ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಅತ್ಯುತ್ತಮ, ರಚನಾತ್ಮಕ, ಸಕಾರಾತ್ಮಕ ಹಾಘೂ ಸಮಾಜಕ್ಕೆ ಪೂರಕವಾದ ದಿಸೆಯಲ್ಲಿ ಸ್ತ್ರೀ ಶಕ್ತಿಯ ಸಂವೇದನೆ ಹರಿಯುತ್ತಿರಬೇಕು. ವೈವಿಧ್ಯಮಯ ಸಂಗೀತ ಮೇಳಗಳ ನುಡಿಸುವ ಕೈಗಳ ಲಾಲಿತ್ಯದಂತೆ ನಮ್ಮ ಸಮಾಜದ ಹಿರಿಮೆಯನ್ನು ತನ್ನ ಲಾಲಿತ್ಯದ ನೆಲೆಯಲ್ಲಿ ಮುನ್ನಡೆಸಬೇಕು. ಈ ನಿಟ್ಟಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಿತ್ರೆ ಕಾಸ್ಮೋ ಕ್ಲಬ್ ಘಟಕವು ಸ್ತ್ರೀ ಸಂವೇದಿತ ಚಟುವಟಿಕೆಗಳು ಯಶಸ್ಸು ಕಾಣುತ್ತಿರಲಿ ಎಂದು ಖ್ಯಾತ ವೀಣಾವಾದಕಿ ಮಂಗಳಾ ರಾಮನ್ ಹೇಳಿದರು.
ನಗರದ ಗಾಡಿಕೊಪ್ಪದ ಕಾಸ್ಮೋ ಕ್ಲಬ್‌ನಲ್ಲಿ ಇತ್ತೀಚೆಗೆ ಮಿತ್ರೆ ಕಾಸ್ಮೋ ಕ್ರಬ್ ಮಹಿಳಾ ಘಟಕ ಆರಂಭಗೊಂಡಿದ್ದು, ಸಂಘಟನೆಯ ಮೊದಲ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅಧ್ಯಕ್ಷೆ ಶ್ರೀರಂಜನಿ ದತ್ತಾತ್ರಿ ಮಾತನಾಡಿ, ಕುಟುಂಬ, ಸಮಾಜ, ದೇಶ ಒಳಗೊಂಡಂತೆ ಎಲ್ಲಾ ಸ್ತರಗಳಲ್ಲಿಯೂ ಮಹಿಳೆ ಉನ್ನತ ಕೊಡುಗೆಗಳನ್ನು ನೀಡುತ್ತಿದ್ದಾಳೆ. ಮಹಿಳೆಯಲ್ಲಿನ ಸೃಷ್ಟಿಶೀಲತ್ವದ ಗುಣ, ಮಹಿಳೆಯರ ಧೀಶಕ್ತಿ. ರಚನಾತ್ಮಕ, ಸಕಾರಾತ್ಮಕ, ಸಮನ್ವಯತೆ ಈ ತ್ರಿಗುಣ ತತ್ವಗಳಿಂದಾಗಿ ಅವರು ಎಲ್ಲವನ್ನೂ ಸಾಧಿಸಬಲ್ಲಳು ಎಂದರು.
ವೈಶಿಷ್ಟತೆಗಳ ಹೂರಣವಿರುವ ಕಾಸ್ಮೋ ಕ್ಲಬ್ ಕೌಟುಂಬಿಕ ನೆಲೆಯ ಕ್ಲಬ್ ಆಗಿದೆ. ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಘಟಕವು ಮುಂದಿನ ದಿನಗಳಲ್ಲಿ ಸಂಘಟಿತ ಸಮನ್ವಯತೆಯ ಹಾದಿಯಲ್ಲಿ ಮುನ್ನಡೆಯುತ್ತದೆ. ಸಮಾಜದ ವಿವಿಧ ಕುಟುಂಬಗಳಿಂದ ಬಂದ ನಾವೆಲ್ಲರೂ ಸೇರಿ ಕತೃತ್ವ, ನೇತೃತ್ವ, ಮಿತ್ರತ್ವದ ನೆಲೆಯಲ್ಲಿ ಮಿತ್ರೆ ಮಹಿಳಾ ಘಟಕದ ಚಟುವಟಿಕೆ ಮುನ್ನಡೆಸೋಣ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಸಹನಾ ಚೇತನ್ ಮಾತನಾಡಿದರು. ಖ್ಯಾತ ವೀಣಾವಾದಕರಾದ ಮಂಗಳಾ ರಾಮನ್ ಮತ್ತು ಸಹೋದರಿ ವಿದ್ಯಾ ರಾಮನ್, ಚಿ: ಆದಿತ್ಯ, ವೀಣಾ ವಾದಕಿಯರಾದ ವಿಜಯಲಕ್ಷ್ಮೀ ಹಾಗೂ ಶುಭಾ, ಸಹಚೇತನ ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್, ಗಾಯಕಿ ವಾಣಿ ಶಂಕರ್, ಯಕ್ಷಗಾನ ಕಲಾವಿದೆ ಕಿರಣ್ ಪೈ, ಪುಷ್ಪ ಪರ್ಫಾರ್ಮಿಂಗ್‌ನ ಪುಷ್ಪಾ ಕೃಷ್ಣಮೂರ್ತಿ, ಮಯೂರಿ ನೃತ್ಯಕಲಾ ಕೇಂದ್ರದ ಶ್ವೇತಾ ಕುಮಾರ್ ಅವರನ್ನು ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಘಟಕದಿಂದ ಸಾಂಸ್ಕೃತಿಕ ಹಾಗೂ ಲಲಿತ ಕಲೆಗಳಿಗೆ ಅವರು ನೀಡಿದ ಸೇವೆ ಗುರುತಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾಸ್ಮೋ ಕ್ಲಬ್ ಅಧ್ಯಕ್ಷ ಎಸ್.ದತ್ತಾತ್ರಿ, ಕಾರ್ಯದರ್ಶಿ ಡಿ.ಟಿ. ಶ್ರೀನಿವಾಸ್, ಖಜಾಂಚಿ ಎನ್.ಮಂಜುನಾಥ್ ಮಿತ್ರೆ ಮಹಿಳಾ ಘಟಕ ಕಾರ್ಯದರ್ಶಿ ದೀಪಾ ಶ್ರೀನಿವಾಸ್, ಖಜಾಂಚಿ ವೀಣಾ ಹರ್ಷ, ಉಪಾಧ್ಯಕ್ಷೆ ಸುನಿತಾ ಅರುಣ್, ಸಹ ಕಾರ್ಯದರ್ಶಿ ಹೇಮಾ ಸತೀಶ್ ಉಪಸ್ಥಿತರಿದ್ದರು.- - -
-ಫೋಟೋ:ಶಿವಮೊಗ್ಗ ನಗರದ ಗಾಡಿಕೊಪ್ಪದ ಕಾಸ್ಮೋ ಕ್ಲಬ್‌ನಲ್ಲಿ ಇತ್ತೀಚೆಗೆ ಮಿತ್ರೆ ಕಾಸ್ಮೋ ಕ್ರಬ್ ಮಹಿಳಾ ಘಟಕದ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮವನ್ನು ವೀಣಾವಾದಕಿ ಮಂಗಳಾ ರಾಮನ್ ಉದ್ಘಾಟಿಸಿದರು.