ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ 28 ಲಕ್ಷ ರು. ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಮಾಡಿ, 1.20 ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆ ಎಂದು ಶಾಸಕರು, ಮತ್ತವರ ಬೆಂಬಲಿಗರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಚಿಕ್ಕಮರಳಿ ಗ್ರಾಮದ ಯುವ ಮುಖಂಡ ನಿತಿನ್ ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಆರ್ ಐಡಿಎಲ್ ನಿಗಮದಿಂದ ಚಿಕ್ಕಮರಳಿ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಯೋಜನೆಯಲ್ಲಿ 400 ಮೀಟರ್ ಸಿಸಿ ರಸ್ತೆ ಹಾಗೂ 240 ಮೀಟರ್ ಚರಂಡಿ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಯೋಜನೆ ಹಳೆಯ ಅಂದಾಜು ಪಟ್ಟಿ ಮೂಲಕ ಈ ಕಾಮಗಾರಿ ನಡೆಸಿದ್ದಾರೆ. ಈ ಕಾಮಗಾರಿ ಮಾಹಿತಿ ಕೇಳಿದರೆ ಕೇವಲ 28 ಲಕ್ಷಕ್ಕೆ ಮಾತ್ರ ಆಡಳಿತಾತ್ಮಕವಾದ ಅನುಮೋದನೆ ಸಿಕ್ಕಿದೆ ಎಂದರು.

ಆದರೆ, ಶಾಸಕರು ಮತ್ತವರ ಬೆಂಬಲಿಗರು 1.20 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ ಎಂಬುದಾಗಿ ಸುಳ್ಳು ಮಾಹಿತಿ ನೀಡುತ್ತಾ ಸರಿಯಾದ ಮಾಹಿತಿ ನೀಡಲು ಸತಾಹಿಸುತ್ತಾರೆ. 28 ಲಕ್ಷ ವೆಚ್ಚದ ಕಾಮಗಾರಿಯನ್ನು 1.20 ಕೋಟಿ ವೆಚ್ಚದ ಕಾಮಗಾರಿ ಎಂಬುದಾಗಿ ಹೇಳಿಕೆ ನೀಡುತ್ತಿರುವ ಬಗ್ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಕಾಮಗಾರಿ ನಡೆಸಿರುವ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿಲ್ಲ. ಹೀಗಿದ್ದರೂ ಗುತ್ತಿಗೆದಾರರಿಗೆ ಬಿಲ್ ಮಾಡಿಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ. ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಗುತ್ತಿಗೆದಾರರನ್ನು ಕೇಳಿದರೆ ರಸ್ತೆ ಬಿಡುವುದಕ್ಕೆ ಸಮಸ್ಯೆ ಇದ್ದು, ಅದನ್ನು ಬಿಡಿಸಿಕೊಡಿ ಎಂಬುದಾಗಿ ನಮ್ಮನ್ನೇ ಪ್ರಶ್ನಿಸುತ್ತಾರೆ ಎಂದರು.


ಯಾವುದೇ ಕಾಮಗಾರಿ ಆರಂಭಿಸುವುದಕ್ಕೂ ಮುನ್ನವೇ ಅಂದಾಜುಪಟ್ಟಿ ತಯಾರಿಸಿಕೊಂಡು ಬಳಿಕ ಕಾಮಗಾರಿ ನಡೆಸಬೇಕು. ಆದರೆ, ಇವರು ಸ್ವಲ್ಪ ಅಂದಾಜು ಪಟ್ಟಿ ತಯಾರಿಸಿಕೊಂಡು ಉಳಿಕೆ ಕಾಮಗಾರಿ ಬಗ್ಗೆ ಕೆಲಸ ಪೂರ್ಣಗೊಂಡ ಬಳಿಕ ಅಂದಾಜುಪಟ್ಟಿ ತಯಾರಿಸುವಾಗಿ ಹೇಳುತ್ತಿದ್ದಾರೆ. ಇದರಲ್ಲಿ ಗುತ್ತಿಗೆದಾರರನ ಜತೆಗೆ ಅಧಿಕಾರಿಗಳ ವೈಫಲ್ಯತೆ ಎದ್ದು ಕಾಣುತ್ತಿದೆ. ಈ ವಿಚಾರವಾಗಿ ಶಾಸಕರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮದ ಮುಖಂಡ ಶೇಖರ ಹಾಜರಿದ್ದರು.