ಸಭೆಗೆ ತಪ್ಪು ಮಾಹಿತಿ: ಎಇಇಗೆ ಷೋಕಾಸ್‌ ನೊಟೀಸ್‌ ನೀಡಲು ಸಚಿವ ಜಾರ್ಜ್‌ ಸೂಚನೆ

| Published : Jun 20 2024, 01:06 AM IST

ಸಭೆಗೆ ತಪ್ಪು ಮಾಹಿತಿ: ಎಇಇಗೆ ಷೋಕಾಸ್‌ ನೊಟೀಸ್‌ ನೀಡಲು ಸಚಿವ ಜಾರ್ಜ್‌ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕಡೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮ ಪಂಚಾಯ್ತಿಗಳ ತಪ್ಪು ಮಾಹಿತಿ ಯನ್ನು ನೀಡಿರುವ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತ ರರಿಗೆ ಷೋಕಾಸ್‌ ನೊಟೀಸ್ ಜಾರಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣಗೆ ಸೂಚಿಸಿದರು.

- ಕಡೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ । ತಪ್ಪು ಮಾಹಿತಿಗೆ ಶಾಸಕ ಆನಂದ್‌ ಅಸಮಧಾನ । ಬರ ನಿರ್ವಹಣಾ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಡೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮ ಪಂಚಾಯ್ತಿಗಳ ತಪ್ಪು ಮಾಹಿತಿ ಯನ್ನು ನೀಡಿರುವ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತ ರರಿಗೆ ಷೋಕಾಸ್‌ ನೊಟೀಸ್ ಜಾರಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣಗೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿಯಲ್ಲಿ ಬುಧವಾರ ನಡೆದ ಬರ ನಿರ್ವಹಣೆ, ಡೆಂಘೀ ಹಾಗೂ ಇತರೆ ವಿಷಯಗಳು ಕುರಿತು ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆ ಆರಂಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಬರ ನಿರ್ವಹಣೆ ಹಾಗೂ ಮುಂದಿನ ದಿನಗಳಲ್ಲಿ ಮಳೆಯಿಂದ ಯಾವುದಾದರೂ ಹಾನಿ ಸಂಭವಿಸಿದರೆ ಕೂಡಲೇ ಸ್ಪಂಧಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುತ್ತಿದ್ದಂತೆ ಕಡೂರು ಶಾಸಕ ಕೆ.ಎಸ್‌. ಆನಂದ್‌ ಆಕ್ಷೇಪ ವ್ಯಕ್ತಪಡಿಸಿದರು. ವರದಿಯಲ್ಲಿ ಕಡೂರು ತಾಲೂಕಿನಲ್ಲಿ ಒಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಎಂದು ದಾಖಲಾಗಿದೆ. ಆದರೆ, ಕಾಮನಕೆರೆ, ಅಣ್ಣಗೆರೆ ಸೇರಿದಂತೆ ಹಲವು ಪಂಚಾಯ್ತಿಗಳಲ್ಲಿ ಸಮಸ್ಯೆ ಇದೆ. ಇದನ್ನು ಡಿಸಿ ಹಾಗೂ ಜಿಪಂ ಸಿಇಒ ಖುದ್ದಾಗಿ ನೋಡಿದ್ದಾರೆ ಎಂದು ಹೇಳಿದರು.

ಆದರೆ, ಈ ಕುರಿತು ಮಾಹಿತಿ ನೀಡಲು ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಇರಲಿಲ್ಲ, ಅವರ ಬದಲಿಗೆ ಅದೇ ಇಲಾಖೆ ಬೇರೊಬ್ಬ ಅಧಿಕಾರಿಯನ್ನು ಸಭೆಗೆ ಕಳುಹಿಸಲಾಗಿತ್ತು. ಅವರಿಂದ ಸ್ಪಷ್ಟ ವಾದ ಉತ್ತರ ಸಿಗಲಿಲ್ಲ, ಇದೇ ವಿಷಯವಾಗಿ ಕಡೂರು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಮಾತನಾಡಿ, ಎಲ್ಲಲ್ಲಿ ನೀರಿನ ಸಮಸ್ಯೆ ಇದೆ ಎಂಬ ಮಾಹಿತಿ ನೀಡುತ್ತಿದ್ದಂತೆ, ತಪ್ಪು ಮಾಹಿತಿ ನೀಡಿರುವ ಎಇಇ ಅವರಿಗೆ ಷೋಕಾಸ್‌ ನೊಟೀಸ್‌ ಜಾರಿ ಮಾಡಬೇಕೆಂದು ಸಚಿವರು ಜಿಪಂ ಸಿಇಒಗೆ ಸೂಚಿಸಿದರು.ಸಮರ್ಪಕ ವಿದ್ಯುತ್‌:

