ಸಾರಾಂಶ
ವಿಜ್ಞಾನದ ವಿಷಯ ಕುರಿತು ಮಕ್ಕಳಿಗೆ ಪರಿಚಯಾತ್ಮಕವಾಗಿ ಬೋಧಿಸುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಗತ್ತು ಬದಲಾವಣೆಗೆ ತೆರೆದುಕೊಳ್ಳುತ್ತಿರುವುದರಿಂದ ಪೌಢಶಾಲೆ ಮಕ್ಕಳಲ್ಲಿ ವೈಜ್ಞಾನಿಕ ವಿಷಯಗಳನ್ನು ಬಿತ್ತುವುದು ಅತ್ಯಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಹೇಳಿದರು.ತಾಲೂಕಿನ 80 ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಿಗೆ ಡಯಟ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ಕಿಟ್ ವಿತರಣೆ ಹಾಗೂ ವಿಜ್ಞಾನ ಶಿಕ್ಷಕರುಗಳಿಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ನಿಂತ ನೀರಲ್ಲ. ಸರಾಗ, ರಭಸವಾಗಿ ಹರಿಯುತ್ತಿದೆ. ಬೋಧನೆ ಮೂಲಕ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದು ಕಷ್ಟವಾಗುತ್ತದೆ. ಹಾಗಾಗಿ ಪ್ರಯೋಗದ ಮೂಲಕ ಮಕ್ಕಳ ಮನಸ್ಸಿಗೆ ಸುಲಭವಾಗಿ ನಾಟಲು ಸಹಕಾರಿಯಾಗಲಿದೆ ಎಂದರು.
ವಿಜ್ಞಾನ ಕಿಟ್‍ನಲ್ಲಿರುವ ಎಲ್ಲಾ ಅಂಶಗಳು ಮಕ್ಕಳಿಗೆ ಪ್ರಯೋಜನವಾಗಬೇಕು. ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಪರಿಸ್ಥಿತಿ ಶೋಚನೀಯವಾಗಿದೆ. ವಿಜ್ಞಾನದ ವಿಷಯ ಕುರಿತು ಮಕ್ಕಳಿಗೆ ಪರಿಚಯಾತ್ಮಕವಾಗಿ ಬೋಧಿಸುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ. ಹಾಗಾಗಿ ವಿಜ್ಞಾನ ಕಿಟ್‍ನ್ನು ಜೋಪಾನವಾಗಿ ಸಂಗ್ರಹಿಸಿ ಕಲಿಕಾ ವರ್ಷಗಳಲ್ಲಿ ಮಕ್ಕಳಿಗೆ ಪೂರಕವಾಗುವಂತೆ ಬಳಸಬೇಕೆಂಬುದು ಎಸ್.ನಾಗಭೂಷಣ್ ಮನವಿ. ಐಎಲ್.ಪಿ ಮ್ಯಾನೇಜರ್ ಮಂಜುನಾಥ್ ಮಾತನಾಡಿ, ಹನ್ನೊಂದು ಸಂಸ್ಥೆಗಳನ್ನು ಒಟ್ಟುಗೂಡಿ ಚರ್ಚಿಸಿ ವಿಜ್ಞಾನ ಕಿಟ್ ವಿತರಣೆ ಹಾಗೂ ಶಿಕ್ಷಕರುಗಳಿಗೆ ಕಾರ್ಯಾಗಾರ ನಡೆಸಲು ತೀರ್ಮಾನಿಸಿದ್ದೇವೆ. ಸರ್ಕಾರಿ ಶಾಲೆಗಳ ಜೊತೆಗೆ ಅನುದಾನಿತ ಪ್ರೌಢಶಾಲೆಗಳ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕಿಟ್‍ಗಳನ್ನು ನೀಡಿದ್ದೇವೆ. ಜಿಲ್ಲೆಯಲ್ಲಿ 317 ಪ್ರೌಢಶಾಲೆ ಗಳಲ್ಲಿನ ಮಕ್ಕಳಿಗೆ ಪ್ರಯೋಗದ ಮೂಲಕ ವಿಜ್ಞಾನದ ಮಹತ್ವ ತಿಳಿಸಬೇಕೆಂಬುದು ನಮ್ಮ ಉದ್ದೇಶ ಎಂದು ಹೇಳಿದರು. ಡಯಟ್ ಉಪನ್ಯಾಸಕಿಯರುಗಳಾದ ಪೂರ್ಣಿಮ, ಲೀಲಾವತಿ, ಹೆಚ್ಆರ್.ಸಿ ಮುಖ್ಯಸ್ಥೆ ಗೀತ ವೇದಿಕೆಯಲ್ಲಿದ್ದರು.