ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ತಡೆಗೆ ಇರುವ ಕಾನೂನು ದುರ್ಬಳಕೆ: ಎಸ್.ಸಿ.ನಳಿನ

| Published : Nov 14 2025, 01:45 AM IST

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ತಡೆಗೆ ಇರುವ ಕಾನೂನು ದುರ್ಬಳಕೆ: ಎಸ್.ಸಿ.ನಳಿನ
Share this Article
  • FB
  • TW
  • Linkdin
  • Email

ಸಾರಾಂಶ

ಲೈಂಗಿಕ ಅಪರಾಧಗಳು ನಮ್ಮ ಸಮಾಜದಲ್ಲಿ ಅತ್ಯಂತ ಗಂಭೀರ ಅಪರಾಧವಾಗಿದೆ. ಹೊರಗಿನ ವ್ಯಕ್ತಿಗಳಿಂದ ಮಾತ್ರವಲ್ಲದೆ ಕೆಲವು ಶಾಲಾ ಶಿಕ್ಷಕರಿಂದಲೂ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದೆ. ಇವುಗಳ ಬಗ್ಗೆ ಮಕ್ಕಳು ಮೊದಲು ಪೋಷಕರ ಗಮನಕ್ಕೆ ತಂದು ಕಾನೂನು ನೆರವು ಪಡೆದುಕೊಳ್ಳುವುದು ಅವಶ್ಯಕ.

ಕನ್ನಡಪ್ರಭ ವಾರ್ತೆ ಮದ್ದೂರು

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ತಡೆಗೆ ಕಠಿಣ ಕಾನೂನು ಜಾರಿಯಲ್ಲಿದ್ದರೂ ಅವುಗಳ ದುರ್ಬಳಕೆ ಹೆಚ್ಚಾಗುತ್ತಿದೆ ಎಂದು ಜೆಎಂಎಫ್ ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಸಿ.ನಳಿನ ವಿಷಾದಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಡೆದ ಲೈಂಗಿಕ ಅಪರಾಧಗಳು ಮತ್ತು ಮಕ್ಕಳ ರಕ್ಷಣೆ ಕುರಿತು ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಲೈಂಗಿಕ ಅಪರಾಧಗಳು ನಮ್ಮ ಸಮಾಜದಲ್ಲಿ ಅತ್ಯಂತ ಗಂಭೀರ ಅಪರಾಧವಾಗಿದೆ. ಹೊರಗಿನ ವ್ಯಕ್ತಿಗಳಿಂದ ಮಾತ್ರವಲ್ಲದೆ ಕೆಲವು ಶಾಲಾ ಶಿಕ್ಷಕರಿಂದಲೂ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದೆ. ಇವುಗಳ ಬಗ್ಗೆ ಮಕ್ಕಳು ಮೊದಲು ಪೋಷಕರ ಗಮನಕ್ಕೆ ತಂದು ಕಾನೂನು ನೆರವು ಪಡೆದುಕೊಳ್ಳುವುದು ಅವಶ್ಯಕ ಎಂದರು.

ಲೈಂಗಿಕ ದೌರ್ಜನ್ಯ ತಡೆಗಟ್ಟಲು ಕೇವಲ ಸರ್ಕಾರ ಮತ್ತು ಕಾನೂನುಗಳಿಂದ ಮಾತ್ರ ಸಾಧ್ಯವಿಲ್ಲ ಇದಕ್ಕೆ ಪೋಷಕರು ಮತ್ತು ಸಾರ್ವಜನಿಕರ ಸಹಕಾರ ಮುಖ್ಯ. 16 ರಿಂದ 18ನೇ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ಸಿ ಆರ್ ಪಿ ಸಿ 375ನೇ ಕಲಂ ಅತ್ಯಾಚಾರ ಎಂದು ಪರಿಗಣಿಸುತ್ತಿರಲಿಲ್ಲ. ಈ ಲೋಪವನ್ನು ಅಪರಾಧಿಗಳು ದುರ್ಬಳಕೆ ಮಾಡಿಕೊಂಡು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದರು.

ದೆಹಲಿ ನಿರ್ಭಯ ಅತ್ಯಾಚಾರ ಪ್ರಕರಣದ ನಂತರ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕು. ಅಂತಹ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಮಾಡಬೇಕು ಎಂಬ ಆಗ್ರಹ ಕೇಳಿ ಬಂದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಜಾರಿಗೊಂಡಿದೆ. ಲೈಂಗಿಕ ದೌರ್ಜನ್ಯ ನಡೆಸುತ್ತಿರುವವರಲ್ಲಿ ಬಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಇದಕ್ಕೆ ಅಪರಾಧ ಕೃತ್ಯಗಳನ್ನು ಅತಿಯಾಗಿ ವಿಶ್ಲೇಷಿಸಿ ಕಾರ್ಯಕ್ರಮ ರೂಪಿಸುವ ಟಿವಿ ಮತ್ತು ಅತಿರಂಜಿತ ಸಿನಿಮಾಗಳು ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಒಂದನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಿ.ಎಂ.ಪಾರ್ವತಿ ಮಾತನಾಡಿ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಮತ್ತು ಮಹಿಳೆಯರಿಗೆ ಅನುಕೂಲವಾಗಲೆಂದೆಸರ್ಕಾರ ರೂಪಿಸಿರುವ ಹಲವು ಯೋಜನೆ, ಕಾಯ್ದೆ ಮಾಹಿತಿ ಮತ್ತು ಸಹಾಯ ಹಸ್ತ ಸಮಯಕ್ಕೆ ಸರಿಯಾಗಿ ದೊರಕುತ್ತಿಲ್ಲ. ಹೀಗಾಗಿ ಸ್ವಯಂ ಸೇವಾ ಸಂಸ್ಥೆಗಳು ಸಂತ್ರಸ್ತ ಮಹಿಳೆಯರು ಮತ್ತು ಮಕ್ಕಳನ್ನು ಗುರುತಿಸಿ ನೆರವು ಒದಗಿಸಲು ಸಹಕರಿಸಬೇಕು ಎಂದರು.

ತಾಲೂಕು ಕಾನೂನು ಸೇವಾ ಸಮಿತಿ ಸಲಹೆಗಾರ ಎ. ಪ್ರಸನ್ನ ಸಂಪನ್ಮೂಲ ಭಾಷಣ ಮಾಡಿದರು. ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಎ.ಸಿ.ಗೀತಾ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಕಾರ್ಯದರ್ಶಿ ಎಂ.ಜೆ.ಸುಮಂತ್ ಮತ್ತು ಕಾಲೇಜಿನ ಆಧ್ಯಾಪಕ ವರ್ಗದವರು ಭಾಗವಹಿಸಿದ್ದರು.