ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಅ.೨ರಂದು ಗಾಂಧಿ ಜಯಂತಿ ಮುಗಿಸಿ ಬಂದು ಮನೆ ಎದುರು ಆಟವಾಡುತ್ತಿದ್ದ ಇಬ್ಬರು ಬಾಲಕಿಯರು, ಅಮ್ಮನಿಗೆ ಹೊರಗೆ ಶೌಚಕ್ಕೆ ಹೋಗಿ ಬರ್ತೀವಿ ಎಂದು ಹೇಳಿ ನಿಗೂಡವಾಗಿ ನಾಪತ್ತೆಯಾಗಿದ್ದರು. ಆದರೆ ೨ ದಿನಗಳ ನಂತರ ಶನಿವಾರ ಇಬ್ಬರೂ ಬಾಲಕಿಯರು ಮುಳಬಾಗಿಲು ತಾಲೂಕು ಕುಪ್ಪಂಪಾಳ್ಯ ಬಳಿಯ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಅ.೨ರಂದು ಮುಳಬಾಗಿಲು ತಾಲೂಕಿನ ಯಳಚೇಪಲ್ಲಿಯ ಹದಿಮೂರು ವರ್ಷದ ಬಾಲಕಿಯರಾದ ಚೈತ್ರಾಬಾಯಿ ಹಾಗೂ ಧನ್ಯಾಭಾಯಿ ನಾಪತ್ತೆಯಾಗಿದ್ದವರು.
ಅಂದು ಸಂಜೆವರೆಗೂ ಹುಡುಕಾಡಿದ ಕುಟುಂಬಸ್ಥರು ನಂತರ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಕಟಣೆ ಹೊರಡಿಸಿ ಹುಡುಕಾಟ ನಡೆಸುತ್ತಿದ್ದರು. ಹೀಗಿರುವಾಗಲೇ ಶನಿವಾರ ಬೆಳಗ್ಗೆ ಮುಳಬಾಗಿಲು ತಾಲೂಕಿನ ಕುಪ್ಪಂಪಾಳ್ಯದ ಲಕ್ಷ್ಮೀನಾರಾಯಣರ ಕೃಷಿ ಬಾವಿಯಲ್ಲಿ ನಾಪತ್ತೆಯಾಗಿದ್ದ ಬಾಲಕಿಯರ ಶವಗಳು ಪತ್ತೆಯಾಗಿವೆ. ಚೈತ್ರಾಬಾಯಿ ಹಾಗೂ ಧನ್ಯಾಬಾಯಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ಮೃತ ಬಾಲಕಿಯರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.ದಸರಾ ಹಬ್ಬದ ಹಿನ್ನೆಲೆ ನಮ್ಮ ಗ್ರಾಮಕ್ಕೆ ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಯಿಂದ ಜನ ಬಂದಿದ್ದರು, ಹಾಗಾಗಿ ಯಾರೋ ನಮ್ಮ ಮಕ್ಕಳನ್ನು ಕೊಲೆ ಮಾಡಿ ಬಿಸಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮ ಮಕ್ಕಳನ್ನು ಯಾರೋ ಕರೆದುಕೊಂಡು ಹೊಡೆದು ಕೊಲೆ ಮಾಡಿದ್ದಾರೆ, ಮುಖದ ಮೇಲೆ ಗಾಯದ ಗುರುತುಗಳಿವೆ, ಕಣ್ಣು ಹೊರಗೆ ಬಂದಿದೆ ಎಂದು ಕುಟುಂಬಸ್ಥರು ಕುಟುಂಬಸ್ಥರು ಆರೋಪಿಸಿದರು. ಶವಗಳ ಸುತ್ತ ಅನುಮಾನದ ಹುತ್ತ:ಚೈತ್ರಾಬಾಯಿ ಹಾಗೂ ಧನ್ಯಾಬಾಯಿ ಇಬ್ಬರು ಒಳ್ಳೆಯ ಸ್ನೇಹಿತೆಯರು, ಒಂದೇ ಸ್ಕೂಲಿನಲ್ಲಿ ಓದುತ್ತಿದ್ದವರು. ಚೈತ್ರಾಬಾಯಿಗೆ ತಾಯಿ ಇರಲಿಲ್ಲ, ತಂದೆಯೂ ಆಕೆಯನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಮಾವ ರಾಘವೇಂದ್ರ ಅವರೇ ಆಕೆಯನ್ನು ತಮ್ಮ ಮಗಳಂತೆ ಸಾಕಿ ಸಲಹುತ್ತಿದ್ದರು. ಧನ್ಯಾಬಾಯಿಗೆ ತಂದೆ- ತಾಯಿ ಇಬ್ಬರೂ ಇದ್ದಾರೆ, ಬಾಲಕಿಯರಿಬ್ಬರೂ ಅಕ್ಕಪಕ್ಕದ ಮನೆಯವರು, ಹಾಗಾಗಿ ಶಾಲೆಯಲ್ಲಿ ಹಾಗೂ ಮನೆಯ ಬಳಿಯೂ ಒಳ್ಳೆಯ ಸ್ನೇಹಿತರಾಗಿದ್ದವರು. ಇಬ್ಬರೂ ಮಕ್ಕಳು ನಿಗೂಡವಾಗಿ ನಾಪತ್ತೆಯಾಗಿ, ಈಗ ಶವವಾಗಿ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇಬ್ಬರ ಶವಗಳು ಸಿಕ್ಕಿರುವ ಬಾವಿ ಬಳಿ ದೇವಾಲಯದಿಂದ ಕಳ್ಳತನ ಮಾಡಿರುವ ಹುಂಡಿಯೊಂದು ಪತ್ತೆಯಾಗಿದೆ. ಸದ್ಯ ಈ ಬಾಲಕಿಯರ ಸಾವಿಗೂ ಆ ಹುಂಡಿಗೂ ಏನಾದರೂ ಸಂಬಂಧ ಇದೆಯಾ ಎಂಬ ಅನುಮಾನವಿದೆ.ಇಲ್ಲವೇ ರಜೆ ಎಂದು ಈ ಬಾಲಕಿಯರಿಬ್ಬರೂ ಬಾವಿ ಬಳಿ ಆಟವಾಡಲು ಬಂದು ಕಾಲುಜಾರಿ ಬಿದ್ದು ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಯೇ ಎಂಬ ಹಲವು ಅನುಮಾನಗಳು ಪೊಲೀಸರ ತನಿಖೆಯಿಂದ ಬಗೆಹರಿಯಬೇಕಿದೆ. ಸ್ಥಳಕ್ಕೆ ಶ್ವಾನದಳ, ವಿಧಿವಿಜ್ಞಾನ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಎಸ್ಪಿ ನಿಖಿಲ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.