ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕರ್ನಾಟಕ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಚುನಾವಣಾ ಆಯೋಗದ ವಿರುದ್ಧ ಅವರ ಆರೋಪಗಳಿಲ್ಲ, ಆದರೆ ಬಿಜೆಪಿ ನೇತೃತ್ವದ ಎನ್.ಡಿ.ಎ ಬಿಹಾರದಲ್ಲಿ ಗೆಲ್ಲಬಹುದು ಎಂಬ ಕಾರಣಕ್ಕೆ ಈಗ ರಾಹುಲ್ ಗಾಂಧಿ ಅವರು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಟೀಕಿಸಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಬದ್ಧ ಸಂಸ್ಥೆ ಚುನಾವಣಾ ಆಯೋಗ ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ಈಗಿರುವ ಮಾಹಿತಿ ಪ್ರಕಾರ ಏಳು ಕೋಟಿ ಮತದಾರರ ಪೈಕಿ 45 ಲಕ್ಷ ಮತದಾರರ ವ್ಯತ್ಯಾಸ ಬರುತ್ತಿದೆ. 20 ಲಕ್ಷ ಮತದಾರರು ಎಲ್ಲೂ ಇಲ್ಲ. 10 ಲಕ್ಷ ಮತದಾರರು ಜೀವಂತವಾಗಿಲ್ಲ, 10 - 15 ಲಕ್ಷ ಎರಡು ಕಡೆ ಇದ್ದಾರೆ ಮೂಲವಾಸಿಗಳಲ್ಲ. ವಿರೋಧ ಪಕ್ಷದ ನಾಯಕರಾಗಿ ಸಂವಿಧಾನಬದ್ಧ ಸಂಸ್ಥೆ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಚುನಾವಣಾ ಆಯೋಗದ ಕಾರಣ ಮೋದಿಜಿ ಆಳ್ವಿಕೆಗೆ ಬರುತ್ತಿದ್ದಾರೆ ಎಂಬ ಆರೋಪ ಆಶ್ಚರ್ಯ ಮತ್ತು ಸಿಲ್ಲಿ ಎನಿಸುತ್ತದೆ ಎಂದು ಹರಿಹಾಯ್ದರು.
ಕಳೆದ ಬಾರಿ ವಿಪಕ್ಷ ಸ್ಥಾನವೂ ಕಾಂಗ್ರೆಸ್‌ಗೆ ಸಿಕ್ಕಿರಲಿಲ್ಲ. ಈ ಬಾರಿ ಕಾಂಗ್ರೆಸ್‌ಗೆ ವಿಪಕ್ಷ ಸ್ಥಾನ ನೀಡಿದೆ. ಇದನ್ನು ಅರ್ಥ ಮಾಡಿಕೊಂಡು ಆ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಇದು ರಾಹುಲ್ ಗಾಂಧಿ ಅವರಿಗೂ ಗೌರವ ಮತ್ತು ಅವರ ಪಕ್ಷಕ್ಕೂ ಗೌರವ. ಈ ರೀತಿ ಹಗುರವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಕುಟುಕಿದರು.ಸುರ್ಜೇವಾಲ ಅಧಿಕಾರಿಗಳನ್ನು ಕರೆಸಿಕೊಂಡು ಮೀಟಿಂಗ್ ಮಾಡಿರುವ ವಿಚಾರ ಹೊಸದಲ್ಲ. ಸಾಗರದಿಂದ ಹಿಡಿದು ಬೆಂಗಳೂರುವರೆಗೂ ಇದೆ ನಡೆಯುತ್ತಿದೆ. ಶಾಸಕರ ಪರವಾಗಿ ಅವರ ಪಿಎಗಳು ಮೀಟಿಂಗ್ ಮಾಡುತ್ತಾರೆ, ವಸೂಲಿ ಮಾಡುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ ಪಟ್ಟಿಯನ್ನೇ ಕೊಡಬಹುದು. ಇದಕ್ಕೆ ಮೇಲ್ಪಂಕ್ತಿ ಹಾಕಿದಂತೆ ಸುರ್ಜೇವಾಲ ಅಧಿಕಾರಿಗಳ ಜೊತೆ ಮೀಟಿಂಗ್ ಮಾಡಿದ್ದಾರೆ. ಅಧಿಕಾರಿ ವರ್ಗ ಗೌರವಯುತವಾಗಿ ಕೆಲಸ ಮಾಡುತ್ತಿದೆ. ಸಂಘಟನೆ ಕೆಲಸ ಪಕ್ಷದ ಕಚೇರಿಯಲ್ಲಿ ನಡೆಸಿ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕಡೆ ಅಧಿಕಾರಿಗಳು ಹೊಡೆದಾಡಿಕೊಂಡು ಕಾಲಲ್ಲಿ ಇರುವುದನ್ನು ಕೈಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೂ ದೂರು ನೀಡಿದ್ದಾರೆ. ಇದು ಕಾಂಗ್ರೆಸ್‌ನ ಪ್ರವೃತ್ತಿಯೆಂದು ಲೇವಡಿ ಮಾಡಿದರು.ನಾಲ್ವಡಿ ಒಡೆಯರಿಗಿಂತ ಸಿದ್ದರಾಮಯ್ಯ ಹೆಚ್ಚಿನ ಕೆಲಸ ಮಾಡಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಒಬ್ಬ ಮುಖ್ಯಮಂತ್ರಿ ಮಗನಾಗಿ, ಶಾಸಕರಾಗಿ ಈ ರೀತಿಯ ಹೋಲಿಕೆ ಮಾಡುವುದನ್ನು ಬಿಟ್ಟು, ಒಳ್ಳೆಯ ಕೆಲಸ ಮಾಡಿದ್ದನ್ನು ಹೇಳಬೇಕು. ಮೈಸೂರು ಮಹಾರಾಜರು ರಾಜ್ಯಕ್ಕೆ ಭವಿಷ್ಯ ಕಟ್ಟಿಕೊಟ್ಟ ಧೀಮಂತ ನಾಯಕರು. ಲಿಂಗನಮಕ್ಕಿ ಜಲಾಶಯ ಕಟ್ಟದಿದ್ದರೆ ರಾಜ್ಯಕ್ಕೆ ಬೆಳಕು ಕೊಡಲು ಸಾಧ್ಯವಾಗುತ್ತಿರಲಿಲ್ಲ. ಕೆಆರ್‌ಎಸ್ ಜಲಾಶಯ ಕಟ್ಟಿದ್ದರಿಂದ ಆ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಸಿಕ್ಕಿದೆ. ಆ ಭಾಗದ ಜನರ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಿದ್ದರೆ ಮೈಸೂರು ಮಹಾರಾಜರ ಆಶೀರ್ವಾದ ಇದೆ. ಯತೀಂದ್ರ ಅವರು ಈ ರೀತಿ ಹೋಲಿಕೆ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.