ಮಾಗಡಿ: ರೈತರ ಕೆಲಸ ಮಾಡಿಕೊಡದೆ ಒಬ್ಬರ ಮೇಲೊಬ್ಬರು ಆರೋಪ ಮಾಡ್ತಿದ್ದೀರಿ. ಇಬ್ಬರಿಗೂ ಮುಖಕ್ಕೆ ಹೊಡೆಯುತ್ತೇನೆ ಎಂದು ಶಾಸಕ ಬಾಲಕೃಷ್ಣ ತಹಸೀಲ್ದಾರ್‌ ಶರತ್‌ ಕುಮಾರ್‌ ಮತ್ತಿತರ ಅಧಿಕಾರಿಗಳ ವಿರುದ್ಧ ಗರಂ ಆದ ಘಟನೆ ನಡೆಯಿತು.

ಮಾಗಡಿ: ರೈತರ ಕೆಲಸ ಮಾಡಿಕೊಡದೆ ಒಬ್ಬರ ಮೇಲೊಬ್ಬರು ಆರೋಪ ಮಾಡ್ತಿದ್ದೀರಿ. ಇಬ್ಬರಿಗೂ ಮುಖಕ್ಕೆ ಹೊಡೆಯುತ್ತೇನೆ ಎಂದು ಶಾಸಕ ಬಾಲಕೃಷ್ಣ ತಹಸೀಲ್ದಾರ್‌ ಶರತ್‌ ಕುಮಾರ್‌ ಮತ್ತಿತರ ಅಧಿಕಾರಿಗಳ ವಿರುದ್ಧ ಗರಂ ಆದ ಘಟನೆ ನಡೆಯಿತು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಅರ್ಜಿ ಕೊಡುವ ವೇಳೆ

ರೈತರು ಪೋಡಿ ದುರಸ್ತಿ ಮಾಡದೆ ವಿಳಂಬ ಮಾಡಿದ್ದಕ್ಕೆ ಆಕ್ರೋಶಗೊಂಡ ಶಾಸಕರು, ಬಂದಾಗಿಂದ ನಿಮಗೆ ರೈತರ ಸಮಸ್ಯೆ ಬಗೆಹರಿಸಲಾಗಿಲ್ಲ. ನಿಮ್ಮಿಬ್ಬರ ಕೆಲಸಕ್ಕೆ ಜನ ನಮ್ಮ ಮುಖಕ್ಕೆ ಉಗಿಯುತ್ತಿದ್ದಾರೆ. ರೈತರ ವಿಚಾರದಲ್ಲಿ ತಮಾಷೆ ಮಾಡ್ತಿದ್ದೀರಾ. ರಸ್ತೆಯಲ್ಲಿ ನಿಲ್ಲಿಸಿ ಇಬ್ಬರಿಗೂ ಹಾರ ಹಾಕಿ ಸನ್ಮಾನ ಮಾಡಿಸುತ್ತೀನಿ ನಾಚಿಕೆ ಆಗಲ್ವಾ ನಿಮಗೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಮುಂದಿನ ಸಭೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬೇಕು. ರೈತರು ಕೊಟ್ಟ ಅರ್ಜಿಯನ್ನು ಸ್ಥಳದಲ್ಲೇ ಇದ್ದ ಅಧಿಕಾರಿಗಳನ್ನು ಕರೆಸಿ, ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ ಲಂಚ ಪಡೆಯಲು ಕೆಲಸ ವಿಳಂಬ ಮಾಡುತ್ತಿದ್ದೀರಾ ಎಂದು ಅಧಿಕಾರಿಗಳ ವಿರುದ್ಧ ಗರಂ ಆದ ಶಾಸಕರು, ಯಾವ ಕಾರಣಕ್ಕಾಗಿ ಕೆಲಸ ಆಗಿಲ್ಲ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ತಿಳಿಸಬೇಕು. ಪದೇಪದೇ ಒಂದೇ ಕೆಲಸಕ್ಕಾಗಿ ತಾಲೂಕು ಕಚೇರಿಗೆ ಸಾರ್ವಜನಿಕರು ಅಲೆಯುತ್ತಿದ್ದಾರೆಂದರೆ ನಾಚಿಕೆಯಾಗಬೇಕು. ಕೆಲಸ ಆಗದಿದ್ದರೆ ಅರ್ಜಿ ಮೇಲೆ ಹಿಂಬರಹ ಬರೆದು ಯಾವ ಕಾರಣಕ್ಕೆ ಆಗಿಲ್ಲ ಎಂಬುದನ್ನು ತಿಳಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಖಡಕ್ ಸೂಚನೆ ನೀಡಿದರು.

ಪೌತಿ ಖಾತೆ, ನಕಾಶೆ ರಸ್ತೆ, ಖಾತೆ ಬದಲಾವಣೆ ಹಾಗೂ ದಾನ ಪತ್ರ ಮೂಲಕ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ನೀಡಿರುವ ಜಾಗವನ್ನು ಖಾತೆ ಮಾಡಿಸಿಕೊಳ್ಳುವುದು ಉಳಿಮೆ ಚೀಟಿ ಹೀಗೆ ಸಾರ್ವಜನಿಕರಿಂದ ಬಂದ ಅಹವಾಲುಗಳನ್ನು ಶಾಸಕ ಬಾಲಕೃಷ್ಣ ಸ್ವೀಕರಿಸಿ, ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಈ ಎಲ್ಲಾ ಅರ್ಜಿಗಳನ್ನು ಮುಂದಿನ ಸಭೆಯೊಳಗೆ ಬಗೆಹರಿಸಿ ನನಗೆ ಉತ್ತರ ಕೊಡಬೇಕು. ಇಲ್ಲವಾದರೆ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಡವಾಗಿ ಬಂದ ಅಧಿಕಾರಿಗಳಿಗೆ ತರಾಟೆ:

ತಾಲೂಕು ಜನಸಂಪರ್ಕ ಸಭೆಗೆ ತಡವಾಗಿ ಬಂದ ಮಹಿಳಾ ಅಧಿಕಾರಿಯನ್ನು ಶಾಸಕ ಬಾಲಕೃಷ್ಣ ತರಾಟೆಗೆ ತೆಗೆದುಕೊಂಡು ನಿಮಗೆ ಸಮಯಪ್ರಜ್ಞೆ ಇಲ್ಲ. ನನ್ನ ಜಾಲತಾಣದಲ್ಲಿ ನಾನು ಎಲ್ಲಿರುತ್ತೇನೆ ಎಂಬುದರ ಬಗ್ಗೆ ನನ್ನ ದಿನಚರಿ ಇರುತ್ತದೆ. ಅದನ್ನು ನೋಡಿ ಸರಿಯಾದ ಸಮಯಕ್ಕೆ ಸಭೆಗೆ ಆಗಮಿಸಬೇಕು. ಜನಗಳ ಕೆಲಸವನ್ನು ಕೂಡ ಹೀಗೆ ಮಾಡುತ್ತೀರಾ ಎಂದು ಪ್ರಶ್ನಿಸಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಶಾಸಕ ಬಾಲಕೃಷ್ಣ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಶರತ್ ಕುಮಾರ್, ತಾಪಂ ಇಒ ಜೈಪಾಲ್, ಅರಣ್ಯ ಅಧಿಕಾರಿ ಚೈತ್ರ, ಆರ್‌ಐ ಮಧು, ಪಿಎಸ್ಐ ಮನೋಜ್, ಕಂದಾಯ ಇಲಾಖೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಷನ್‌)

ಮಾಗಡಿ ತಾಲೂಕು ಕಚೇರಿಯಲ್ಲಿ ಶಾಸಕ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆ ನಡೆಯಿತು. ತಹಸೀಲ್ದಾರ್ ಶರತ್ ಕುಮಾರ್, ತಾಪಂ ಇಒ ಜೈಪಾಲ್, ಅರಣ್ಯ ಅಧಿಕಾರಿ ಚೈತ್ರ, ಆರ್‌ಐ ಮಧು, ಪಿಎಸ್ಐ ಮನೋಜ್ ಇತರರಿದ್ದರು.