ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರು ಬೆಂಗಳೂರಿನಲ್ಲಿ ಐವರು ಸಚಿವರನ್ನು ಭೇಟಿಯಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಹಲವಾರು ಸಮಸ್ಯೆ ಬಗ್ಗೆ ಚರ್ಚೆ ಮತ್ತು ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದಾರೆ.

ಪುತ್ತೂರು: ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರು ಬೆಂಗಳೂರಿನಲ್ಲಿ ಐವರು ಸಚಿವರನ್ನು ಭೇಟಿಯಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಹಲವಾರು ಸಮಸ್ಯೆ ಬಗ್ಗೆ ಚರ್ಚೆ ಮತ್ತು ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದಾರೆ.

ಕಂಬಳಕ್ಕೆ ಅನುದಾನ: ದ ಕ ಜಿಲ್ಲೆಯಲ್ಲಿ ನಡೆಯುವ ವಿವಿಧ ಕಂಬಳ ಸಮಿತಿಗೆ ಸರ್ಕಾರದಿಂದ ನಿಗದಿಪಡಿಸಲಾದ ಅನುದಾನವನ್ನು ತಕ್ಷಣ ನೀಡುವಂತೆ ಮತ್ತು ಮುಂದಿನ ದಿನಗಳಲ್ಲಿ ಕಂಬಳ ಕ್ರೀಡೆ ನಡೆಯುವ ವೇಳೆ ನಿಗದಿತ ಅನುದಾನವನ್ನು ಕಂಬಳ ಸಮಿತಿಗೆ ನೀಡುವಲ್ಲಿ ಕ್ರಮಕೈಗೊಳ್ಳುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್‌ಗೆ ಮನವಿ ಸಲ್ಲಿಸಿದ್ದಾರೆ. ಮನವಿಗೆ ಸ್ಪಂದಿಸಿದ ಸಚಿವರು ಶೀಘ್ರ ಕಂಬಳ ಅನುದಾನ ಮಂಜೂರುಗೊಳಿಸುವ ಭರವಸೆ ನೀಡಿದ್ದಾರೆ.

