ಸಾರಿಗೆ ನೌಕರರ ಮುಷ್ಕರಕ್ಕೆ ಹುಬ್ಬಳ್ಳಿಯಲ್ಲಿ ಮಿಶ್ರಪ್ರತಿಕ್ರಿಯೆ

| Published : Aug 06 2025, 01:15 AM IST

ಸಾರಿಗೆ ನೌಕರರ ಮುಷ್ಕರಕ್ಕೆ ಹುಬ್ಬಳ್ಳಿಯಲ್ಲಿ ಮಿಶ್ರಪ್ರತಿಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರ ಬೆಳಗ್ಗೆ ಸುಮಾರು 9ರ ವರೆಗೆ ಬಸ್‌ಗಳ ಸಂಚಾರ ವಿರಳವಾಗಿತ್ತು. ಈ ವೇಳೆ ಫೀಲ್ಡ್‌ಗಿಳಿದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಎಂಡಿ ಪ್ರಿಯಾಂಗಾ ಎಂ. ಮತ್ತು ಅಧಿಕಾರಿಗಳು ಸಿಬ್ಬಂದಿಯ ಮನವೊಲಿಸಿ ಒಂದೊಂದಾಗಿ ಬಸ್ ಗಳು ಸಂಚರಿಸುವಂತೆ ನೋಡಿಕೊಂಡರು.

ಹುಬ್ಬಳ್ಳಿ: ವೇತನ ಪರಿಷ್ಕರಣೆ ಸೇರಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕರೆ ನೀಡಿದ ಬಂದ್‌ಗೆ ಹುಬ್ಬಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ನೌಕರರು ಬಂದ್‌ಗೆ ಬೆಂಬಲ ಸೂಚಿಸಿ ಕರ್ತವ್ಯಕ್ಕೆ ಗೈರಾದರೆ ಮತ್ತೆ ಕೆಲವರು ಕರ್ತವ್ಯಕ್ಕೆ ಹಾಜರಾಗಿದ್ದರು. ಇದರಿಂದ ಕೆಲಹೊತ್ತು ಬಸ್‌ ಸಂಚಾರದಲ್ಲಿ ವ್ಯತ್ಯವಾಗಿತ್ತು.

ಮಂಗಳವಾರ ಬೆಳಗ್ಗೆ ಸುಮಾರು 9ರ ವರೆಗೆ ಬಸ್‌ಗಳ ಸಂಚಾರ ವಿರಳವಾಗಿತ್ತು. ಈ ವೇಳೆ ಫೀಲ್ಡ್‌ಗಿಳಿದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಎಂಡಿ ಪ್ರಿಯಾಂಗಾ ಎಂ. ಮತ್ತು ಅಧಿಕಾರಿಗಳು ಸಿಬ್ಬಂದಿಯ ಮನವೊಲಿಸಿ ಒಂದೊಂದಾಗಿ ಬಸ್ ಗಳು ಸಂಚರಿಸುವಂತೆ ನೋಡಿಕೊಂಡರು. ಆದರೆ, ನಗರ ಸಾರಿಗೆ ಬಸ್‌ಗಳ ಸಂಚಾರ ಸಂಜೆ ವರೆಗೆ ಬಂದ್‌ ಆಗಿತ್ತು.

ಪ್ರಯಾಣಿಕರ ಪರದಾಟ: ನಗರದ ಗೋಕುಲ ರಸ್ತೆಯ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಬೆಳಗಿನ ವೇಳೆ ದೂರದೂರಿನ ಬಸ್‌ಗಳ ಸಂಚಾರವಿಲ್ಲದೆ ಪರದಾಡಿದರು. ಇತ್ತ ನಗರ ಸಾರಿಗೆಯೂ ಬಂದ್‌ ಆಗಿದ್ದರಿಂದ ಶಾಲೆ- ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವ ಸಿಬ್ಬಂದಿ ತೀವ್ರ ತೊಂದರೆ ಅನುಭವಿಸಿದರು. ಬೆಳಗಿನ 9ರ ವೇಳೆಗೆ ಅಧಿಕಾರಿಗಳು ಮನವೊಲಿಸಿ ಕೆಲ ಬಸ್‌ಗಳು ಸಂಚರಿಸುವಂತೆ ನೋಡಿಕೊಂಡರು. ಇದರಿಂದ ದೂರದೂರಿನ ಪ್ರಯಾಣಿಕರು ನಿಟ್ಟಿಸಿರು ಬಿಟ್ಟರು.

