬೇಸರ ತಂದಿದೆ ಎಂದು ಅಳಲು ತೋಡಿಕೊಂಡರು.ತಹಸೀಲ್ದಾರ್ ಕಚೇರಿಗೆ ತೆರಳಿ ದೂರು ಗೃಹಲಕ್ಷ್ನೀ ಯೋಜನೆ ಸರ್ಕಾರದ್ದು, ಇದರ ಲಾಭ ಪ್ರತಿಯೊಬ್ಬರಿಗೂ ತಲುಪಲು, ಪ್ರತಿ ಕುಟುಂಬವು ಆರ್ಥಿಕ ತೊಂದರೆಯಿಂದ ಹೊರ ಬರಬೇಕು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿದೆ, ಆದರೆ ಈ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳೇ ಯೋಜನೆಯನ್ನು ಅವಮಾನಿಸಿದ್ದಲ್ಲದೇ, ಜನರನ್ನು ಕೀಳಾಗಿ ಕಂಡು, ಹಿಯಾಳಿಸುವ ರೀತಿಯಲ್ಲಿ ಸಿಡಿಪಿಒ ವಿರೂಪಾಕ್ಷಯ್ಯ ಹಿರೇಮಠ ಅವರು ವರ್ತಿಸಿದ್ದಲ್ಲದೇ, ಅನುಚಿತವಾಗಿ ಜೋರು ಧ್ವನಿಯಲ್ಲಿ ಹೆದರಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಕೂಡಲೇ ಸಿಡಿಪಿಒ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ನಿರತರು ತಹಸೀಲ್ದಾರ್ ಕಚೇರಿಗೆ ತೆರಳಿ, ನಾಗರಾಜ ಕೆ. ಅವರಿಗೆ ದೂರು ನೀಡಿದರು.ಈ ಕೂಡಲೇ ಸಿಡಿಪಿಒ ಅವರೊಂದಿಗೆ ಚರ್ಚಿಸಿ, ಕಚೇರಿ ಅವಧಿಯಲ್ಲಿ ಸಿಬ್ಬಂದಿ ಅನಧಿಕೃತ ಗೈರು ಇರದಂತೆ ಸೂಚನೆ ನೀಡುತ್ತೇನೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದಾಗಲಿ, ತಾಂತ್ರಿಕ ಸಮಸ್ಯೆಯಿಂದ ಪ್ರೋತ್ಸಾಹ ಧನ ಬಾರದೇ ಇರುವ ಕುರಿರು ಕೂಲಂಕಷವಾಗಿ ಪರಿಶೀಲಿಸಿ ಸಮಸ್ಯೆ ಪರಿಹರಿಸುವಂತೆ ಸಿಡಿಪಿಒ ಮತ್ತು ಸಿಡಿಪಿಒ ಕಚೇರಿ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನಿ ಸೂಚನೆ ನೀಡುತ್ತೆನೆ ಎಂದು ತಹಸೀಲ್ದಾರ್ ನಾಗರಾಜ.ಕೆ ಭರವಸೆ ನೀಡಿದರು.ಮಾತಿನ ಚಕಮಕಿ: ಮಧ್ಯಾಹ್ನ 3.30ರ ಬಳಿಕ ಸಿಡಿಪಿಒ ಕಚೇರಿಗೆ ಒಬ್ಬೊಬ್ಬರೇ ಸಿಬ್ಬಂದಿ ಆಗಮಿಸುತ್ತಿದಂತೆ, ಪ್ರತಿಭಟನಾ ನಿರತರು ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡರು. ಈ ವೇಳೆ ಕೆಲ ಕಾಲ ಪರಸ್ಪರ ಮಾತಿನ ಚಕಮಕಿ ಜರುಗಿತು. ಈ ಕೂಡಲೇ ಸಿಡಿಪಿಒ ವಿರೂಪಾಕ್ಷಯ್ಯ ಹಿರೇಮಠ ಅವರು ಸ್ಥಳಕ್ಕೆ ಬಂದು ಅವಮಾನಿಸಿರುವ ಕುರಿತು ಸ್ಪಷ್ಟನೆ ನೀಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಕೈಬಿಡಲ್ಲ ಎಂದು ಪಟ್ಟು ಹಿಡಿದರು. ಆಗ ಪರಿಸ್ಥಿತಿ ವಿಕೋಪಕ್ಕೆ ತಿರುಗುವಾಗ ಮುನ್ಸೂಚನೆ ಅರಿತ ಕಚೇರಿ ಸಿಬ್ಬಂದಿಯೇ, ಪ್ರತಿಭಟನಾ ನಿರತರನ್ನು ಮನವೊಲಿಸುವಲ್ಲಿ ನಾನಾ ರೀತಿಯಾಗಿ ಪ್ರಯತ್ನಿದರು ಯಶಸ್ವಿಯಾದರು.ಪ್ರತಿಭಟನೆಯಲ್ಲಿ ಅಜೀತ ನಾಗನೂರ, ಮಂಜುನಾಥ ರಿತ್ತಿ, ಕಳಕವ್ವ ಕೋರಿ, ಪಾತೀಮಾ ನಧಾಪ, ರೇಣುಕಾ ಹುದ್ದಾರ, ಶಮಶಾದಬೆಗಂ ಮುದಗಲ್ಲ, ದ್ಯಾನವ್ವ ಪರಸಣ್ಣವರ, ಪ್ರಶಾಂತ ಚಿತ್ರಗಾರ, ರೇಷ್ಮಾ ಚಿತ್ರಗಾರ, ಹುಲಿಗೆವ್ವ ಮಾದರ, ಶಾಂತವ್ವ ಮಾದರ, ಶರಣಪ್ಪ ಬಡಿಗೇರ, ಸಾಂತಪ್ಪ ಇಟಗಿ, ಈರಪ್ಪ ಕೋನೇರಿ ಸೇರಿದಂತೆ ಬೆಳವಣಕಿ, ಇಟಗಿ, ದಿಂಡೂರ, ಕೊತಬಾಳ, ಮಲ್ಲಾಪೂರ, ಹೊಳೆಆಲೂರ, ಮುಗಳಿ, ಸೂಡಿ, ರಾಜೂರ, ಹೊಸಳ್ಳಿ, ಕೌಜಗೇರಿ ಸೇರಿದಂತೆ ವಿವಿದ ಗ್ರಾಮಗಳ ಜನತೆ ಭಾಗಹಿಸಿದ್ದರು.