ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ಮದ್ದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಲವು ಅವಘಡಗಳು ಸಂಭವಿಸಿದೆ. ಶುಕ್ರವಾರ ಸಂಜೆ ಸುಮಾರು 45 ನಿಮಿಷಗಳ ಕಾಲ ಸುರಿದ ಪರಿಣಾಮ ಭೂಮಿಗೆ ತಂಪೆರೆದಿದ್ದು, ಜಮೀನುಗಳಲ್ಲಿ ಬೆಳೆದು ನಿಂತ ಬೆಳೆಗಳಿಗೆ ಜೀವ ಉಳಿಸಿದಂತಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಲವು ಅವಘಡಗಳು ಸಂಭವಿಸಿದೆ.ಶುಕ್ರವಾರ ಸಂಜೆ ಸುಮಾರು 45 ನಿಮಿಷಗಳ ಕಾಲ ಸುರಿದ ಪರಿಣಾಮ ಭೂಮಿಗೆ ತಂಪೆರೆದಿದ್ದು, ಜಮೀನುಗಳಲ್ಲಿ ಬೆಳೆದು ನಿಂತ ಬೆಳೆಗಳಿಗೆ ಜೀವ ಉಳಿಸಿದಂತಾಗಿದೆ.
ತಾಲೂಕಿನ ಕೊಪ್ಪ, ಕೆಸ್ತೂರು, ಬೆಸಗರಹಳ್ಳಿ, ಕೆ.ಹೊನ್ನಲಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ವ್ಯಾಪ್ತಿ ಮಳೆ ಸುರಿದ ಬಗ್ಗೆ ವರದಿಯಾಗಿದೆ. ತಾಲೂಕಿನ ತೈಲೂರು-ಮಾದನಾಯಕನಹಳ್ಳಿ ಮಾರ್ಗದ ರಸ್ತೆ ಹಾಗೂ ಆಲೂರು-ಕೆ.ಹೊನ್ನಲಗೆರೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗಗಳಲ್ಲಿ ತೆಂಗಿನ ಮರಗಳು ಮತ್ತು ವಿದ್ಯುತ್ ಕಂಬಗಳು ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿವೆ. ಕೆಲ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಕತ್ತಲೆ ಆವರಿಸಿದೆ.ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಬಾಳೆ, ತೆಂಗು, ಅಡಿಕೆ, ಕಬ್ಬು, ರಾಗಿ ಇನ್ನಿತರ ಬೆಳೆಗಳು ನೆಲಕಚ್ಚಿದ್ದು ಲಕ್ಷಾಂತರ ರು. ವೆಚ್ಚದ ಮಾವಿನ ಫಸಲು ಸಂಪೂರ್ಣವಾಗಿ ನಷ್ಟವಾಗಿದೆ. ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ತಾಲೂಕಿನ ನೀಲಕಂಠನಹಳ್ಳಿ ಗ್ರಾಮದ ಟಿ.ಶಿವಣ್ಣರ ಕೋಳಿ, ಮೇಕೆ ಹಾಗೂ ಕುರಿ ಸಾಕಾಣಿಕೆ ಮನೆ ಮೇಲ್ಛಾವಣಿಗಳು ಗಾಳಿ ರಭಸಕ್ಕೆ ಹಾರಿ ಹೋಗಿ 2 ಲಕ್ಕಕ್ಕೂ ಅಧಿಕ ನಷ್ಟ ಸಂಭವಿಸಿದೆ. ತಾಲೂಕು ಆಡಳಿತ ಮತ್ತು ಕಂದಾಯ ಇಲಾಖಾ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆಯುವ ಕೂಡಲೇ ಸರಕಾರದಿಂದ ಸಿಗುವ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಮದ್ದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಿರುಗಾಳಿ ಸಹಿತ ಮಳೆ, ಬಾಳೆ ಬೆಳೆ ನಾಶ
ಮದ್ದೂರು: ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಸುಮಾರು 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ನಾಶವಾಗಿರುವ ಘಟನೆ ತಾಲೂಕಿನ ವಡ್ಡರದೊಡ್ಡಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ವಿನಯ್ ಅವರಿಗೆ ಸೇರಿದ ಸುಮಾರು 2 ಎಕರೆ ಬಾಳೆ ತೋಟ ನಾಶವಾಗಿ ಸುಮಾರು 2 ಲಕ್ಷ ರು.ಗೂ ಅಧಿಕ ನಾಶವಾಗಿದೆ. ಪರಿಹಾರಕ್ಕೆ ವಿನಯ್ ಒತ್ತಾಯಿಸಿದ್ದಾರೆ. ಕಳೆದ 15 ದಿನಗಳ ಹಿಂದೆ ಇದೇ ರೀತಿ ಬಿರುಗಾಳಿಗೆ ಸುಮಾರು 50 ಬಾಳೆ ಗಿಡಗಳು ಹುರುಳಿ ಒಂದು ಲಕ್ಷ ನಷ್ಟವಾಗಿತ್ತು.ಮನೆ ಮೇಲೆ ಬಿದ್ದ ತೆಂಗಿನ ಮರಶ್ರೀರಂಗಪಟ್ಟಣ: ತಾಲೂಕಿನ ಕೆ.ಆರ್.ಸಾಗರ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಮನೆ ಮೇಲೆ ತೆಂಗಿನ ಮರ ಬಿದ್ದು ಅಪಾರ ನಷ್ಟವಾಗಿದೆ. ಗ್ರಾಮದ ಇಂದಿರಾ ಕಾಲೋನಿಯ ಸಂತೆಮಾಳದ ಗೋಪಮ್ಮ ರಾಚಯ್ಯ ರ ಮನೆ ಮೇಲೆ ತೆಂಗಿನ ಮರ ಬಿರುಗಾಳಿ ಮಳೆಗೆ ಬಿದ್ದಿದ್ದು, ಅದೃಷ್ಟವಶತ್ ಮನೆಯಲ್ಲಿ ಮಲಗಿದ್ದ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ, ಮನೆ ಮೇಲೆ ಮರ ಬಿದ್ದ ಕಾರಣ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಪರಿಹಾರ ನೀಡುವಂತೆ ಗ್ರಾಪಂಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.