ದೇವಿಯ ಸನ್ನಿಧಿಯಲ್ಲಿ ಬಡವ, ಶ್ರೀಮಂತ, ಪ್ರಭಾವಿ ಎಂಬ ಯಾವುದೇ ಭೇದಭಾವ ಇರಬಾರದು. ಸಣ್ಣ ಮಕ್ಕಳೊಂದಿಗೆ ಬರುವ ತಾಯಂದಿರು, ವಯೋವೃದ್ಧರು ಹಾಗೂ ದೂರದ ಊರುಗಳಿಂದ ಆಗಮಿಸುವ ಭಕ್ತರ ಅನುಕೂಲಕ್ಕೆ ಆದ್ಯತೆ ನೀಡಬೇಕಿತ್ತು. ಆದರೆ ವಿಶೇಷ ಪ್ರವೇಶ ಪಡೆದವರಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಸಾಮಾನ್ಯ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿದರು. ದರ್ಶನದ ಸಂದರ್ಭದಲ್ಲಿ ವಿತರಿಸಿರುವ ಪ್ರೋಟೋಕಾಲ್ ಪಾಸ್ಗಳ ಸಂಖ್ಯೆ, ಸೌಲಭ್ಯ ಪಡೆದವರ ವಿವರ, ಪಾಸ್ ವಿತರಣೆಗೆ ಅನುಸರಿಸಿದ ಸರ್ಕಾರದ ನಿಯಮಗಳು, ಪ್ರತಿದಿನ ನೀಡಿದ ಪಾಸ್ಗಳ ಪ್ರಮಾಣ, ಅಧಿಕಾರಿಗಳ ಅನುಮೋದನೆ ಹಾಗೂ ಪ್ರೋಟೋಕಾಲ್ ಹೆಸರಿನಲ್ಲಿ ಪ್ರವೇಶ ಪಡೆದ ವಾಹನಗಳ ವಿವರಗಳನ್ನು ಜಿಲ್ಲಾಡಳಿತ ಸಾರ್ವಜನಿಕವಾಗಿ ಪ್ರಕಟಿಸಬೇಕು. ಅರ್ಹರ ಜತೆಗೆ ಹೆಚ್ಚುವರಿ ವ್ಯಕ್ತಿಗಳಿಗೆ ಪ್ರವೇಶ ನೀಡಲಾಗಿದೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಹಾಸನಾಂಬೆ ಜಾತ್ರೋತ್ಸವದ ವೇಳೆ ಪ್ರೋಟೋಕಾಲ್ ಹೆಸರಿನಲ್ಲಿ ನಡೆದಿರುವ ತಾರತಮ್ಯ, ವಿಶೇಷ ಪ್ರವೇಶದ ದುರ್ಬಳಕೆ ಹಾಗೂ ಸಾಮಾನ್ಯ ಭಕ್ತರಿಗೆ ಆಗಿರುವ ಅನ್ಯಾಯದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಹಾಗೂ ಹಾಸನ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಜೆ.ಪಿ. ಶೇಖರ್ ಮತ್ತು ವಕೀಲರ ಸಂಘದ ಅಧ್ಯಕ್ಷ ಕಾರ್ಲೆ ಮೊಗಣ್ಣಗೌಡ ಒತ್ತಾಯಿಸಿದ್ದಾರೆ.ನಗರದಲ್ಲಿ ಶುಕ್ರವಾರ ನಡೆದ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಹಾಸನಾಂಬೆ ದೇವಿಯ ದರ್ಶನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಬಿಸಿಲು, ಮಳೆ, ಹಸಿವು ಹಾಗೂ ಆಯಾಸವನ್ನು ಸಹಿಸಿಕೊಂಡು ದರ್ಶನ ಪಡೆಯುವ ಸಾಮಾನ್ಯ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಜಿಲ್ಲಾಡಳಿತದ ಕರ್ತವ್ಯ. ಆದರೆ ಸಾಮಾನ್ಯ ಭಕ್ತರು ನಾಲ್ಕೈದು ಗಂಟೆ ಕಾಯುವ ಸ್ಥಿತಿ ಒಂದೆಡೆಯಾದರೆ, ಪ್ರೋಟೋಕಾಲ್ ಹೆಸರಿನಲ್ಲಿ ಪ್ರಭಾವಿಗಳಿಗೆ ವಿಶೇಷ ಪ್ರವೇಶ ಕಲ್ಪಿಸಲಾಗಿದೆ ಎಂಬ ಆರೋಪಗಳಿವೆ. ದೇವಿಯ ಸನ್ನಿಧಿಯಲ್ಲಿ ಬಡವ, ಶ್ರೀಮಂತ, ಪ್ರಭಾವಿ ಎಂಬ ಯಾವುದೇ ಭೇದಭಾವ ಇರಬಾರದು. ಸಣ್ಣ ಮಕ್ಕಳೊಂದಿಗೆ ಬರುವ ತಾಯಂದಿರು, ವಯೋವೃದ್ಧರು ಹಾಗೂ ದೂರದ ಊರುಗಳಿಂದ ಆಗಮಿಸುವ ಭಕ್ತರ ಅನುಕೂಲಕ್ಕೆ ಆದ್ಯತೆ ನೀಡಬೇಕಿತ್ತು. ಆದರೆ ವಿಶೇಷ ಪ್ರವೇಶ ಪಡೆದವರಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಸಾಮಾನ್ಯ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿದರು. ದರ್ಶನದ ಸಂದರ್ಭದಲ್ಲಿ ವಿತರಿಸಿರುವ ಪ್ರೋಟೋಕಾಲ್ ಪಾಸ್ಗಳ ಸಂಖ್ಯೆ, ಸೌಲಭ್ಯ ಪಡೆದವರ ವಿವರ, ಪಾಸ್ ವಿತರಣೆಗೆ ಅನುಸರಿಸಿದ ಸರ್ಕಾರದ ನಿಯಮಗಳು, ಪ್ರತಿದಿನ ನೀಡಿದ ಪಾಸ್ಗಳ ಪ್ರಮಾಣ, ಅಧಿಕಾರಿಗಳ ಅನುಮೋದನೆ ಹಾಗೂ ಪ್ರೋಟೋಕಾಲ್ ಹೆಸರಿನಲ್ಲಿ ಪ್ರವೇಶ ಪಡೆದ ವಾಹನಗಳ ವಿವರಗಳನ್ನು ಜಿಲ್ಲಾಡಳಿತ ಸಾರ್ವಜನಿಕವಾಗಿ ಪ್ರಕಟಿಸಬೇಕು. ಅರ್ಹರ ಜತೆಗೆ ಹೆಚ್ಚುವರಿ ವ್ಯಕ್ತಿಗಳಿಗೆ ಪ್ರವೇಶ ನೀಡಲಾಗಿದೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಇದಲ್ಲದೆ, ದರ್ಶನಕ್ಕೆ ಬಂದ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಹಾಗೂ ಸುಗಮ ದರ್ಶನದಂತಹ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸದಿರುವ ಬಗ್ಗೆ ಪ್ರಶ್ನಿಸಿದ ಅವರು, ಒಂದೆಡೆ ದೇವಾಲಯದ ಹೆಸರಿನಲ್ಲಿ ಆದಾಯ ಸಂಗ್ರಹವಾಗುತ್ತಿದ್ದರೂ ಮತ್ತೊಂದೆಡೆ ಸಾಮಾನ್ಯ ಭಕ್ತರು ಸಂಕಷ್ಟ ಅನುಭವಿಸುವಂತಾಗಿರುವುದು ಸರಿಯಲ್ಲ ಎಂದರು.ಸರತಿ ಸಾಲಿನಲ್ಲಿ ಭಕ್ತರನ್ನು ಎಳೆದಾಡಿದ ಹಾಗೂ ತಳ್ಳಾಡಿದ ಘಟನೆಗಳ ಕುರಿತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು. ಭಕ್ತರೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸ್ ಸಿಬ್ಬಂದಿಯ ನಡೆ ಬಗ್ಗೆಯೂ ತನಿಖೆಯಾಗಬೇಕು. ಸಾರ್ವಜನಿಕರು ದರ್ಶನ ವ್ಯವಸ್ಥೆಯ ಲೋಪದೋಷಗಳನ್ನು ಅಧಿಕಾರಿಗಳ ಗಮನಕ್ಕೆ ತಂದಾಗ ಅವರೊಂದಿಗೆ ಅಗೌರವದಿಂದ ವರ್ತಿಸಿರುವುದು ಹಾಗೂ ದೂರು ನೀಡಿದವರನ್ನು ಗುರಿಯಾಗಿಸಿಕೊಂಡಿರುವ ಆರೋಪಗಳನ್ನೂ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಅಪರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಆಡಳಿತಾತ್ಮಕ ನಿರ್ಧಾರಗಳು ಮತ್ತು ಪ್ರೋಟೋಕಾಲ್ ಅನುಮೋದನೆಗಳ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿತಸ್ಥರು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಹಾಸನಾಂಬೆ ಜಾತ್ರೆಯ ಅವಧಿಯಲ್ಲಿ ಸಂಗ್ರಹವಾದ ಆದಾಯದ ಸಂಪೂರ್ಣ ಲೆಕ್ಕವನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು. ಮುಂದಿನ ವರ್ಷಗಳಲ್ಲಿ ಹಾಸನಾಂಬೆ ದರ್ಶನಕ್ಕೆ ಬರುವ ಪ್ರತಿಯೊಬ್ಬ ಭಕ್ತನಿಗೂ ಯಾವುದೇ ತಾರತಮ್ಯವಿಲ್ಲದೆ ಸುರಕ್ಷಿತ, ಸುಗಮ ಹಾಗೂ ಗೌರವಯುತ ದರ್ಶನದ ವ್ಯವಸ್ಥೆ ಕಲ್ಪಿಸಬೇಕು. ಹಾಸನಾಂಬೆ ಯಾರೊಬ್ಬರ ಸ್ವತ್ತಲ್ಲ, ಎಲ್ಲ ಭಕ್ತರ ಆರಾಧ್ಯ ದೇವತೆ. ದೇವಿಯ ಸನ್ನಿಧಿಯಲ್ಲಿ ಪ್ರಭಾವಕ್ಕಿಂತ ಭಕ್ತಿಗೆ ಹೆಚ್ಚಿನ ಮನ್ನಣೆ ದೊರೆಯಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಸುದೀಪ್, ನರೇಶ್, ಗೋಪಾಲ್ ಇತರರು ಉಪಸ್ಥಿತರಿದ್ದರು.===
ಫೊಟೋ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಜೆ.ಪಿ. ಶೇಖರ್ ಮತ್ತು ವಕೀಲರ ಸಂಘದ ಅಧ್ಯಕ್ಷ ಕಾರ್ಲೆ ಮೊಗಣ್ಣಗೌಡ ಮಾತನಾಡಿದರು.