ರಸ್ತೆಗೆ ೫೦ ಕೋಟಿ ಅನುದಾನ: ಪ್ರಿಯಾಂಕ ಖರ್ಗೆಗೆ ಮನವಿ: ಪುತ್ತೂರು ವಿಧಾನಸಭಾ ಕ್ಷೇತ್ರದ ಕಚ್ಚಾ ರಸ್ತೆಗಳ ಅಭಿವೃದ್ದಿಗಾಗಿ ಅನುದಾನ ಒದಗಿಸುವಂತೆ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆಅವರಿಗೆ ಮನವಿ ಮಾಡಿದರು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ೩೦ ಕಿ ಮೀ ಕಚ್ಚಾ ರಸ್ತೆಗಳ ಅಭಿವೃದ್ದಿ ಅಗತ್ಯವಾಗಿ ಮಾಡಬೇಕಾಗಿದ್ದು ಪ್ರಗತಿಪಥ ಯೋಜನೆಯಡಿ ರು. ೫೦ ಕೋಟಿ ಅನುದಾನವನ್ನು ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಅನಾರೋಗ್ಯ ಪೀಡಿತರಿಗೆ ಪಡಿತರ ಚೀಟಿಗೆ ಆಗ್ರಹ: ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸೇವೆಗೆ ಬಿಪಿಎಲ್ ಪಡಿತರ ಚೀಟಿ ಅಗತ್ಯವಾಗಿದ್ದು ಕಳೆದ ಎರಡು ತಿಂಗಳಿಂದ ಪಡಿತರ ಚೀಟಿ ಆಪ್ ಬಂದ್ ಮಾಡಲಾಗಿದೆ. ಆಪ್ ಬಂದ್ ಮಾಡಿದ್ದರಿಂದ ಈ ಹಿಂದೆ ಅನಾರೋಗ್ಯ ಪೀಡಿತರಿಗೆ ತುರ್ತಾಗಿ ವಿತರಣೆ ಮಾಡುತ್ತಿದ್ದ ಪಡಿತರ ಚೀಟಿ ನೀಡಲು ಅಸಾಧ್ಯವಾಗಿದ್ದು ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ ಎಚ್ ಮುನಿಯಪ್ಪರಿಗೆ ಮನವಿ ಮಾಡಿದರು. ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ಶನಿವಾರದಿಂದ (ಮೇ.೯) ರಿಂದು ಪಡಿತರ ಚೀಟಿ ವಿತರಣೆಗೆ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ದಲಿತರ ಕಾಲನಿ ಅಭಿವೃದ್ದಿಗೆ ಅನುದಾನಕ್ಕೆ ಮನವಿ: ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅವರನ್ನು ಭೇಟಿಯಾದ ಶಾಸಕರು ದಲಿತರ ಕಾಲನಿ ಅಭಿವೃದ್ದಿಗೆ ೫ ಕೋಟಿ ರು. ಅನುದಾನ ನೀಡುವಂತೆ ಮನವಿ ಸಲ್ಲಿಸಿದರು. ಈ ಹಿಂದೆ ದಲಿತರ ಕಾಲನಿ ಅಭಿವೃದ್ದಿಗೆ ಅನುದಾನ ನೀಡಿದ್ದರೂ ಇನ್ನೂ ಅನೇಕ ಕಾಲನಿಗಳು ಅಭಿವೃದ್ದಿ ಗೆ ಬಾಕಿ ಇದ್ದು ಅವುಗಳನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಅನುದಾನ ನೀಡುವಂತೆ ಶಾಸಕರು ಮನವಿ ಮಾಡಿದರು,

ತಡೆಗೋಡೆಗೆ ಅನುದಾನಕ್ಕೆ ಬೇಡಿಕೆ: ಕಳೆದ ಮಳೆಗಾಲದಲ್ಲಿ ಅನೇಕ ಕಡೆ ಧರೆ ಕುಸಿತ ಮತ್ತು ಕೃಷಿ ಭೂಮಿಗೆ ಹಾನಿಯಾಗಿದ್ದು ಇದಕ್ಕೆ ತಡೆಗೋಡೆ ನಿರ್ಮಾಣದ ಅಗತ್ಯವಿದ್ದು ಹೆಚ್ಚುವರಿ ಅನುದಾನ ಒದಗಿಸುವಂತೆ ಸಣ್ಣ ನೀರಾವರಿ ಸಚಿವ ಬೋಸರಾಜು ಅವರಿಗೆ ಮನವಿ ಮಾಡಿದರು.ಈಗಾಗಲೇ ಆರ್ಯಾಪು ಗ್ರಾಮದ ಕೊಲ್ಯದಲ್ಲಿ ತಡೆಗೋಡೆ ನಿರ್ಮಾಣಕ್ಕೆ ೨ ಕೋಟಿ ರು. ಅನುದಾನ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಇದಲ್ಲದೆ ಕಬಕ, ವಿಟ್ಲ, ಕೊಳ್ತಿಗೆ, ಪಾಣಾಜೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಗತ್ಯತೆಗನುಸಾರವಾಗಿ ತಡೆಗೋಡೆ ಕಾಮಗಾರಿಗೆ ಅನುದಾನವನ್ನು ಒದಗಿಸಲಾಗಿದ್ದು ಇನ್ನೂ ನೂರಾರು ಅರ್ಜಿಗಳು ಬಾಕಿ ಇದ್ದು ತಡೆಗೋಡೆ ಬೇಡಿಕೆ ಹೆಚ್ಚಿದ್ದು ಅನುದಾನ ನೀಡುವಂತೆ ಶಾಸಕರು ಮನವಿ ಮಾಡಿದರು.