ಸಾರಾಂಶ
ಕನ್ನಡಪ್ರಭ ವಾರ್ತೆ ಕಂಪ್ಲಿ
ಕರ್ನಾಟಕ ಸಾರಿಗೆ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದು, ಆ ಮಧ್ಯೆಯೂ ಪಟ್ಟಣದಿಂದ ಹಲವು ಬಸ್‌ಗಳು ಸಂಚರಿಸಿವೆ. ಇನ್ನು ನೌಕರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಯಾಣಿಕರಿಗೆ ಅಷ್ಟರ ಮಟ್ಟಿಗೆ ಮುಷ್ಕರದ ಬಿಸಿ ತಟ್ಟಲಿಲ್ಲ.ಸಾರಿಗೆ ನೌಕರರ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿ ಪಾವತಿ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆ ಕುರಿತು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಅದರಂತೆ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಕೆಲ ನೌಕರರು ಮುಷ್ಕರಕ್ಕೆ ಬೆಂಬಲಿಸಿ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳದೆ ನಿಲ್ದಾಣದಲ್ಲಿ ಸಮಯ ಕಳೆದರೆ. ಇನ್ನು ಕೆಲವರು ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಮೂಲಕ ನೌಕರರಿಂದಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆ 6ಗಂಟೆಯಿಂದಲೇ ಬಸ್ ಸಂಚರಿಸಿದ್ದು 10ಗಂಟೆಯಷ್ಟರಲ್ಲಿ 15ಕ್ಕೂ ಹೆಚ್ಚು ಬಸ್ ಪಟ್ಟಣದ ಮಾರ್ಗವಾಗಿ ಸಂಚರಿಸಿದ್ದವು. ಬಳಿಕ ಸ್ಥಳಕ್ಕೆ ತಹಸೀಲ್ದಾರ್ ಜೂಗಲ ಮಂಜು ನಾಯಕ, ಕಂಪ್ಲಿ ಪೊಲೀಸ್ ಠಾಣೆ ಪಿಐ ಕೆ.ಬಿ. ವಾಸುಕುಮಾರ್, ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಭೇಟಿ ನೀಡಿ ನಿಲ್ದಾಣದಲ್ಲಿದ್ದ, ಕರ್ತವ್ಯಕ್ಕೆ ಹಾಜರಾಗಲು ಇಚ್ಚಿಸಿದ ನೌಕರರನ್ನು ಸೂಕ್ತ ಭದ್ರತೆಯೊಂದಿಗೆ ಕಾರ್ಯನಿರ್ವಹಿಸಲಿಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ಹೊಸಪೇಟೆ, ಕುರುಗೋಡು, ಗಂಗಾವತಿ, ಬಳ್ಳಾರಿ, ಕುಡುತಿನಿ, ಸಿರುಗುಪ್ಪಗಳಿಂದ ಬಸ್ ಪಟ್ಟಣಕ್ಕೆ ಆಗಮಿಸಿದವು. ನಿಲ್ದಾಣದಿಂದ ಪಟ್ಟಣದ ಕೊನೆಯಂಚಿನವರೆಗೂ ಬಸ್ ಪೊಲೀಸರು ಸಂಚರಿಸಿ ಭದ್ರತೆ ಒದಗಿಸಿದರು. ಇನ್ನು ಪ್ರಯಾಣಿಕರಿಗೆ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಕಲ್ಪಿಸಲಾಗಿದ್ದ ಖಾಸಗಿ ಬಸ್ ಸಹ ಪಟ್ಟಣಕ್ಕೆ ಆಗಮಿಸಿದ್ದವು. ಸೇಡಂ, ಚಿತ್ತಾಪುರ ಸೇರಿ ವಿವಿಧಡೆಗಳಿಂದ ಕೆಲ ಲಾಂಗ್ ರೂಟ್ ಬಸ್‌ಗಳು ಸಹ ಪಟ್ಟಣಕ್ಕೆ ಆಗಮಿಸಿದ್ದವು.
ನಿಲ್ದಾಣದತ್ತ ಸುಳಿಯದ ಜನ:ಮುಷ್ಕರದ ಬಗ್ಗೆ ಮಾಹಿತಿ ತಿಳಿದ ವಿದ್ಯಾರ್ಥಿಗಳು, ಪ್ರಯಾಣಿಕರು ಸೇರಿ ಸಾರ್ವಜನಿಕರು ಹೆಚ್ಚಾಗಿ ನಿಲ್ದಾಣದ ಹತ್ತಿರವೇ ಸುಳಿಯಲಿಲ್ಲ. ಬಸ್ ಸಂಚಾರಕ್ಕೆ ಬ್ರೇಕ್ ಬೀಳಲಿದೆ ಎಂದು ಕೆಲವರು ಪ್ರಯಾಣವನ್ನೇ ಮುಂದೆ ಹಾಕಿಕೊಂಡರೆ, ಇನ್ನು ಕೆಲವರು ಆಟೋ ಹಾಗೂ ಟ್ಯಾಕ್ಸಿ ಮೊರೆ ಹೋದರು. ಮುಷ್ಕರದ ನಡುವೆಯೂ ಬಸ್ ಸಂಚರಿಸುತ್ತಿದ್ದರು ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣ ಹಾಗೂ ರಸ್ತೆಗಳು ಬಿಕೋ ಎನ್ನುತ್ತಿದ್ದವು.