ಸಾರಾಂಶ
ಪುತ್ರ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬದ ಪ್ರಯುಕ್ತ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬದ ದಿನದಂದೆ ದೆಹಲಿಯಲ್ಲಿನ ಸಭೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಕ್ಷೇತ್ರದಲ್ಲಿ ಲಭ್ಯರಿಲ್ಲ. ಇದಕ್ಕೆ ಕ್ಷಮೆ ಕೋರುತ್ತೇನೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ 48ನೇ ಹುಟ್ಟುಹಬ್ಬವನ್ನು ರೈತ ಸಂಘದ ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ಆಚರಿಸಿದರು.ಪಟ್ಟಣದ ಬನ್ನಾರಿಯಮ್ಮನ ದೇವಸ್ಥಾನದಲ್ಲಿ ಶಾಸಕರ ಹೆಸರಿನಲ್ಲಿ ಅರ್ಚನೆ ಹಾಗೂ ವಿಶೇಷ ಪೂಜೆ ಸಲ್ಲಿಸಿದ ರೈತಸಂಘದ ಕಾರ್ಯಕರ್ತರು, ಬಳಿಕ ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಳಿಕ ಉಪವಿಭಾಗೀಯ ಆಸ್ಪತ್ರೆಗೆ ತೆರಳಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ತರುವಾಯ ಪುರಸಭೆಗೆ ತೆರಳಿ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಿಸಿದರು. ನಂತರ ಫ್ರೆಂಚ್ ರಾಕ್ಸ್ ಶತಮಾನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಬ್ಯಾಗ್ ವಿತರಿಸಿದರು. ಬಳಿಕ ಪಟ್ಟಣದ ಐದು ದೀಪದ ವೃತ್ತದಲ್ಲಿ ಜನರಿಗೆ ಅನ್ನ ಸಂತರ್ಪಣೆ ನಡೆಸಿದರು.ಈ ವೇಳೆ ರೈತಸಂಘದ ವರಿಷ್ಠ ನಾಯಕಿ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ಪುತ್ರ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬದ ಪ್ರಯುಕ್ತ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬದ ದಿನದಂದೆ ದೆಹಲಿಯಲ್ಲಿನ ಸಭೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಕ್ಷೇತ್ರದಲ್ಲಿ ಲಭ್ಯರಿಲ್ಲ. ಇದಕ್ಕೆ ಕ್ಷಮೆ ಕೋರುತ್ತೇನೆ ಎಂದರು.
ಪೌರ ಕಾರ್ಮಿಕರು ಸ್ವಚ್ಛತೆಯಿಂದ ಇರಬೇಕು. ಜತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು. ಅವರಿಲ್ಲದಿದ್ದರೆ ನಗರ ಸ್ವಚ್ಛತೆಯಿಂದ ಇರುವುದಿಲ್ಲ. ಪಟ್ಟಣದಲ್ಲಿ ಪೌರ ಕಾರ್ಮಿಕರಿಗೆ ವಸತಿ ನಿರ್ಮಾಣಕ್ಕೆ ಮುಂದಾಗಿದ್ದು, ಯಾವುದೇ ಸಮಸ್ಯೆ ಉಂಟಾಗದಂತೆ ಎಲ್ಲರಿಗೂ ವಸತಿ ಸಿಗುವ ರೀತಿ ವಸತಿ ನಿರ್ಮಾಣ ಮಾಡುವಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಜತೆ ಮಾತನಾಡುತ್ತೇನೆ ಎಂದರು.ತಾಲೂಕು ರೈತಸಂಘದ ಅಧ್ಯಕ್ಷ ಕೆ.ಎನ್.ವಿಜಯಕುಮಾರ್ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ 48ನೇ ಹುಟ್ಟುಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದರು.
ಈ ವೇಳೆ ರೈತಸಂಘದ ನೂರಾರು ಮುಖಂಡರು, ಸ್ಥಳೀಯ ಸಂಸ್ಥೆ ಚುನಾಯಿತ ಸದಸ್ಯರು ಇತರರು ಹಾಜರಿದ್ದರು.