ಬಿಕೋ ಎಂದ ಬಸ್ ನಿಲ್ದಾಣ: ಬೇರೆ ಡಿಪೋಗಳಿಂದ ಬಸ್‌ಗಳು ಬರದಿರುವುದರಿಂದ ಮತ್ತು ಪ್ರಯಾಣಿಕರು ತೀರಾ ವಿರಳವಾಗಿದ್ದರಿಂದ ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಕೇಂದ್ರೀಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಬಹುತೇಕರಿಗೆ ಮಂಗ‍ಳವಾರದಿಂದ ಮುಷ್ಕರವಿದೆ ಎಂದು ತಿಳಿದಿದ್ದರಿಂದ ತಮ್ಮ ಪ್ರಯಾಣವನ್ನು ಮುಂದೂಡಿದ್ದರು. ಬಂದ್‌ ಬಗೆಗೆ ಗೊತ್ತಿರದೇ ಆಗಮಿಸಿದ್ದ ಕೆಲವರು ತೊಂದರೆ ಅನುಭವಿಸಿದರೂ ಕೆಲ ಹೊತ್ತಿನ ಬಳಿಕ ಬಸ್‌ಗಳು ಆರಂಭವಾಗಿದ್ದರಿಂದ ನಿರಾಳರಾದರು.

ಆಯುಕ್ತ ಎನ್‌. ಶಶಿಕುಮಾರ್ ರೌಂಡ್ಸ್‌: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿತ್ತು. ಎಲ್ಲ ನಿಲ್ದಾಣಗಳಲ್ಲಿ ಪೊಲೀಸರು ವಾಹನ ಸಮೇತ ಬೀಡುಬಿಟ್ಟಿದ್ದರು. ಅಲ್ಲದೆ ಸ್ವತಃ ಮಹಾನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್ ಬಸ್‌ ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಯಾಣಿಕರು, ವಿದ್ಯಾರ್ಥಿಗಳ ಜತೆ ಮಾತನಾಡಿದ ಅವರು ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ಸೇರಿ ಅವಶ್ಯವಿದ್ದಲ್ಲಿ ಬಸ್ ಸಂಚಾರ ಕೈಗೊಳ್ಳುವಂತೆ ನೋಡಿಕೊಂಡರು.

ಮುಗಿಬಿದ್ದು ಪ್ರಯಾಣ: ಅವಳಿ ನಗರ ಮಧ್ಯೆ ಪ್ರಯಾಣಿಸುತ್ತಿದ್ದ ಚಿಗರಿ ಮಂಗಳವಾರ ತನ್ನ ಓಟ ನಿಲ್ಲಿಸಿದ್ದರಿಂದ ಬೇಂದ್ರೆ ಸಾರಿಗೆ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು. ಇದೇ ವೇಳೆ ಮ್ಯಾಕ್ಸಿ ಕ್ಯಾಬ್ ಮತ್ತು ಟ್ರ್ಯಾಕ್ಸ್‌ಗಳಲ್ಲೂ ಜನ ಮುಗಿಬಿದ್ದು ಪ್ರಯಾಣಿಸಿದರು.

ಹೆಚ್ಚಿನ ಸುಲಿಗೆ: ಬಸ್‌ ಬಂದ್‌ ಆಗಿದ್ದರಿಂದ ಆಟೋ ಚಾಲಕರು ಮಂಗಳವಾರ ಪ್ರಯಾಣಿಕರಿಂದ ಅಲ್ಲಲ್ಲಿ ಹೆಚ್ಚಿನ ಹಣ ಸುಲಿಯುತ್ತಿರುವುದು ಕಂಡುಬಂತು. ಬಸ್‌ಗಳಿಲ್ಲದಿರುವುದರಿಂದ ಜನ ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಪ್ರಯಾಣಿಸುತ್ತಿದ್ದರು.

ನಗರ ಬಸ್ ನಿಲ್ದಾಣ ಖಾಲಿ ಖಾಲಿ: ಇನ್ನು ಬೆಳಗ್ಗೆ ಬೆರ‍ಳೆಣಿಕೆಯಷ್ಟು ನಗರ ಸಾರಿಗೆ ಬಸ್‌ಗಳು ರಸ್ತೆಗಿಳಿದರೂ ಬಳಿಕ ಸಂಚಾರ ಬಂದ್ ಆಯಿತು. ಇದರಿಂದ ಇಲ್ಲಿನ ಸಿಬಿಟಿ ಬಸ್ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಖಾಲಿ ಹೊಡೆಯುತ್ತಿತ್ತು. ಆಗಾಗ ಬರುತ್ತಿದ್ದ ಪ್ರಯಾಣಿಕರು ಬಸ್‌ಗಳಿಲ್ಲದಿರುವುದನ್ನು ನೋಡಿ ಆಟೋಗಳತ್ತ ಮುಖ ಮಾಡುತ್ತಿದ್ದರು. ಸಂಜೆ ವರೆಗೂ ನಗರ ಸಾರಿಗೆ ಬಸ್‌ಗಳು ರಸ್ತೆಗಿಳಿದಿರಲಿಲ್ಲ.