ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ವಾಹನ ಕಳ್ಳತನ, ಸರಗಳ್ಳತನ, ದರೋಡೆ ಮುಂತಾದ ಗಂಭೀರ ಅಪರಾಧಗಳ ತಡೆಯುವ ನಿಟ್ಟಿನಲ್ಲಿ ರಾತ್ರಿ ಗಸ್ತನ್ನು ಹೆಚ್ಚಿಸುವಂತೆ ಶಾಸಕ ಸಿ.ಎನ್. ಬಾಲಕೃಷ್ಣ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.ಪಟ್ಟಣದ ಪೊಲೀಸ್ ಉಪ ಅಧೀಕ್ಷಕರ ಕಚೇರಿಯಲ್ಲಿ ಅಪರಾಧ ಪ್ರಕರಣ ಕುರಿತಾಗಿ ಪೊಲೀಸ್ ಅಧಿಕಾರಿಗಳೊಂದಿಗೆ ಏರ್ಪಡಿಸಿದ ಸಭೆಯಲ್ಲಿ ಮಾತನಾಡಿದ ಅವರು, ಕಾನೂನು-ಸುವ್ಯವಸ್ಥೆ ಕಾಪಾಡಲು ಹಳೆಯ ಅಪರಾಧ ಪ್ರಕರಣಗಳ ಅಪರಾಧಿಗಳ ಎಲ್ಲ ಮಾಹಿತಿಯನ್ನು ತೆಗೆದುಕೊಳ್ಳಬೇಕು ಮತ್ತು ಅವರ ಚಲನವಲನಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು. ಕಳ್ಳತನ, ವಾಹನ ಕಳ್ಳತನ, ಸರಗಳ್ಳತನ, ದರೋಡೆ ಮುಂತಾದ ಗಂಭೀರ ಅಪರಾಧಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕಾದರೆ ರಾತ್ರಿ ಗಸ್ತು ಬಿಗಿಗೊಳಿಸಬೇಕು ಎಂದರು.
ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ೩೬ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಅದರಲ್ಲಿ ೨೫ ಕ್ಯಾಮರಾಗಳು ಉತ್ತಮ ಸ್ಥಿತಿಯಲ್ಲಿವೆ. ಉಳಿದ ೧೬ ಕ್ಯಾಮರಾಗಳು ಸುಸ್ಥಿತಿಯಲ್ಲಿಲ್ಲ. ಪುರಸಭೆ ವತಿಯಿಂದ ಹೊಸದಾಗಿ ೧೬ ಕ್ಯಾಮರಾಗಳನ್ನು ಇಲಾಖೆಗೆ ನೀಡಲಾಗುವುದು. ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಆಯಕಟ್ಟಿನ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಹಿರೀಸಾವೆ, ನುಗ್ಗೇಹಳ್ಳಿ, ಶ್ರವಣಬೆಳಗೊಳ ಹೋಬಳಿ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಆಯಾ ಗ್ರಾಮ ಪಂಚಾಯಿತಿಗಳ ನೆರವು ಪಡೆಯಲಾಗುವುದು ಎಂದರು.ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪೊಲೀಸ್ ಇಲಾಖೆಯಿಂದ ಹೆಚ್ಚಿನ ಗಮನಹರಿಸಿ ಸಂಚಾರ ವ್ಯವಸ್ಥೆ ಸುಧಾರಿಸಬೇಕು. ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿ ಪೊಲೀಸರು ಕೆಲಸ ಮಾಡಬೇಕು. ಪಟ್ಟಣದಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ವ್ಯವಸ್ಥಿತವಾಗಿ ವಾಹನಗಳ ನಿಲುಗಡೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಸಿಗ್ನಲ್‌ನಲ್ಲಿ ಬೈಕ್ ಸವಾರರು ನಿಯಮ ಉಲ್ಲಂಘಿಸದಂತೆ ಸಂಚಾರ ಪೊಲೀಸರು ನಿಗಾ ವಹಿಸಬೇಕು. ಮೈಸೂರು ರಸ್ತೆಯಲ್ಲಿ ಸಂಚಾರ ಸಿಕ್ಕು ಆಗುತ್ತಿದ್ದು, ಇದನ್ನು ನಿವಾರಿಸಲು ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕೆಂದರು.
ಸಣ್ಣಪುಟ್ಟ ಲೋಪವನ್ನು ನಿವಾರಿಸಿಕೊಂಡು ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು. ಇನ್ನು ೧೫ ದಿನದಲ್ಲಿ ಪೊಲೀಸ್ ಇಲಾಖೆಗೆ ೨ ದ್ವಿಚಕ್ರ ವಾಹನಗಳನ್ನು ನೀಡಲಾಗುವುದು. ಮುಂದಿನ ವರ್ಷ ಏಪ್ರಿಲ್ ನಂತರ ಎರಡು ಬೊಲೆರೋ ಜೀಪುಗಳನ್ನು ನೀಡಲಾಗುವುದು. ಪಟ್ಟಣದ ಕೆಲ ಮೆಡಿಕಲ್ ಶಾಪ್‌ಗಳಲ್ಲಿ ಮಾದಕದ್ರವ್ಯ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂಬ ವಿಷಯ ಕೇಳಿ ಬಂದಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾದಕವಸ್ತು ಮಾರಾಟಗಾರರು ಮತ್ತು ಮಾದಕವಸ್ತುಗಳ ಮೂಲಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ತಾಲೂಕಿನ ಶಾಲಾಕಾಲೇಜುಗಳಲ್ಲಿ ಪೋಕ್ಸೋ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಇದರಿಂದ ವಿದ್ಯಾರ್ಥಿಗಳಿಗೆ ಈ ಕಾನೂನುಗಳ ಬಗ್ಗೆ ತಿಳಿಸಬಹುದು ಮತ್ತು ಮಹಿಳೆಯರ ಸುರಕ್ಷತೆ ಮತ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳನ್ನು ಪ್ರಚಾರ ಮಾಡಬೇಕು ಎಂದರು.ಡಿವೈಎಸ್ಪಿ ಎನ್. ಕುಮಾರ್ ಮಾತನಾಡಿ, ಅಧಿಕಾರಿಗಳು ಸೂಕ್ಷ್ಮ ಮತ್ತು ಗಂಭೀರ ಅಪರಾಧಗಳಲ್ಲಿ, ಮಾಧ್ಯಮಗಳಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಬೇಕು ಮತ್ತು ಪೊಲೀಸರು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಎಂ.ರಘುಪತಿ ಭಟ್ ಮಾತನಾಡಿ, ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು. ಸಂಘಟಿತ ಅಪರಾಧ, ಮಾದಕ ವಸ್ತು ಹಾಗೂ ದ್ರವ್ಯಗಳ ಸಾಗಣೆ, ಸಂಚಾರಿ ವ್ಯವಸ್ಥೆ, ಇರಾನಿ ಗ್ಯಾಂಗ್ ಮೇಲೆ ನಿಗಾ ವಹಿಸಲು ಪೊಲೀಸ್ ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿದರು.ಸಭೆಯಲ್ಲಿ ಪುರಸಭಾಧ್ಯಕ್ಷ ಸಿ.ಎನ್ ಮೋಹನ್, ಟಿಎಪಿಸಿಎಂಎಸ್‌ನ ಅಧ್ಯಕ್ಷ ಅನಿಲ್ ಮರಗೂರು ಇದ್ದರು.