ಕೆಆರ್‌ಎಸ್ ಪಕ್ಷದಿಂದ ‘ಕರ್ನಾಟಕಕ್ಕಾಗಿ ನಾವು’ ಜಾಗೃತಿ ಜಾಥಾ

| Published : Feb 18 2024, 01:36 AM IST

ಕೆಆರ್‌ಎಸ್ ಪಕ್ಷದಿಂದ ‘ಕರ್ನಾಟಕಕ್ಕಾಗಿ ನಾವು’ ಜಾಗೃತಿ ಜಾಥಾ
Share this Article
  • FB
  • TW
  • Linkdin
  • Email

ಸಾರಾಂಶ

‘ಕರ್ನಾಟಕಕ್ಕಾಗಿ ನಾವು’ ಎಂಬ ಘೋಷಣೆಯೊಂದಿಗೆ ಜನ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು, ಫೆ.೧೯ರಿಂದ ಮಾ.೨ರವರೆಗೆ ರಾಜ್ಯದ ೩೧ ಜಿಲ್ಲೆಗಳಲ್ಲಿ ಬೈಕ್ ಜಾಥಾ ಸಂಚರಿಸಲಿದೆ. ೨೯ ಜಿಲ್ಲಾ ಕೇಂದ್ರಗಳು ಮತ್ತು ಐವತ್ತಕ್ಕಿಂತ ಹೆಚ್ಚು ತಾಲೂಕು ಕೇಂದ್ರಗಳು ಸೇರಿದಂತೆ ಸುಮಾರು ೮೨ ಪಟ್ಟಣ, ನಗರಗಳಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮಾ.೨ರಂದು ನೆಲಮಂಗಲದಲ್ಲಿ ಬೃಹತ್ ಸಮಾರೋಪ ಸಮಾವೇಶ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯದುರಾಡಳಿತ, ಭ್ರಷ್ಟಾಚಾರ, ಸ್ವಜನಪಕ್ಷ ಪಾತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸುವಂತೆ ರಾಜ್ಯದ ಜನರನ್ನು ಕೋರಲು ಫೆ.೧೯ರಿಂದ ಕರ್ನಾಟಕಕ್ಕಾಗಿ ನಾವು ಎಂಬ ಘೋಷಣೆಯೊಂದಿಗೆ ಜನ ಜಾಗೃತಿ ಜಾಥಾ ಹಮ್ಮಿಕೊಂಡಿರುವುದಾಗಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಿಂದ ಆರಂಭವಾಗಲಿರುವ ಈ ಜಾಥಾದ ನೇತೃತ್ವವನ್ನು ಕೆಆರ್‌ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ವಹಿಸುವರು. ಫೆ.೧೯ರಿಂದ ಮಾ.೨ರವರೆಗೆ ರಾಜ್ಯದ ೩೧ ಜಿಲ್ಲೆಗಳಲ್ಲಿ ಬೈಕ್ ಜಾಥಾ ಸಂಚರಿಸಲಿದೆ. ೨೯ ಜಿಲ್ಲಾ ಕೇಂದ್ರಗಳು ಮತ್ತು ಐವತ್ತಕ್ಕಿಂತ ಹೆಚ್ಚು ತಾಲೂಕು ಕೇಂದ್ರಗಳು ಸೇರಿದಂತೆ ಸುಮಾರು ೮೨ ಪಟ್ಟಣ, ನಗರಗಳಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮಾ.೨ರಂದು ನೆಲಮಂಗಲದಲ್ಲಿ ಬೃಹತ್ ಸಮಾರೋಪ ಸಮಾವೇಶ ಆಯೋಜಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಆರ್‌ಎಸ್ ಪಕ್ಷ ೨೦೨೧ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯದ ಎಲ್ಲ ೩೧ ಜಿಲ್ಲೆಗಳಲ್ಲಿ ಭ್ರಷ್ಟರೇ ಪವಿತ್ರ ರಾಜಕಾರಣವನ್ನು ಬಿಟ್ಟು ತೊಲಗಿ, ನಾಡಪ್ರೇಮಿಗಳೇ ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ೩೨ ದಿನಗಳ ೩೫೦೦ ಕಿ.ಮೀ. ಬೈಕ್ ಜಾಥಾ ಯಶಸ್ಸು ಕಂಡಿತ್ತು. ಆ ಸಮಯದಲ್ಲಿ ರಾಜ್ಯದ ಸುಮಾರು ೬೩ ತಾಲೂಕು ಕಚೇರಿಗಳಲ್ಲಿ ಲಂಚಮುಕ್ತ ಕರ್ನಾಟಕ ಅಭಿಯಾನದ ಮೂಲಕ ಜನರಿಗೂ ಹತ್ತಿರವಾಗಿತ್ತು. ಆ ಜಾಥಾದ ಕಾರಣದಿಂದ ಸಾವಿರಾರು ಜನರು ಪಕ್ಷದ ಸದಸ್ಯತ್ವ ಪಡೆದರು. ನೂರಾರು ಜನರು ನಾಯಕತ್ವದ ಜವಾಬ್ದಾರಿ ತೆಗೆದುಕೊಂಡರು. ಸಾರ್ವಜನಿಕರು ದೇಣಿಗೆ ನೀಡಿ ಪಕ್ಷಕ್ಕೆ ಬಲ ತುಂಬಿದ್ದಾಗಿ ಹೇಳಿದರು.

ಇದೇ ರೀತಿಯ ಯಶಸ್ವಿ ಜಾಥಾ ಮತ್ತು ಅಭಿಯಾನಗಳ ಕಾರಣಕ್ಕಾಗಿಯೇ ಕಳೆದ ವರ್ಷ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಚುನಾವಣಾ ಅಕ್ರಮಗಳನ್ನು ಎಸಗದೆ ಕೆಆರ್‌ಎಸ್ ಪಕ್ಷ ೧೯೫ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು ಎಂದರು.

ಈ ಬೈಕ್ ಜಾಥಾದಲ್ಲಿ ಜಿಲ್ಲೆಯ ಕೆಆರ್‌ಎಸ್ ಪಕ್ಷದ ಎಲ್ಲ ಕಾರ್ಯಕರ್ತರು ಮತ್ತು ಪ್ರಜ್ಞಾವಂತ ನಾಗರಿಕರು ಸಕ್ರಿಯವಾಗಿ ಭಾಗವಹಿಸಿ ಬೆಂಬಲಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಜಿ.ಎಂ.ರಮೇಶ್‌ಗೌಡ, ಮಲ್ಲೇಶ್, ಚಂದ್ರು, ರವೀಂದ್ರ, ಎಸ್.ಜಗದೀಶ್ ಇದ್ದರು.