ಸಾರಾಂಶ
ಎಂ. ಪ್ರಹ್ಲಾದ್ ಕನಕಗಿರಿ
ಪಟ್ಟಣದ ಎಪಿಎಂಸಿ ವಾಣಿಜ್ಯ ಮಳಿಗೆಗಳನ್ನು ನಿಯಮ ಮೀರಿ ನಿರ್ಮಿಸಿಕೊಂಡಿದ್ದಲ್ಲದೇ ಈ ಪ್ರಕರಣ ಲೋಕಾಯುಕ್ತ ಅಂಗಳಕ್ಕೆ ಹೋಗಿದ್ದರೂ ಮಳಿಗೆ ಮಾಲೀಕರು ಅಕ್ರಮ ಕಾಮಗಾರಿ ನಡೆಸಲು ಮುಂದಾಗಿದ್ದಾರೆ.ಪಟ್ಟಣದಿಂದ ತಾವರಗೇರಾಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಎಪಿಎಂಸಿಯಿಂದ ಹಲವು ವರ್ಷಗಳ ಹಿಂದೆ ಕಂಪೌಂಡ್ ಸಹಿತ ವಾಣಿಜ್ಯ ಮಳಿಗೆಗಳು ನಿರ್ಮಾಣಗೊಂಡಿದ್ದವು. ಕಂಪೌಂಡ್ ಪಕ್ಕದಲ್ಲೆ ಬಡವರು, ನಿರ್ಗತಿಕರು ಶೆಡ್ ಹಾಕಿಕೊಂಡು ಪಂಕ್ಚರ್ ಶಾಪ್, ಬೈಕ್ ರಿಪೇರಿ, ಹೋಟೆಲ್ ಸೇರಿದಂತೆ ನಾನಾ ಅಂಗಡಿಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ಸಚಿವ ಶಿವರಾಜ ತಂಗಡಗಿ ಸೂಚನೆ ಮೇರೆಗೆ ನಗರದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ಈ ಸ್ಥಳದಲ್ಲಿದ್ದ ಶೆಡ್‌ಗಳನ್ನು ತೆರವುಗೊಳಿಸಲಾಗಿದೆ. ಕಂಪೌಂಡ್ ತೆರವಾಗಿದ್ದರಿಂದ ಎಪಿಎಂಸಿ ಮಳಿಗೆ ಮಾಲೀಕರು ತಮ್ಮ ಅಂಗಡಿಗಳ ಹಿಂಭಾಗದಲ್ಲಿ ಶೆಲ್ಟರ್ ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸಲು ಮುಂದಾಗಿದ್ದಾರೆ. ಮುಖ್ಯ ರಸ್ತೆಯ ಮುಖವಾಗಿ ವಾಣಿಜ್ಯ ಮಳಿಗೆಗಳ ವ್ಯಾಪಾರ ನಡೆಸಲು ಅಥವಾ ಶೆಲ್ಟರ್ ನಿರ್ಮಿಸಿಕೊಂಡು ಬಾಗಿಲು ತೆರೆಯುವುದಕ್ಕಾಗಲಿ ಅವಕಾಶ ಇಲ್ಲ.
