ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ: ಗ್ರಾಹಕರ ಪ್ರತಿಭಟನೆ

| Published : Aug 29 2024, 12:47 AM IST

ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ: ಗ್ರಾಹಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು ೬ ಕೋಟಿ ರು. ಅವ್ಯವಹಾರ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿ, ಸೊಸೈಟಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸಾಗರ

ತಾಲ್ಲೂಕಿನ ಕಲ್ಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಿಗ್ಮಿ ಮತ್ತು ಡೆಪಾಜಿಟ್ ಇರಿಸಿದ ಹಣ ವಾಪಾಸ್ ಕೊಡದೆ ಇರುವ ಆಡಳಿತ ಮಂಡಳಿ ಕ್ರಮವನ್ನು ಖಂಡಿಸಿ ಗ್ರಾಹಕರು ಸೊಸೈಟಿ ಎದುರು ಪ್ರತಿಭಟನೆ ನಡೆಸಿದರು.

ಕಳೆದ ತಿಂಗಳು ಸೊಸೈಟಿ ಅಧ್ಯಕ್ಷ ವೆಂಕಟೇಶ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಒಂದು ತಿಂಗಳ ನಂತರ ಹಣ ಡೆಪಾಜಿಟ್ ಇರಿಸಿದವರ ಮತ್ತು ಪಿಗ್ಮಿ ಕಟ್ಟಿದವರ ಅರ್ಧ ಹಣ ವಾಪಾಸ್ ಕೊಡುತ್ತೇವೆ. ಉಳಿದ ಹಣ ಎರಡು ತಿಂಗಳ ನಂತರ ಕೊಡುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಒಂದು ತಿಂಗಳು ಕಳೆದರೂ ಹಣ ವಾಪಸ್ ನೀಡದ ಕ್ರಮವನ್ನು ಖಂಡಿಸಿ ಸೋಮವಾರ ಹಣ ಕಟ್ಟಿದವರು ಸೊಸೈಟಿ ಎದುರು ಪ್ರತಿಭಟನೆ ನಡೆಸಿದರು.

ಕಲ್ಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು ೬ ಕೋಟಿ ರು. ಅವ್ಯವಹಾರ ನಡೆದಿದೆ. ಸೊಸೈಟಿಯಲ್ಲಿ ಹಣ ಡೆಪಾಜಿಟ್ ಇರಿಸಿದವರು, ಪ್ರತಿದಿನ ಪಿಗ್ಮಿ ಕಟ್ಟಿದವರು ಹಣ ಕೇಳಲು ಹೋದರೆ ಆಡಳಿತ ಮಂಡಳಿಯವರು ಸಬೂಬು ಹೇಳಿ ಗ್ರಾಹಕರನ್ನು ವಾಪಾಸ್ ಕಳಿಸುತ್ತಿದ್ದಾರೆ. ಹಣ ಡೆಪಾಜಿಟ್ ಮಾಡಿದವರು ಒತ್ತಾಯ ಪೂರ್ವಕವಾಗಿ ಕೇಳಿದರೆ ಆಡಳಿತ ಮಂಡಳಿಯವರು ಕಾರ್ಯದರ್ಶಿ ಮೇಘರಾಜ್ ನಾಪತ್ತೆಯಾಗಿದ್ದಾನೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಕಲ್ಮನೆ ಸೊಸೈಟಿಯಲ್ಲಿ ಸುಮಾರು ೮೦೦ ಜನರ ಪಿಗ್ಮಿ ಹಣ ೧.೫೦ ಕೋಟಿ ರು.ನಷ್ಟು ದುರುಪಯೋಗವಾಗಿದೆ. ನಾಲ್ಕು ತಿಂಗಳ ಹಿಂದೆ ಸಭೆ ಕರೆದಾಗ ಆಡಳಿತ ಮಂಡಳಿ ಹಣ ಎರಡು ತಿಂಗಳ ನಂತರ ವಾಪಾಸ್ ಕೊಡುತ್ತೇವೆ ಎಂದು ಹೇಳಿದ್ದರು. ಗ್ರಾಹಕರು ಕಷ್ಟಪಟ್ಟು ಕೂಲಿ ಮಾಡಿ ಬ್ಯಾಂಕಿನಲ್ಲಿ ಹಣ ತೊಡಗಿಸಿದ್ದಾರೆ. ಕಷ್ಟಕಾಲದಲ್ಲಿ ಸಹಾಯಕ್ಕೆ ಬರುತ್ತದೆ ಎಂದು ಪಿಗ್ಮಿ ಕಟ್ಟಿದ್ದರು. ಒಂದು ತಿಂಗಳು ಅವಕಾಶ ಕೊಟ್ಟರೂ ನಯಾಪೈಸೆ ಹಣ ವಾಪಾಸ್ ಮಾಡಿಲ್ಲ. ಕಾರ್ಯದರ್ಶಿ ಬರುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ತಕ್ಷಣ ಬಡವರ ಹಣ ವಾಪಾಸ್ ಕೊಡಿ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಯತೀಶ್ ಆರ್. ಸಾರ್ವಜನಿಕರ ಮನವಿ ಸ್ವೀಕರಿಸಿ ಶೀಘ್ರದಲ್ಲಿಯೆ ಸೊಸೈಟಿಯಲ್ಲಿ ನಡೆದಿರುವ ಹಣ ದುರುಪಯೋಗ ದೂರನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಕಲ್ಮನೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಮಹಾಬಲೇಶ್ವರ ಗೌಡ, ಸುರೇಶ್ ಗೌಡ, ಕಮಲಮ್ಮ, ಅಮರನಾಥ, ಸೇರಿದಂತೆ ಪಿಗ್ಮಿ ಕಟ್ಟಿದ ನೂರಾರು ಗ್ರಾಹಕರು ಹಾಜರಿದ್ದರು.