ಶಾಸಕ ಬೆಲ್ಲದ ಸಹ ಸರ್ಕಾರದ ಜಾಗ ಪಡೆದಿದ್ದಾರೆ!

| Published : Aug 28 2024, 12:57 AM IST

ಸಾರಾಂಶ

ಜಿಂದಾಲ್‌ ಕಂಪನಿಗೆ ಭೂಮಿ ನೀಡಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿರುವ ಶಾಸಕ ಅರವಿಂದ ಬೆಲ್ಲದ ಅವರು ಸಹ ಕೈಗಾರಿಕೆ ಹೊಂದಿದವರು. ಅವರು ಸಹ ಸರ್ಕಾರದಿಂದ ಜಾಗ ಪಡೆದಿದ್ದಾರೆ ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ಧಾರವಾಡ:

ಜಿಂದಾಲ್‌ ಕಂಪನಿಗೆ ಭೂಮಿ ನೀಡಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿರುವ ಶಾಸಕ ಅರವಿಂದ ಬೆಲ್ಲದ ಅವರು ಸಹ ಕೈಗಾರಿಕೆ ಹೊಂದಿದವರು. ಕೆಐಎಡಿಬಿ ಜಾಗವನ್ನು ಅವರು ಸಹ ಇದೇ ರೀತಿ ಸರ್ಕಾರದಿಂದ ಲೀಸ್‌ ಮೇಲೆ ಹೊಂದಿದವರು ಎಂಬುದನ್ನು ಮರೆಯಬಾರದು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಟಾಂಗ್‌ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಒಂದೇ ತೆರನಾದ ಲೀಸ್‌ ಕಂ ಸೇಲ್‌ ಕಾನೂನಿದೆ. ಯಾವುದೇ ಒಂದು ಸಂಸ್ಥೆಗೆ ಭೂಮಿಯನ್ನು ಗುತ್ತಿಗೆಗೆ ನೀಡಿದಾಗ ಕಾನೂನು ಪ್ರಕಾರ ಷರತ್ತು ಇರುತ್ತದೆ. ಅವರು ಸಂಪೂರ್ಣ ದುಡ್ಡು ಕೊಟ್ಟಿರುತ್ತಾರೆ. ಆದ್ದರಿಂದ ಷರತ್ತು ಹಾಕಿ ಅವರಿಗೆ ಭೂಮಿ ಕೊಡಲಾಗುತ್ತದೆ. ಬೆಲ್ಲದ ಅವರಿಗೆ ಇದರ ಬಗ್ಗೆ ಬೇರೆ ಅಭಿಪ್ರಾಯ ಇರಬಹುದು. ಕೇಂದ್ರ ಸರ್ಕಾರ ಅವರದೇ ಇದ್ದು, ಹೀಗೆ ಯಾರ್ಯಾರಿಗೆ ಭೂಮಿ ಕೊಟ್ಟಿದ್ದಾರೆ ಎಂಬುದನ್ನು ಅವರು ಹೇಳುತ್ತಾರೆಯೇ ಎಂದು ಪ್ರಶ್ನಿಸಿದರು.

ನಾವು ಜಿಂದಾಲ್ ಕಂಪೆನಿಗೆ ಅನುಕೂಲ ಮಾಡಿ ಕೊಡುತ್ತಿಲ್ಲ. ರಾಜ್ಯದಲ್ಲಿ ಜಿಂದಾಲ್ ₹ 90 ಸಾವಿರ ಕೋಟಿ ಹೂಡಿಕೆ ಮಾಡಿದೆ. ನಾನು ಹುಟ್ಟಿ ಬೆಳೆದ ಜಾಗ ಅದು. ಬೆಲ್ಲದರಿಗೆ ಸಂಪೂರ್ಣ ಮಾಹಿತಿ ಇಲ್ಲ. ಇಲ್ಲದೇ ಹೋದಲ್ಲಿ ಮಾಹಿತಿಯನ್ನು ನಾವು ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರ ಕೆಡವಲು ಬಿಜೆಪಿ ಮುಂದಾಗಿದೆ. ಅದಾನಿ-ಅಂಬಾನಿ ದುಡ್ಡು ಇದ್ದವರು ಏನು ಬೇಕಾದರೂ ಮಾಡಬಹುದು ಎಂದ ಸಚಿವ ಲಾಡ್‌, ಬಿಜೆಪಿಗೆ ಅದಾನಿ-ಅಂಬಾನಿ ಹಣ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಅಂತಹುದೇ ಹಣದಿಂದ ಇಷ್ಟು ಸರ್ಕಾರಗಳನ್ನು ಬೀಳಿಸಲಾಗಿದೆ. ಮೋದಿ ಸರ್ಕಾರ ಬಂದ ಮೇಲೆ ಎಷ್ಟು ಯಶಸ್ವಿಯಾಗಿ ಸರ್ಕಾರಗಳನ್ನು ಬೀಳಿಸಿದ್ದೀರಿ ಎಂದು ಬೆಲ್ಲದ ಅವರನ್ನೇ ಕೇಳಿ ಎಂದ ಲಾಡ್‌, ಒಟ್ಟಾರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವರದ್ದೇ ಇರಬೇಕು. ಹಣ ಲೂಟಿ ಹೊಡೆಯಬೇಕು ಎಂಬುದೇ ಅವರ ಆಶಯ ಎಂದು ಸಚಿವ ಲಾಡ್‌ ಕಿಡಿಕಾರಿದರು.