ಹರಿಹರ ಬೆಸ್ಕಾಂ ಉಗ್ರಾಣದಲ್ಲಿ ಸಾಮಗ್ರಿಗಳ ದುರುಪಯೋಗ: ಎಫ್‌ಐಆರ್‌

| Published : Oct 01 2025, 01:00 AM IST

ಹರಿಹರ ಬೆಸ್ಕಾಂ ಉಗ್ರಾಣದಲ್ಲಿ ಸಾಮಗ್ರಿಗಳ ದುರುಪಯೋಗ: ಎಫ್‌ಐಆರ್‌
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಬೆಸ್ಕಾಂ ಉಗ್ರಾಣದಲ್ಲಿ ಕೋಟ್ಯಂತರ ರು. ಮೌಲ್ಯದ ಸಾಮಗ್ರಿಗಳ ದುರುಪಯೋಗ ಆರೋಪದ ಮೇಲೆ ಸಹಾಯಕ ಉಗ್ರಾಣ ಪಾಲಕ ಅರುಣಕುಮಾರ್ ಜಿ.ಎನ್. ಹಾಗೂ ಮತ್ತಿತರರ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಹರಿಹರ: ನಗರದ ಬೆಸ್ಕಾಂ ಉಗ್ರಾಣದಲ್ಲಿ ಕೋಟ್ಯಂತರ ರು. ಮೌಲ್ಯದ ಸಾಮಗ್ರಿಗಳ ದುರುಪಯೋಗ ಆರೋಪದ ಮೇಲೆ ಸಹಾಯಕ ಉಗ್ರಾಣ ಪಾಲಕ ಅರುಣಕುಮಾರ್ ಜಿ.ಎನ್. ಹಾಗೂ ಮತ್ತಿತರರ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

2018ರ ಜೂನ್ 19ರಿಂದ 2025ರ ಸೆ.16 ರವರೆಗೆ ಹರಿಹರ ಬೆಸ್ಕಾಂ ಉಗ್ರಾಣದಲ್ಲಿ ಸಹಾಯಕ ಉಗ್ರಾಣ ಪಾಲಕರಾಗಿ ಸೇವೆ ನಿರ್ವಹಿಸುತ್ತಿದ್ದ ಆರೋಪಿ ಅರುಣಕುಮಾರ್, ಲೆಡ್ಜರ್ ದಾಖಲೆಗಳಲ್ಲಿ ಸಾಮಗ್ರಿಗಳು ನೈಜವಾಗಿ ಉಗ್ರಾಣದಲ್ಲಿ ಇರುವಂತೆ ನಮೂದಿಸಿ, ಅವುಗಳನ್ನು ಹೊರಕ್ಕೆ ತೆಗೆದು ದುರುಪಯೋಗ ಮಾಡಿರುವ, ವಿಶೇಷವಾಗಿ ಗ್ಯಾರಂಟಿ ಅವಧಿಯಲ್ಲಿದ್ದ ಪರಿವರ್ತಕಗಳನ್ನು ದುರಸ್ತಿ ಕೇಂದ್ರಗಳಿಗೆ ಕಳುಹಿಸದೇ, ಇನ್ವಾಯ್ಸ್‌ ಸಂಖ್ಯೆಗಳನ್ನು ಮಾತ್ರ ಲೆಡ್ಜರ್‌ನಲ್ಲಿ ದಾಖಲಿಸಿ ವಂಚನೆ ಮಾಡಿದ ಬಗ್ಗೆ ಆರೋಪ ಕೇಳಿಬಂದಿದೆ.

2025ರ ಏಪ್ರಿಲ್‌ನಲ್ಲಿ ತ್ರೈಮಾಸಿಕ ಪರಿಶೀಲನೆ ನಡೆಸಿದ ಆಂತರಿಕ ಲೆಕ್ಕಪರಿಶೋಧಕರು, ಪರಿವರ್ತಕ ತೈಲದಲ್ಲಿ 89,270 ಲೀಟರ್ ಕೊರತೆ ಕಂಡುಬಂದಿದ್ದು, ಸಂಸ್ಥೆಗೆ ₹56,67,864 ಆರ್ಥಿಕ ನಷ್ಟ ಉಂಟಾಗಿದೆ ಎಂದು ವರದಿ ನೀಡಿದ್ದರು. ವರದಿ ಹಿನ್ನೆಲೆ, ಮೇಲಾಧಿಕಾರಿಗಳು ಉಗ್ರಾಣದಲ್ಲಿ ಸಾಮಗ್ರಿಗಳ ಎಣಿಕೆ ಕಾರ್ಯ ಕೈಗೊಂಡು, ಉಗ್ರಾಣದಲ್ಲಿದ್ದ ಸಾಮಗ್ರಿಗಳ ಭೌತಿಕ ಎಣಿಕೆ ಮತ್ತು ಲೆಡ್ಜರ್ ದಾಖಲೆಗಳನ್ನು ಹೋಲಿಕೆ ಮಾಡಿದಾಗ, ಒಟ್ಟು 39 ವಿಧದ ಸಾಮಗ್ರಿಗಳಲ್ಲಿ ಭಾರೀ ಕೊರತೆ ಕಂಡುಬಂದಿತ್ತು.

ತೈಲ ದುರುಪಯೋಗ ಮಾತ್ರವಲ್ಲದೇ, ₹72,58,014 ಮೌಲ್ಯದ 102 ಪರಿವರ್ತಕಗಳು ಬಫರ್‌ ಸ್ಟಾಕ್‌ನಿಂದ ಅಜ್ಞಾತವಾಗಿ ಕಣ್ಮರೆಯಾಗಿದ್ದವು. ಇದಲ್ಲದೆ ₹12,75,937 ಮೌಲ್ಯದ 21 ಪರಿವರ್ತಕಗಳು ಲೆಡ್ಜರ್‌ನಲ್ಲಿ ದುರಸ್ತಿದಾರರಿಗೆ ಇನ್ವಾಯ್ಸ್ ಮಾಡಿದಂತೆ ದಾಖಲಾಗಿದ್ದರೂ ವಾಸ್ತವದಲ್ಲಿ ದುರಸ್ತಿದಾರರಿಗೆ ಹಸ್ತಾಂತರವಾಗಿರಲಿಲ್ಲ. ಒಟ್ಟಾರೆ ₹3,85,69,119.05 ಮೌಲ್ಯದ ಸಾಮಗ್ರಿಗಳನ್ನು ದುರುಪಯೋಗ ಮಾಡಲಾಗಿದೆ ಎಂಬುದು ಪರಿಶೀಲನೆಯಿಂದ ದೃಢಪಟ್ಟಿದೆ. ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕಿರಣ ದೂರಿನಲ್ಲಿ ವಿವರಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- - -

(ಸಾಂದರ್ಭಿಕ ಚಿತ್ರ)