ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಮಿಷನ್‌ ವಿದ್ಯಾಕಾಶಿ

| Published : Aug 18 2024, 01:54 AM IST

ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಮಿಷನ್‌ ವಿದ್ಯಾಕಾಶಿ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳ ಆಗಬೇಕು ಎಂದರೆ ಮಕ್ಕಳು ತಪ್ಪದೆ ಶಾಲೆಗೆ ಬರಬೇಕು. ವೈಯಕ್ತಿಕ ಕಾಳಜಿ, ಕಳಕಳಿ ಅಗತ್ಯವಿದೆ. ಶಿಕ್ಷಕರು ಪಠ್ಯ ಪೂರ್ಣಗೊಳಿಸುವ ಕಾರ್ಯಕ್ಕೆ ಕಟ್ಟು ಬೀಳದೆ, ವಿದ್ಯಾರ್ಥಿಯಲ್ಲಿ ಓದು, ಬರೆಯುವ ಅಭಿರುಚಿ ಬೆಳೆಸಬೇಕು.

ಹುಬ್ಬಳ್ಳಿ:

ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಶೇ. 100ರಷ್ಟು ಮಾಡಲು ಜಿಲ್ಲಾಡಳಿತ ಮಿಷನ್‌ ವಿದ್ಯಾಕಾಶಿ ಯೋಜನೆ ಸಿದ್ಧಪಡಿಸಿದೆ.

ಈ ಯೋಜನೆಯಡಿ ಜೆಎಸ್ಎಸ್ ಕಾಲೇಜು ಆವರಣದ ಸನ್ನಿಧಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಎಲ್ಲ ಪ್ರೌಢಶಾಲೆ ಮುಖ್ಯಶಿಕ್ಷಕರ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಆಯೋಜಿಸಿದ್ದ ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಯೋಜನೆ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಎಸ್ಎಸ್ಎಲ್‌ಸಿ ಪರೀಕ್ಷೆ ಮಕ್ಕಳ ವಿದ್ಯಾರ್ಥಿದ ಜೀವನ ಮುಖ್ಯ ಘಟ್ಟ. ಕಳೆದ ಸಾಲಿನ ಪರೀಕ್ಷಾ ಫಲಿತಾಂಶ ಅತೀ ಕಡಿಮೆ ಆಗಿದ್ದು, ಶೇ.74.85 ಫಲಿತಾಂಶ ಬಂದಿದೆ. ಇದನ್ನು ಸುಧಾರಿಸಿ ಶೇ.100ರಷ್ಟು ಮಾಡುವಲ್ಲಿ ವಿದ್ಯಾರ್ಥಿಗಳ ಪಾಲಕರ ಮತ್ತು ಶಾಲಾ ಮುಖ್ಯಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು

ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಶಿಕ್ಷಣ, ಸಂವಹನ ಹಾಗೂ ಶಾಲಾ ಆಡಳಿತದ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ, ಕಳೆದ 2 ತಿಂಗಳಿಂದ ಮಿಷನ್ ವಿದ್ಯಾಕಾಶಿ 2024-25ರ ಯೋಜನೆಯಡಿ ವಿವಿಧ ಕ್ರಮ ರೂಪಿಸಲಾಗುತ್ತಿದೆ. ಮಿಷನ್ ವಿದ್ಯಾಕಾಶಿ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳ ಆಗಬೇಕು ಎಂದರೆ ಮಕ್ಕಳು ತಪ್ಪದೆ ಶಾಲೆಗೆ ಬರಬೇಕು. ವೈಯಕ್ತಿಕ ಕಾಳಜಿ, ಕಳಕಳಿ ಅಗತ್ಯವಿದೆ. ಶಿಕ್ಷಕರು ಪಠ್ಯ ಪೂರ್ಣಗೊಳಿಸುವ ಕಾರ್ಯಕ್ಕೆ ಕಟ್ಟು ಬೀಳದೆ, ವಿದ್ಯಾರ್ಥಿಯಲ್ಲಿ ಓದು, ಬರೆಯುವ ಅಭಿರುಚಿ ಬೆಳೆಸಬೇಕೆಂದು ಅವರು ಹೇಳಿದರು.

