ಕೊಟ್ಟಿಗೆಹಾರಪ್ರಯಾಣಿಕರ ಜೀವ ರಕ್ಷಣೆಗೆ ಅಪಾಯಕಾರಿ ತಿರುವುಗಳಲ್ಲಿ ಅಳವಡಿಸಿದ್ದ ಮಹತ್ವದ ಸುರಕ್ಷತಾ ಕನ್ನಡಿ ಗಳನ್ನೇ ಕಿಡಿಗೇಡಿಗಳು ಕಳ್ಳತನ ಮಾಡಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ವರದಿಯಾಗಿದೆ.

​- ಅಪಘಾತ ತಡೆಯಲು ಹಾಕಿದ್ದ ಸುರಕ್ಷತಾ ಕನ್ನಡಿಗಳೇ ಕಳವು!

ಕನ್ನಡಪ್ರಭ ವಾರ್ತೆ ಕೊಟ್ಟಿಗೆಹಾರ

ಪ್ರಯಾಣಿಕರ ಜೀವ ರಕ್ಷಣೆಗೆ ಅಪಾಯಕಾರಿ ತಿರುವುಗಳಲ್ಲಿ ಅಳವಡಿಸಿದ್ದ ಮಹತ್ವದ ಸುರಕ್ಷತಾ ಕನ್ನಡಿ ಗಳನ್ನೇ ಕಿಡಿಗೇಡಿಗಳು ಕಳ್ಳತನ ಮಾಡಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ವರದಿಯಾಗಿದೆ.​ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಒಟ್ಟು 11 ಅತ್ಯಂತ ಅಪಾಯಕಾರಿ ತಿರುವುಗಳಿವೆ. ಈ ತಿರುವು ಗಳಲ್ಲಿ ಎದುರಿನಿಂದ ಬರುವ ವಾಹನಗಳು ಸ್ಪಷ್ಟವಾಗಿ ಗೋಚರಿಸುವಂತೆ ಧರ್ಮಸ್ಥಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ವಿಶೇಷ ಕನ್ನಡಿಗಳನ್ನು ಅಳವಡಿಸಲಾಗಿತ್ತು. ಹಗಲಿರುಳು ವಾಹನ ಸವಾರರಿಗೆ ನೆರವಾಗುತ್ತಿದ್ದ ಈ ಕನ್ನಡಿಗಳಿಂದಾಗಿ ಘಾಟ್ ಪ್ರದೇಶದಲ್ಲಿ ಸಂಭವಿಸುತ್ತಿದ್ದ ಭೀಕರ ಅಪಘಾತಗಳ ಸಂಖ್ಯೆ ಗಣನೀಯವಾಗಿ ತಗ್ಗಿತ್ತು.​ಆದರೆ, ದುಡಿಯಲು ಸೋಮಾರಿಗಳಾದ ಕೆಲವು ಕಿರಾತಕರು ಮತ್ತು ಮೈಗಳ್ಳರು ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ ವಾಡುತ್ತಿದ್ದಾರೆ. ಅಪಘಾತ ತಗ್ಗಿಸಲು ನೆರವಾಗಿದ್ದ ಈ ಕನ್ನಡಿಗಳನ್ನೇ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ತಿರುವುಗಳಲ್ಲಿ ಕನ್ನಡಿಗಳು ಮಾಯವಾಗಿರುವುದರಿಂದ ವಾಹನ ಸವಾರರು ಮತ್ತೆ ಪ್ರತಿದಿನ ಪ್ರಾಣಭಯದಲ್ಲೇ ಸಂಚರಿಸುವಂತಾಗಿದೆ.​ಘಟನೆಯ ಗಂಭೀರತೆ ಮನಗಂಡಿರುವ ಸ್ಥಳೀಯರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಕಳುವಾಗಿರುವ ಜಾಗದಲ್ಲಿ ಹೊಸ ಕನ್ನಡಿಗಳನ್ನು ಮರುಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇದು ಕೇವಲ ಕನ್ನಡಿಯಲ್ಲ, ನೂರಾರು ಪ್ರಯಾಣಿಕರ ಜೀವ ಉಳಿಸುವ ಸಂಜೀವಿನಿ. ಯಾರೂ ಇಂತಹ ಕೃತ್ಯಗಳಿಗೆ ಕೈಹಾಕಬೇಡಿ ಎಂದು ಸಾಮಾಜಿಕ ಕಾರ್ಯಕರ್ತ. ಸಂಜಯ್ ಗೌಡ ಕೊಟ್ಟಿಗೆಹಾರ ಅಗ್ರಹಿಸಿದ್ದಾರೆ ಮನವಿ ಮಾಡಿದ್ದಾರೆ.