ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪೀ ಕಾರ್ಡ್ ಬ್ಯಾಂಕಿನಲ್ಲಿ ನಡೆದಿರುವ ಬೈಲಾ ಉಲ್ಲಂಘನೆ ಹಾಗೂ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಬ್ಯಾಂಕಿನ ಕೆಲ ನಿರ್ದೇಶಕರು ಸೋಮವಾರ ಪ್ರತಿಭಟನೆ ನಡೆಸಿದರು.ಬ್ಯಾಂಕಿನ ಮಾಜಿ ಅಧ್ಯಕ್ಷ. ಹಾಲಿ ನಿರ್ದೇಶಕ ಎಂ.ಎಸ್. ಸಿದ್ದಮರಿ ನೇತೃತ್ವದಲ್ಲಿ ಎಂಟು ಮಂದಿ ನಿರ್ದೇಶಕರು ರೈತರ ಬೆಂಬಲದೊಂದಿಗೆ ಬ್ಯಾಂಕಿನ ಎದುರು ಧರಣಿ ನಡೆಸಿ ಅವ್ಯವಹಾರಗಳ ಕುರಿತು ತನಿಖೆಗೆ ಆಗ್ರಪಡಿಸಿದರು.
ಪೀ ಕಾರ್ಡ್ ಬ್ಯಾಂಕಿನ ಅಧ್ಯಕ್ಷ ಸಿ.ಎನ್.ಕೆಂಪೇಗೌಡ ಹಾಗೂ ವ್ಯವಸ್ಥಾಪಕಿ ಭಾಗ್ಯ ವಿರುದ್ಧ ಘೋಷಣೆ ಕೂಗಿದ ಧರಣಿ ನಿರತರು, ಬ್ಯಾಂಕ್ ನ ಅವ್ಯವಹಾರಗಳ ಬಗ್ಗೆ ತನಿಖೆಗೆ ಆಗ್ರಹಿಸಿದರು. ನಿರ್ದೇಶಕರ ದಿಢೀರ್ ಪ್ರತಿಭಟನೆಯಿಂದಾಗಿ ಬ್ಯಾಂಕಿನ ವಹಿವಾಟಿಗೆ ಕೆಲಕಾಲ ಅಡ್ಡಿ ಉಂಟಾಗಿತ್ತು. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರವೇಶ ದ್ವಾರ ತೆರವುಗೊಳಿಸಿ ವಹಿವಾಟಿಗೆ ಅನುವು ಮಾಡಿಕೊಟ್ಟರು.ಪೀ ಕಾರ್ಡ್ ಬ್ಯಾಂಕಿನಲ್ಲಿ ಬೈಲಾ ಉಲ್ಲಂಘನೆ ಹಾಗೂ ಹಲವು ಅವ್ಯವಹಾರಗಳು ನಡೆದಿವೆ. ಈ ಬಗ್ಗೆ ಅಧ್ಯಕ್ಷ ಸಿ.ಎನ್.ಕೆಂಪೇಗೌಡ ಮತ್ತು ವ್ಯವಸ್ಥಾಪಕಿ ಭಾಗ್ಯ ವಿರುದ್ಧ ಬ್ಯಾಂಕಿನ ಮಾಜಿ ಅಧ್ಯಕ್ಷ ಕೃಷ್ಣೆಗೌಡ, ನಿರ್ದೇಶಕರಾದ ಎಂ.ಎಸ್.ಸಿದ್ಧಮರಿ, ಕೆ.ಎಂ.ಕೃಷ್ಣೇಗೌಡ, ಸಿದ್ದರಾಮ, ಬಿ.ಎಸ್.ಮಧು, ಗೌರಮ್ಮ, ಸವಿತಾ, ಕೆ.ಬಿ.ಸಿದ್ದೇಗೌಡ ಹಾಗೂ ಕೃಷ್ಣಪ್ಪ ಅವರು ಸಹಕಾರ ಸಂಘಗಳ ಉಪನಿಬಂಧಕರಿಗೆ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ. ಆದರೆ, ಉಪ ನಿಬಂಧಕರು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ನಿರ್ದೇಶಕರು ಆರೋಪಿಸಿದರು.
ಕಳೆದ ಮೇ 6 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬ್ಯಾಂಕಿನ ಬೈಲಾ ಮತ್ತು ಉಪನಿಯಮಗಳ ಪ್ರಕಾರ ಸದಸ್ಯರಿಗೆ 2 ಲಕ್ಷ ರು. ವೈಯಕ್ತಿಕ ಸಾಲ ನೀಡುವ ಅವಕಾಶವಿದೆ. ಆದರೆ, ಅಧ್ಯಕ್ಷ ಕೆಂಪೇಗೌಡ ಹಾಗೂ ವ್ಯವಸ್ಥಾಪಕಿ ಭಾಗ್ಯ ನಿಯಮ ಉಲ್ಲಂಘಿಸಿ ಪಿಗ್ಮಿ ಹಣವನ್ನು ಉಪಯೋಗಿಸಿಕೊಂಡು ಸಾಲ ನೀಡಿದ್ದಾರೆ ಎಂದು ದೂರಿದರು.ಒಂದು ಮತ್ತು ಎರಡನೇ ವಿಷಯಗಳಿಗೆ ಒಪ್ಪಿಗೆ ನೀಡಿ ಉಳಿದ ಮೂರರಿಂದ 11ನೇ ವಿಷಯಗಳನ್ನು ತಿರಸ್ಕರಿಸಿ ಸಭೆ ಬಹಿಷ್ಕರಿಸಲಾಗಿತ್ತು. ಅಧ್ಯಕ್ಷರು ಮತ್ತು ವ್ಯವಸ್ಥಾಪಕರು ಶಾಮೀಲಾಗಿ ಕೋರಂ ಅಭಾವವಿದ್ದರೂ ಸಭೆ ನಡೆಸಿ ಕರ್ತವ್ಯ ಲೋಪ ಮಾಡಿದ್ದಾರೆ ಎಂದು ಧರಣಿನಿರತ ನಿರ್ದೇಶಕರು ಆರೋಪಿಸಿದರು.
ಬ್ಯಾಂಕಿನ ನಿವೃತ್ತ ನೌಕರ ಎಂ.ಎನ್.ನಾಗರಾಜು 1,41,801 ರು. ಗ್ರಾಚುಟಿ ಹಣದಲ್ಲಿ 41,000ಕ್ಕೂ ಅಧಿಕ ಹಣವನ್ನು ಅಧ್ಯಕ್ಷ ಕೆಂಪೇಗೌಡ ತಮ್ಮ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡು ಅವ್ಯವಹಾರ ಮಾಡಿದ್ದಾರೆ ಎಂದು ಸದಸ್ಯರು ದೂರಿದರು. ಬ್ಯಾಂಕಿನಲ್ಲಿ ನಡೆದಿರುವ ಎಲ್ಲಾ ಅವ್ಯವಹಾರಗಳ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರು ವ್ಯವಸ್ಥಾಪಕಿ ಭಾಗ್ಯ ಅವರನ್ನು ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಿ ಬ್ಯಾಂಕಿನ ಆಡಳಿತ ಮಂಡಳಿಯನ್ನು ಸೂಪರ್ ಸೈಡ್ ಮಾಡುವಂತೆ ಸದಸ್ಯರು ಒತ್ತಾಯಿಸಿದರು.