ಅಪ್ರಾಪ್ತೆಯೊಂದಿಗೆ ಮುಖ್ಯಪೇದೆ ಅನುಚಿತ ವರ್ತನೆ: ಧರ್ಮದೇಟು

| Published : Nov 05 2024, 12:47 AM IST / Updated: Nov 05 2024, 12:48 AM IST

ಸಾರಾಂಶ

ಮೂರು ಮಕ್ಕಳ ತಂದೆಯಾಗಿದ್ದರೂ ಇಂತಹ ದುರ್ವರ್ತನೆ ತೋರಿದ್ದಾನೆ. ಬಾಲಕಿಯ ಪೋಷಕರು ಹಾಗೂ ಸಾರ್ವಜನಿಕರು ಮುಖ್ಯಪೇದೆಗೆ ಹಿಗ್ಗಾಮುಗ್ಗಾ ಥಳಿಸಿ ಕೇಶ್ವಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹುಬ್ಬಳ್ಳಿ:

ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದ‌ ಮೇರೆಗೆ ಮುಖ್ಯ ಪೇದೆಯೊಬ್ಬರನ್ನು ಸಾರ್ವಜನಿಕರೇ ಧರ್ಮದೇಟು ನೀಡಿ ಠಾಣೆಗೆ ಒಪ್ಪಿಸಿದ ಘಟನೆ ನಗರದಲ್ಲಿ ಸೋಮವಾರ ನಡೆದಿದೆ. ಮುಖ್ಯಪೇದೆಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಇಲ್ಲಿನ ಕೇಶ್ವಾಪುರ ಠಾಣೆ ವ್ಯಾಪ್ತಿಯ ಶಬರಿ ನಗರದ ನಿವಾಸಿ ಹಾಗೂ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಮುಖ್ಯಪೇದೆ ಆಗಿ ಕಾರ್ಯನಿರ್ವಹಿಸುತ್ತಿರುವ ಎಂ.ಎ. ಖಾದಿರನವರ ಎಂಬುವನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಈತ ಭಾನುವಾರ 9 ವರ್ಷದ ಬಾಲಕಿಯೋರ್ವಳನ್ನು ಪುಸಲಾಯಿಸಿ ಮನೆಗೆ ಕರೆಯಿಸಿ ಅನುಚಿತವಾಗಿ ವರ್ತಿಸಿದ್ದಾನೆ.

ಮೂರು ಮಕ್ಕಳ ತಂದೆಯಾಗಿದ್ದರೂ ಇಂತಹ ದುರ್ವರ್ತನೆ ತೋರಿದ್ದಾನೆ. ಬಾಲಕಿಯ ಪೋಷಕರು ಹಾಗೂ ಸಾರ್ವಜನಿಕರು ಮುಖ್ಯಪೇದೆಗೆ ಹಿಗ್ಗಾಮುಗ್ಗಾ ಥಳಿಸಿ ಕೇಶ್ವಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಹು-ಧಾ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಈಗಾಗಲೇ ಅವನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.

ಪ್ರತಿದೂರು ದಾಖಲು:ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದ‌ ಮೇರೆಗೆ ಮುಖ್ಯ ಪೇದೆಯೊಬ್ಬರನ್ನು ಸಾರ್ವಜನಿಕರೇ ಧರ್ಮದೇಟು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಮುಖ್ಯಪೇದೆಯು ಪ್ರತಿದೂರು ದಾಖಲಿಸಿದ್ದಾರೆ. ಇಬ್ಬರು ಅಪ್ರಾಪ್ತ ಬಾಲಕಿಯರು ನಮ್ಮ ಮನೆ ಆಟ ಆಡವಾಡಲು ಬಂದಿದ್ದರು. ಅವರ ಕುಟುಂಬದ 30-40 ಜನರು ನಮ್ಮ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಎಂ.ಎ. ಖಾದಿರನವರ ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ದೂರಿನಲ್ಲಿ ತಿಳಿಸಿದ್ದಾನೆ.