ಆದರೆ, ಪೇಟಾ ಕಾರ್ಯಕರ್ತರು ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸಿಕೊಂಡಿದ್ದಲ್ಲದೇ ಸಂಬಂಧಪಟ್ಟ ಇಲಾಖೆಯವರಿಂದ ಪರವಾನಗಿ ಪಡೆಯದೆ ಅಕ್ರಮವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರಲ್ಲಿ ದೂರು ಸಲ್ಲಿಕೆಯಾದರೂ ಅಕ್ರಮ ಕಾಮಗಾರಿ ಮುಂದುವರಿದಿದೆ. ಈಗಾಗಲೇ ಪ್ರಕಣರದ ಕುರಿತು ಲೋಕಾಯುಕ್ತರು ಎಪಿಎಂಸಿ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿದ್ದು, ಕ್ರಮಕ್ಕೆ ಮುಂದಾಗಿದ್ದಾರೆ.ಸಾಮಾನ್ಯ ಸಭೆಯಲ್ಲೂ ಚರ್ಚೆ: ಎಪಿಎಂಸಿ ನಿಯಮ ಮೀರಿ ಪೇಟಾ ಕಾರ್ಯಕರ್ತರು ನಿಯಮಾನುಸಾರವಾಗಿ ಹಂಚಿಕೆಯಾದ ಮಳಿಗೆಗಳನ್ನು ವಾಣಿಜ್ಯೀಕರಣಗೊಳಿಸಲು ಉದ್ದೇಶಿರುವುದನ್ನು ಪಪಂ ಸದಸ್ಯರು ವಿರೋಧಿಸಿದ್ದಾರೆ. ಸಮಸ್ಯೆ ಸರಿಪಡಿಸದಿದ್ದರೆ ನಗರದ ಸೌಂದರ್ಯದ ಉದ್ದೇಶದಿಂದ ತೆರವು ಮಾಡಲಾಗಿರುವ ಬಡ ಮತ್ತು ನಿರ್ಗತಿಕ ವ್ಯಾಪಾರಸ್ಥರಿಗೆ ಅನ್ಯಾಯವಾಗಲಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವ ಕೂಗು ಮಾ. ೬ರಂದು ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಸೇರಿದಂತೆ ಹಲವು ಸದಸ್ಯರಿಂದ ವ್ಯಕ್ತವಾಗಿದೆ.
ಎಪಿಎಂಸಿ ಕಂಪೌಂಡ್ ಕಿತ್ತೆಸೆದಿರುವ ಹಾಗೂ ಅಕ್ರಮ ಕಾಮಗಾರಿಯ ಕುರಿತಂತೆ ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರ, ಎಪಿಎಂಸಿ ಕಾರ್ಯದರ್ಶಿ ಸೇರಿದಂತೆ ಹಲವು ಅಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿವೆ.ಯಾವುದೇ ನೊಟೀಸ್ ನೀಡದೆ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಇದರ ಪಕ್ಕದಲ್ಲೆ ಇದ್ದ ಎಪಿಎಂಸಿ ಕಂಪೌಂಡ್ ಕಿತ್ತೆಸೆದು ಲೆವೆಲ್ ಮಾಡಲಾಗಿದೆ. ಪೇಟಾ ಕಾರ್ಯಕರ್ತರ ತಮ್ಮ ಮಳಿಗೆಗಳನ್ನು ವಾಣಿಜ್ಯೀಕರಣಗೊಳಿಸಲು ಹುನ್ನಾರ ನಡೆಸಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ ಎಂದು ದೂರುದಾರ ಡಾ. ರಂಗಾರೆಡ್ಡಿ ಹೇಳಿದ್ದಾರೆ.
ಪಪಂ ವ್ಯಾಪ್ತಿಯ ಪುಟ್‌ಪಾತ್‌ನಲ್ಲಿರುವ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಲಾಗಿದೆ. ಎಪಿಎಂಸಿ ಕಂಪೌಂಡ್ ವಿಚಾರ ನನಗೆ ಸಂಬಂಧಿಸಿದ್ದಲ್ಲ. ಇನ್ನುಳಿದ ನಾಲ್ಕಾರು ಶೆಡ್‌ಗಳನ್ನು ಕೋರ್ಟ್ ತೀರ್ಪಿನ ನಂತರ ತೆರವುಗೊಳಿಸಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಹೇಳಿದ್ದಾರೆ.ಎಪಿಎಂಸಿ ಕಂಪೌಂಡ್ ಕಿತ್ತೆಸೆದಿರುವುದು, ಮಳಿಗೆಗಳನ್ನು ವಾಣಿಜ್ಯೀಕರಣಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎಂಟು ಜನರಿಗೆ ನೊಟೀಸ್ ಜಾರಿ ಮಾಡಲಾಗಿದೆ. ಏಳು ದಿನದೊಳಗಾಗಿ ಉತ್ತರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟಿ ತಿಳಿಸಿದ್ದಾರೆ.