ಶಾಲಾ ಮುಖ್ಯಸ್ಥರು ಪ್ರತಿದಿನ ತಪ್ಪದೇ ನಿಗದಿತ ಸಮಯಕ್ಕೆ ಶಾಲೆಯಲ್ಲಿ ಹಾಜರಿದ್ದು ಶಿಕ್ಷಕರ ಪಾಠ, ವಿದ್ಯಾರ್ಥಿಗಳ ಕಲಿಕೆ ಪರಿಶೀಲಿಸಬೇಕು. ಶಾಲೆಯ ಮೇಲುಸ್ತುವಾರಿ ವಹಿಸಬೇಕು. ನಿರೀಕ್ಷಿತ ಫಲಿತಾಂಶ ಬರದಿದಲ್ಲಿ ಶಾಲಾವಾರು ಕಾರಣ ಅಧ್ಯಯನ ಮಾಡಿ, ಸೂಕ್ತಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ನೋಡಲ್ ನೇಮಕ:

ಜಿಲ್ಲೆಯ ಪ್ರತಿ ಪ್ರೌಢಶಾಲೆಗೆ ಮಿಷನ್ ಯೋಜನೆಯಡಿ ನೀಡಿರುವ ಕಾರ್ಯಗಳು ನಿಯಮಿತವಾಗಿ ನಡೆಯುವಂತೆ ನಿಗಾವಹಿಸಲು ಮತ್ತು ಶಾಲೆಗೆ ಸಹಕಾರ ನೀಡಲು ಬೇರೆ ಇಲಾಖೆಯ ಓರ್ವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಶಾಲಾ ನೋಡಲ್ ಎಂದು ನೇಮಕ ಮಾಡಲಾಗುತ್ತದೆ. ಪ್ರತಿ 15 ದಿನಕೊಮ್ಮೆ ನೋಡಲ್ ಅಧಿಕಾರಿಯಿಂದ ಶಾಲಾ ಶೈಕ್ಷಣಿಕ ಸುಧಾರಣೆ, ಮಕ್ಕಳ ಹಾಜರಾತಿ ಕುರಿತು ನೇರವಾಗಿ ವರದಿ ಪಡೆಯಲಾಗುತ್ತದೆ. ಪ್ರತಿಯೊಬ್ಬ ಮುಖ್ಯ ಶಿಕ್ಷಕ, ಸಹ ಶಿಕ್ಷಕ ಈ ಕಾರ್ಯದಲ್ಲಿ ಪ್ರಾಮಾಣಿಕವಾಗಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.

ಶ್ರಮಕರಿಗೆ ಸನ್ಮಾನ:

ಪ್ರತಿ ತಿಂಗಳು ಪ್ರತಿ ಶಾಲೆಯ ಶೈಕ್ಷಣಿಕ ಸಾಧನೆ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಸುಧಾರಣೆ ಆಧಾರದಲ್ಲಿ ಉತ್ತಮ ಶಾಲೆ, ಉತ್ತಮ ಶಿಕ್ಷಕ, ಉತ್ತಮ ಮುಖ್ಯ ಶಿಕ್ಷಕ, ಉತ್ತಮ ವಿದ್ಯಾರ್ಥಿ ಹಾಗೂ ಉತ್ತಮ ತಾಲೂಕು ಆಯ್ಕೆ ಮಾಡಿ ಬಹುಮಾನ, ಪ್ರಶಂಸಾ ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಧಾರವಾಡ ಐಐಟಿ ಡೀನ್ ಮತ್ತು ಮಿಷನ್ ವಿದ್ಯಾಕಾಶಿ ಯೋಜನೆ ಉಪಾಧ್ಯಕ್ಷ ಪ್ರೊ. ಎಸ್.ಎಂ. ಶಿವಪ್ರಕಾಶ ಮಾತನಾಡಿ, ಎಲ್ಲರ ಪ್ರಾಮಾಣಿಕ ಪ್ರಯತ್ನ ಹಾಗೂ ಕಳಕಳಿಯಿಂದ ಮಾತ್ರ ಫಲಿತಾಂಶ ಸುಧಾರಣೆ ಸಾಧ್ಯ. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರನ್ನು ಇನ್ನಷ್ಟು ತರಬೇತಿಗೊಳಿಸಿ, ಪ್ರಯತ್ನಿಸೋಣ ಎಂದರು.

ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಜಿತ್‌ ಪ್ರಸಾದ, ಅಂತರಾಷ್ಟ್ರೀಯ ಪ್ರೇರಕ ಭಾಷಣಕಾರ ಪ್ರದೀಪ ಆಚಾರ್ಯ ಪ್ರೇರಣಾ ಭಾಷಣ ಮಾಡಿದರು. ಹುಡಾ ಆಯುಕ್ತ ಸಂತೋಷ ಬಿರಾದಾರ ಮಾತನಾಡಿದರು. ಕಾರ್ಯಾಗಾರ ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿದರು.

ಡಯಟ್ ಪ್ರಾಚಾರ್ಯ ಜಯಶ್ರೀ ಕಾರೇಕರ ಸೇರಿದಂತೆ ಹಲವರು ಇದ್ದರು. ಕಾರ್ಯಾಗಾರದಲ್ಲಿ ಜಿಲ್ಲೆಯ 445 ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.