ಮಳೆಗಾಲದಲ್ಲಿ ಗಾಳಿಗೆ ಮರದ ಕೊಂಬೆಗಳು ವಿದ್ಯುತ್‌ ತಂತಿಗಳ ಮೇಲೆ ಬಿದ್ದು ಸಂಪರ್ಕದಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದನ್ನು ತಪ್ಪಿಸಲು ಕೂಡಲೇ ಅಗತ್ಯ ವಿರುವ ಕಡೆಗಳಲ್ಲಿ ಮರದ ಕೊಂಬೆಗಳನ್ನು ಕಟಾವು ಮಾಡಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸಂಬಂಧಪಟ್ಟ ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ಸಚಿವ ಜಾರ್ಜ್‌ ಹೇಳಿದರು.

ರೈತರ ಆತ್ಮಹತ್ಯೆ ವಿಷಯ ಚರ್ಚೆಗೆ ಬರುತ್ತಿದ್ದಂತೆ ಶಾಸಕ ಎಚ್‌.ಡಿ. ತಮ್ಮಯ್ಯ ಮಾತನಾಡಿ, ಆನೆ ತುಳಿತಕ್ಕೆ ಬಲಿಯಾದರೆ ಕೂಡಲೇ ಪರಿಹಾರ ಕೊಡಲಾಗುತ್ತಿದೆ. ಅದೇ ರೀತಿಯಲ್ಲಿ ಸಾಲಬಾಧೆಯಿಂದ ಮೃತಪಟ್ಟ ರೈತರಿಗೂ ಕೂಡಲೇ ಪರಿಹಾರ ನೀಡಬೇಕೆಂದು ಹೇಳಿದರು.

ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ಕುಟುಂಬಕ್ಕೆ ಪರಿಹಾರ ನೀಡಲು ಕೆಲವು ಕ್ರಮಗಳು ಇವೆ. ಪೊಲೀಸ್‌ ಇಲಾಖೆಯಿಂದ ವರದಿ ಬಂದ ನಂತರವೇ ಉಪ ವಿಭಾಗಾಧಿಕಾರಿಗಳ ನೇತೃತ್ವದ ಸಮಿತಿ ಪರಿಹಾರ ನೀಡಲು ಅವಕಾಶ ಇದೆ ಎಂದು ಹೇಳಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೂಡಲೇ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌, ಶಾಸಕರಾದ ಟಿ.ಡಿ. ರಾಜೇಗೌಡ, ಜಿ.ಎಚ್‌. ಶ್ರೀನಿವಾಸ್‌, ನಯನಾ ಮೋಟಮ್ಮ, ಕಾಡಾ ಅಧ್ಯಕ್ಷ ಡಾ. ಅಂಶುಮಂತ್‌, ರಾಜ್ಯ ಕೃಷಿ ಉತ್ಪನ್ನಗಳ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್‌. ಹರೀಶ್‌, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ನಗರಾ ಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪ ವೋರ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಉಪಸ್ಥಿತರಿದ್ದರು. 19 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅಧ್ಯಕ್ಷತೆಯಲ್ಲಿ ಬುಧವಾರ ಬರ ನಿರ್ವಹಣೆ ಹಾಗೂ ಡೆಂಘೀ ಕುರಿತು ಅಧಿಕಾರಿಗಳ ಸಭೆ ನಡೆಯಿತು. ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಇದ್ದರು.