ಹೈಟೆಕ್ ಮಾದರಿ ಸರ್ಕಾರಿ ಶಾಲೆಗಳ ನಿರ್ಮಾಣಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ

| Published : Oct 23 2024, 12:38 AM IST

ಹೈಟೆಕ್ ಮಾದರಿ ಸರ್ಕಾರಿ ಶಾಲೆಗಳ ನಿರ್ಮಾಣಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ತಾಲೂಕಿನ ಐದು ಹೈಟೆಕ್ ಮಾದರಿ ಸರ್ಕಾರಿ ಶಾಲೆಯನ್ನು ನಿರ್ಮಿಸಲು ಕಾರ್ಯಕ್ರಮ ರೂಪಿಸಿಕೊಳ್ಳಲಾಗಿದೆ. ಪ್ರಾಯೋಗಿಕವಾಗಿ ಕ್ಯಾತನಹಳ್ಳಿಯಲ್ಲಿಯೇ ಶಾಲೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ನಂತರ ಹಂತಹಂತವಾಗಿ ಗುರುತಿಸಲಾಗಿರುವ ಸ್ಥಳಕ್ಕೆ ಶಾಲೆಗಳನ್ನು ನಿರ್ಮಿಸಲು ಕ್ರಮವಹಿಸಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಅಗತ್ಯ ಸೌಲಭ್ಯಗಳು ಹೊಂದಿರುವ ಹೈಟೆಕ್ ಮಾದರಿಯಲ್ಲಿ ಸರ್ಕಾರಿ ಶಾಲೆಗಳ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಕ್ಯಾತನಹಳ್ಳಿಯಲ್ಲಿ ಅಂದಾಜು 5 ಕೋಟಿ ರು. ಮೌಲ್ಯದ ಹೈಟೆಕ್ ಸರ್ಕಾರಿ ಮಾದರಿ ಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಖಾಸಗಿ ಶಾಲೆಗಳ ಹಾವಳಿ ತಡೆಗಟ್ಟಲು, ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಹೋಬಳಿಗೊಂದು ಶಾಲೆಗಳನ್ನು ನಿರ್ಮಿಸುವ ಹೊಸ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದರು.

ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ಫಂಡ್‌ನಿಂದ ಹಣ ತಂದು ಸರ್ಕಾರಿ ಶಾಲೆ ಜಾಗದಲ್ಲಿ ಹೊಸದಾಗಿ ಶಾಲೆ ನಿರ್ಮಿಸಿ ಮತ್ತೆ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು. ಆ ನಂತರ ಶಾಲೆಯನ್ನು ಸರ್ಕಾರವೇ ನಡೆಸಿಕೊಂಡು ಹೋಗಲಿದೆ ಎಂದರು.

ತಾಲೂಕಿನ ಐದು ಹೈಟೆಕ್ ಮಾದರಿ ಸರ್ಕಾರಿ ಶಾಲೆಯನ್ನು ನಿರ್ಮಿಸಲು ಕಾರ್ಯಕ್ರಮ ರೂಪಿಸಿಕೊಳ್ಳಲಾಗಿದೆ. ಪ್ರಾಯೋಗಿಕವಾಗಿ ಕ್ಯಾತನಹಳ್ಳಿಯಲ್ಲಿಯೇ ಶಾಲೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ನಂತರ ಹಂತಹಂತವಾಗಿ ಗುರುತಿಸಲಾಗಿರುವ ಸ್ಥಳಕ್ಕೆ ಶಾಲೆಗಳನ್ನು ನಿರ್ಮಿಸಲು ಕ್ರಮವಹಿಸಲಾಗುವುದು ಎಂದರು.

ಶಾಲೆ ನಿರ್ಮಾಣಕ್ಕಾಗಿ ಸರ್ಕಾರದಿಂದ ಅನುದಾನ ಬಳಕೆ ಮಾಡಿಕೊಳ್ಳುತ್ತಿಲ್ಲ. ಸರ್ಕಾರದ ಅನುದಾನ ಬಳಕೆ ಮಾಡಿಕೊಳ್ಳಬೇಕಾದರೆ ನಿಯಮಗಳು ಇರುತ್ತವೆ. ಸದ್ಯಕ್ಕೆ ಈ ಶಾಲೆಗಳ ನಿರ್ಮಾಣಕ್ಕಾಗಿ ಸಂಪೂರ್ಣ ಖಾಸಗಿ ಸಂಸ್ಥೆಗಳಿಂದ ಹಣ ಸಂಗ್ರಹಿಸಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಶಾಲೆಗಳ ನಿರ್ವಹಣೆಗೂ ಸಹ ಹಣವನ್ನು ಡಿಫಾಜಿಟ್ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶಾಲೆಯಲ್ಲಿ ಮಕ್ಕಳಿಗೆ ಅಗತ್ಯವಿರುವ ತರಗತಿ ಕೊಠಡಿಗಳು, ಶೌಚಾಲಯ, ಅಡುಗೆ ಹಾಗೂ ಊಟದ ಹಾಲ್, ಒಳ ಹಾಗೂ ಹೊರ ಕ್ರೀಡಾಂಗಣ, ಗ್ರಂಥಾಲಯ, ಪ್ರಯೋಗಾಲಯ ಸೇರಿದಂತೆ ಅನೇಕ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.

ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿವರೆಗೂ ತರಗತಿಗಳು ನಡೆಯಲಿವೆ. ಅಗತ್ಯಕ್ಕಿಂತ ಹೆಚ್ಚಾಗಿ ಶಿಕ್ಷಕರ ನೇಮಕ ಹಾಗೂ ಸರ್ಕಾರದಿಂದ ಅನುಮತಿ ಪಡೆದು ಅತಿಥಿ ಶಿಕ್ಷಕರನ್ನು ಸಹ ನೇಮಿಸಿಕೊಳ್ಳಲಾಗುವುದು. ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಶಾಲೆಗಳನ್ನು ನಡೆಸಲಿವೆ. ಖಾಸಗಿ ಶಾಲೆಗಳ ಮಾದರಿಯಲ್ಲಿಯೇ ಬಸ್ ಸೌಲಭ್ಯ ಒದಗಿಸಿಕೊಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ಜನರು ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ಹೆಚ್ಚಾಗಿ ಹಣ ಖರ್ಚು ಮಾಡುತ್ತಿದ್ದಾರೆ. ಜನರಿಗೆ ಕೈಗೆಟಕುವ ರೀತಿಯಲ್ಲಿ ಉಚಿತವಾಗಿ ಗುಣಮಟ್ಟದ ಶಿಕ್ಷಣ ದೊರೆತರೆ ಆರ್ಥಿಕವಾಗಿ ಸಲಭಲರಾಗುತ್ತಾರೆ. ಪೋಷಕರು ಹೆಚ್ಚಾಗಿ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿರುವುದರಿಂದ ಆರಂಭದಿಂದಲೂ ಇಂಗ್ಲಿಷ್ ಮಾದರಿಯಲ್ಲಿಯೇ ತರಗತಿಗಳು ನಡೆಯಲಿವೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ ಆ ಶಾಲೆಗಳಲ್ಲಿ ಇರುವಂತಹ ಶಿಕ್ಷಕರು ಆಸಕ್ತಿವಹಿಸಿ ಸರ್ಕಾರಿ ಕೆಲಸ ಮಾಡಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಲು ಸಾಧ್ಯವಾಗುತ್ತದೆ ಎಂದರು.

ಸರ್ಕಾರಿ ಶಾಲೆ ಕೆಲವು ಶಿಕ್ಷಕರು ಶಾಲೆಗಳಲ್ಲಿ ತರಗತಿ ನಡೆಸುವುದನ್ನು ಬಿಟ್ಟು ಬಿಇಒ ಇಲಾಖೆ ಸೇರಿದಂತೆ ಸುತ್ತಾಡುವುದು ಸರಿಯಲ್ಲ. ಕೆಲಸ ಇದ್ದರೆ ಮಾತ್ರ ಬರಬೇಕು. ಉಳಿದ ಸಮಯದಲ್ಲಿ ತರಗತಿಗಳಲ್ಲಿ ಶಿಸ್ತಿನಿಂದ ಕೆಲಸ ಮಾಡಬೇಕು. ಶಾಲೆಗಳಲ್ಲಿ ಬಯೋ ಮೆಟ್ರಿಕ್ ಆರಂಭಿಸಲು ಕ್ರಮವಹಿಸಲಾಗುವುದು ಎಂದರು.

ಪಟ್ಟಣದ ಕಸಬಾ ಸೊಸೈಟಿಯಲ್ಲಿ ನಡೆದಿರುವ ಚಿನ್ನಾಭರಣೆ ಹಾಗೂ ಹಣ ದುರ್ಬಳಕೆ ಪ್ರಕರಣದಲ್ಲಿ ದುರ್ಬಳಕೆ ಮಾಡಿರುವ ಅಧಿಕಾರಿಗಳಿಂದ ಅಂದಾಜು 1 ಕೆಜಿಯಷ್ಟು ಚಿನ್ನಾಭರಣೆ ವಸೂಲಿ ಮಾಡಲಾಗಿದೆ. ಉಳಿದಂತೆ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದ್ದು, ಕೆಲವು ದಾಖಲೆಗಳನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದರು.

ಗುರುವಾರ ತಾಲೂಕಿನ ಎಲ್ಲಾ ಪ್ರಾಥಮಿಕ ಸಹಕಾರ ಸಂಘಗಳ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಆಡಿಟ್ ವರದಿ ಹಾಗೂ ಬ್ಯಾಂಕ್ ಪಾಸ್ ಬುಕ್‌ ತೆಗೆದುಕೊಂಡು ಬರುವಂತೆ, ಸೂಕ್ತ ತನಿಖೆ ನಡೆಸಲಾಗುವುದು ಎಂದರು.

ಇದೇ ವೇಳೆ ಗ್ರಾಮಕ್ಕೆ ಗಣನೀಯ ಸೇವೆಸಲ್ಲಿಸಿ ಹಲವು ಮಹಾನೀಯರ ಹೆಸರಿನಲ್ಲಿ ಹಿರಿಯ ಶಿಕ್ಷಕರಾದ ಜವರೇಗೌಡ, ತಿರುಮಲೇಗೌಡ ಹಾಗೂ ಶಿವಲಿಂಗೇಗೌಡರನ್ನು ಅಭಿನಂಧಿಸಲಾಯಿತು.

ಈ ವೇಳೆ ತಹಸೀಲ್ದಾರ್ ಸಂತೋಷ್, ಇಒ ಲೋಕೇಶ್‌ಮೂರ್ತಿ, ಬಿಇಒ ರವಿಕುಮಾರ್, ಬಿ.ಆರ್.ಪ್ರಕಾಶ್, ರೈತನಾಯಕಿ ಸುನೀತ ಪುಟ್ಟಣ್ಣಯ್ಯ, ಸ್ಮಿತ ಪುಟ್ಟಣ್ಣಯ್ಯ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಕೆ.ಎಸ್.ದಯಾನಂದ, ಕೆ.ಟಿ.ಗೋವಿಂದೇಗೌಡ, ರಾಮ್‌ದಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.