ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಟಿ ರನ್ಯಾರಾವ್ ಅವರಿಂದ ಚಿನ್ನ ಕಳ್ಳಸಾಗಣೆ ವೇಳೆ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ (ಪ್ರೋಟೊಕಾಲ್) ದುರ್ಬಳಕೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ವಿರುದ್ಧ ರಾಜ್ಯ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವಿಚಾರಣೆ ವಹಿಸಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ.ಈ ಆದೇಶ ಹೊರಬಿದ್ದ 24 ತಾಸಿನೊಳಗೆ ಸರ್ಕಾರ ಆದೇಶ ಹಿಂಪಡೆದಿದೆ. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರೇ ಇದರ ತನಿಖೆ ನಡೆಸಲಿದ್ದಾರೆ. ಇದೇ ಆರೋಪ ಸಂಬಂಧ ನಟಿ ರನ್ಯಾರಾವ್ ಅವರ ಮಲತಂದೆ ಹಾಗೂ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ರಾವ್ ವಿರುದ್ಧ ದಾಖಲಾಗಿರುವ ಆರೋಪ ಕುರಿತಾಗಿ ಗೌರವ್ ಗುಪ್ತಾ ಅವರೇ ತನಿಖೆ ನಡೆಸುತ್ತಿದ್ದಾರೆ. ಒಂದೇ ಪ್ರಕರಣದಲ್ಲಿ ಎರಡು ಸಂಸ್ಥೆಗಳ ವಿಚಾರಣೆ ಸೂಕ್ತವಲ್ಲ. ಅಲ್ಲದೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿ ತನಿಖೆ ನಡೆಸುವಾಗ ಮತ್ತೊಂದೆಡೆ ಎಸ್ಪಿ ದರ್ಜೆ ಅಧಿಕಾರಿಯೂ ವಿಚಾರಣೆ ನಡೆಸುವುದು ಸರಿಯಲ್ಲ ಎಂಬ ಕಾರಣಕ್ಕೆ ಸಿಐಡಿ ವಿಚಾರಣೆಯನ್ನು ರದ್ದುಪಡಿಸಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಶಿಷ್ಟಾಚಾರ ದುರ್ಬಳಕೆ ಪ್ರಕರಣದ ತನಿಖೆಯನ್ನು ಎಸ್ಪಿ ರಾಘವೇಂದ್ರ ಹೆಗಡೆ ಅವರಿಗೆ ವಹಿಸಲಾಗಿತ್ತು. ಎಸ್ಪಿ ರಾಘವೇಂದ್ರ ಹೆಗಡೆ ನೇಮಕಕ್ಕೆ ರನ್ಯಾ ಅವರ ಮಲತಂದೆ ಹಾಗೂ ಡಿಜಿಪಿ ರಾಮಚಂದ್ರರಾವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಗೃಹ ಸಚಿವರಿಗೆ ದೂರು ಕೊಟ್ಟಿದ್ದರು ಎನ್ನಲಾಗಿದೆ.2014ರ ಮೈಸೂರು ಇಲವಾಲ ಬಳಿ ₹2.07 ಕೋಟಿ ದರೋಡೆ ಪ್ರಕರಣದಲ್ಲಿ ಆಗಿನ ಕೇಂದ್ರ ವಲಯ ಐಜಿಪಿ ರಾಮಚಂದ್ರರಾವ್ ವಿರುದ್ಧ ಆರೋಪ ಕೇಳಿ ಬಂದಿತ್ತು. ಅಂದು ಈ ಪ್ರಕರಣದ ತನಿಖೆಯನ್ನು ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನಡೆಸಿದ್ದರು. ಹೀಗಾಗಿ, ತಮ್ಮ ವಿರುದ್ಧ ಎಸ್ಪಿ ಕಠಿಣ ನಿಲುವು ತಾಳಬಹುದು ಎಂಬುದು ಡಿಜಿಪಿ ಆಕ್ಷೇಪಕ್ಕೆ ಕಾರಣ ಎನ್ನಲಾಗಿದೆ. ಆದರೆ, ಸರ್ಕಾರ ಬೇರೊಂದು ಕಾರಣ ಕೊಟ್ಟು, ಸಿಐಡಿ ವಿಚಾರಣೆ ಹಿಂಪಡೆದಿದೆ ಎಂಬ ಮಾತುಗಳು ಕೇಳಿ ಬಂದಿವೆ.