ಸಮಸ್ಯೆಗಳ ಸುಳಿಯಲ್ಲಿ ನಲುಗಿದ ಮಿಶ್ರಿಕೋಟಿ

| Published : Nov 27 2024, 01:04 AM IST

ಸಾರಾಂಶ

ಜನವರಿ 7ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಸಿ ಸಮಸ್ಯೆ ಆಲಿಸಿ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಇಂದಿಗೂ ಭರವಸೆ ಈಡೇರಿಲ್ಲ.

ಕಲಘಟಗಿ:

ತಾಲೂಕಿನಲ್ಲಿಯೇ ಅತೀ ದೊಡ್ಡ ಗ್ರಾಮ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಮಿಶ್ರಿಕೋಟಿಯ ಜನತೆ ಮೂಲಭೂತ ಸೌಲಭ್ಯದಿಂದ ವಂಚಿತರಾಗಿ ಸಮಸ್ಯೆಗಳ ಮಧ್ಯೆಯೇ ಜೀವನ ನಡೆಸುವಂತಾಗಿದೆ. ಗ್ರಾಮಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯ ಸ್ಥಿತಿಯಂತೂ ಹೇಳತೀರದು. ಇದರ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಭೇಟಿಯಾಗದಿರುವ ನಾಯಕರು, ಅಧಿಕಾರಿಗಳಿಲ್ಲ. ಇಷ್ಟಾದರೂ ಸಮಸ್ಯೆ ಮಾತ್ರ ಈಡೇರಿಲ್ಲ.

ಬರೋಬ್ಬರಿ 22 ವಾರ್ಡ್‌ ಹೊಂದಿರುವ ಗ್ರಾಮ ಪಂಚಾಯಿತಿ ಸಂಪನ್ಮೂಲಗಳ ಕೊರತೆಯಿಂದಾಗಿ ಸಮಸ್ಯೆಗಳ ಸರಮಾಲೆ ಹೊದ್ದುಕೊಂಡು ಆಸಹಾಯಕತೆಯಿಂದ ಕೈಕಟ್ಟಿ ಕುಳಿತಿದೆ.

ಗ್ರಾಮದ ಮುಖ್ಯರಸ್ತೆಯ ತುಂಬ ಗುಂಡಿಗಳು ಬಿದ್ದು ದಶಕಗಳೇ ಕಳೆದಿವೆ. ತೆರೆದ ಚರಂಡಿ ಒಡೆದು ಕೊಳಚೆ ನೀರು ರಸ್ತೆಗೆ ಹರಿದು ಬರುತ್ತಿದೆ. ಗ್ರಾಮದ ಕೆಲವೇ ಕೆಲವು ಪ್ರದೇಶದಲ್ಲಿ ಮಾತ್ರ ಕಾಂಕ್ರೀಟ್ ರಸ್ತೆ ಆಗಿದೆ, ಹೆಚ್ಚಿನ ಪ್ರದೇಶದ ರಸ್ತೆಗಳು ಗುರುತು ಸಿಗದಂತಾಗಿವೆ. ಅವುಗಳ ಅಕ್ಕಪಕ್ಕದ ಚರಂಡಿ ಮಾಯವಾಗಿವೆ.

ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆದರೆ, ಇಲ್ಲಿ ಆ್ಯಂಬುಲೆನ್ಸ್‌ ಸಂಚರಿಸಲು ಸಮರ್ಪಕ ರಸ್ತೆಯಿಲ್ಲದೇ ತೊಂದರೆಯಾಗಿದೆ. ಮಲಪ್ರಭಾ ಜಲಾಶಯದಿಂದ ಕುಡಿಯುವ ನೀರು ಪೂರೈಸುವ ಜಲಧಾರೆ ಯೋಜನೆ ಕುಂಟುತ್ತಾ ಸಾಗಿದ್ದು ಗ್ರಾಮಕ್ಕೆ ಆಗಾಗ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ.

ಸಚಿವರು ಬಂದರೂ ನೀಗದ ಸಮಸ್ಯೆ:

ಜನವರಿ 7ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಸಿ ಸಮಸ್ಯೆ ಆಲಿಸಿ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಇಂದಿಗೂ ಭರವಸೆ ಈಡೇರಿಲ್ಲ. ಗ್ರಾಮದ ಮುಖ್ಯ ರಸ್ತೆ ಮಳೆಗಾಲದಲ್ಲಿ ಬೃಹತ್‌ ಆಕಾರದ ಗುಂಡಿಗಳಿಂದ ಕೂಡಿದರೆ, ಚಳಿಗಾಲ ಮತ್ತು ಬೇಸಿಗೆಯಲ್ಲಿ ಗಾಢ ಧೂಳಿನಿಂದ ಆವೃತವಾಗಿ ಸವಾರರು ಸಂಚರಿಸದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಹಾಳಾದ, ಧೂಳು ಮಿಶ್ರಿತ ರಸ್ತೆಯಲ್ಲಿ ವಾಹನಗಳು ಸಂಚರಿಸುವ ವೇಳೆ ರಸ್ತೆಯ ಅಕ್ಕಪಕ್ಕದ ಮನೆಗಳಿಗೆ ನುಗ್ಗಿರುವ ಉದಾಹರಣೆಗಳು ಸಾಕಷ್ಟಾಗಿವೆ. ಇನ್ನು ಕೆಲವರು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಬಿದ್ದು ಕೈಕಾಲು ಮುರುದಿಕೊಂಡಿದ್ದಾರೆ. ಇಂದು ರಸ್ತೆ ಬಂದ್‌ ಮಾಡಿ ಪ್ರತಿಭಟನೆ:

ಪ್ಯಾಟಿ ಬಸವೇಶ್ವರ ದೇವಸ್ಥಾನದಿಂದ ಮಿಶ್ರಿಕೋಟಿ ಕ್ರಾಸ್‌ ವರೆಗೆ ರಸ್ತೆ ಅಗಲೀಕರಣ ಮತ್ತು ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಎಂಬುವುದು ಗ್ರಾಮಸ್ಥರ ಹಲವು ವರ್ಷಗಳ ಒಕ್ಕೊರಲ ಆಗ್ರವಾಗಿದೆ. ಆದರೆ, ಇಂದಿಗೂ ಈ ಕಾರ್ಯ ನಡೆಯದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನ. 27ರಂದು ಬೆಳಗ್ಗೆ 9 ಗಂಟೆಯಿಂದ ಗ್ರಾಮದ ಪ್ಯಾಟಿ ಬಸವೇಶ್ವರ ದೇವಸ್ಥಾನದಿಂದ ಹುಬ್ಬಳ್ಳಿಗೆ ಹೋಗುವ ಮುಖ್ಯರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.ಗ್ರಾಮಕ್ಕೆ ಹೊಂದಿಕೊಂಡಿರುವ ರಸ್ತೆ ದುರಸ್ತಿ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಂತೆ ಹಲವು ವರ್ಷಗಳಿಂದ ಸಚಿವರು, ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬರಲಾಗುತ್ತಿದೆ ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ. ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥ ಮುತ್ತು ಪಾಟೀಲ ಹೇಳಿದರು.