ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕೆರೆ ತೊಣ್ಣೂರು ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ನಿಲಯಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ದಿಢೀರ್ ಭೇಟಿ ನೀಡಿ ಹಾಸ್ಟೆಲ್‌ನಲ್ಲಿ ಇಲ್ಲದ ವಾರ್ಡನ್‌ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.ಪಟ್ಟಣದ ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್‌ನ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ ಅರುಣ್‌ಕುಮಾರ್ ಅವರನ್ನು ತಾಲೂಕಿನ ಕೆರೆತೊಣ್ಣೂರಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಹೆಚ್ಚುವರಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸಲು ನಿಯೋಜನೆ ಮಾಡಲಾಗಿತ್ತು. ಕಳೆದ ಒಂದು ವರ್ಷದಿಂದಲೂ ಹೆಚ್ಚುವರಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್‌ಕುಮಾರ್ ಸರಿಯಾಗಿ ಹಾಸ್ಟೆಲ್‌ಗೆ ಹಾಜರಾಗುತ್ತಿರಲಿಲ್ಲ. ಜತೆಗೆ ವಾರ್ಡನ್ ಅರುಣ್‌ಕುಮಾರ್ ಕೆರೆತೊಣ್ಣೂರು ಗ್ರಾಮದವರೇ ಆಗಿದ್ದರಿಂದ ಅವರ ಬದಲು ಅವರ ತಾಯಿ ವನಜಾಕ್ಷಿ ಅವರನ್ನು ಹಾಸ್ಟೆಲ್‌ನಲ್ಲಿ ಇರಿಸಿಕೊಂಡು ಉಸ್ತುವಾರಿ ನೋಡಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುರುವಾರ ರಾತ್ರಿ ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿದ ವೇಳೆ ವಿದ್ಯಾರ್ಥಿಗಳು ವಾರ್ಡನ್ ವಿರುದ್ಧ ದೂರುಗಳ ಸುರಿಮಳೆಗರೆದರು. ಆ ಸಮಯದಲ್ಲಿ ವಾರ್ಡನ್ ಅರುಣ್‌ಕುಮಾರ್ ಕೂಡ ಹಾಸ್ಟೆಲ್‌ನಲ್ಲಿ ಇರಲಿಲ್ಲ. ಊಟ ಸರಿಯಾಗಿಲ್ಲದಿರುವುದು, ನಿಗದಿಪಡಿಸಿದ ವೇಳಾಪಟ್ಟಿಯನುಸಾರ ಊಟ ನೀಡದಿರುವುದು ಸೇರಿದಂತೆ ಹಾಸ್ಟೆಲ್‌ನ ಹಲವಾರು ಅವ್ಯವಸ್ಥೆಗಳನ್ನು ವಿದ್ಯಾರ್ಥಿಗಳು ಶಾಸಕರೆದುರು ತೆರೆದಿಟ್ಟರು.ವಾರ್ಡನ್ ಅರುಣ್‌ಕುಮಾರ್ ಹಾಸ್ಟೆಲ್‌ನಲ್ಲೇ ಇರುವುದಿಲ್ಲ. ಅವರ ತಾಯಿ ಹಾಸ್ಟೆಲ್‌ನಲ್ಲಿಯೇ ಇದ್ದಾರೆ. ಅವರು ನಮಗೆಲ್ಲ ಬಾಯಿಗೆ ಬಂದಂತೆ ಬೈಯ್ಯುತ್ತಾರೆ ಎಂದು ವಿದ್ಯಾರ್ಥಿಗಳು ದೂರಿದರು. ವಿದ್ಯಾರ್ಥಿಗಳಿಂದ ಕೇಳಿಬಂದ ದೂರುಗಳನ್ನು ಆಲಿಸಿದ ದರ್ಶನ್ ಪುಟ್ಟಣ್ಣಯ್ಯ ವಾರ್ಡನ್ ಅರುಣ್‌ಗೆ ಪೋನ್ ಕರೆ ಮಾಡಿ ತೀವ್ರವಾಗಿ ಜಾಡಿಸಿದರು.
ಹಾಸ್ಟೆಲ್‌ನಲ್ಲಿ ಇರದೇ ಎಲ್ಲಿಗೆ ಹೋಗಿದ್ಯಾ?.ನಿನ್ನ ಜವಾಬ್ದಾರಿ ಏನು? ನಿಮ್ಮಮ್ಮ ಹಾಸ್ಟೆಲ್‌ನಲ್ಲಿ ಯಾಕೆ ಇದ್ದಾರೆ. ನಿಮ್ಮಮ್ಮನಿಗೂ ಹಾಸ್ಟೆಲ್‌ಗೂ ಏನು ಸಂಬಂಧ?. ಈ ಹಾಸ್ಟೆಲ್ ನಿಮ್ಮಪ್ಪ ಅಥವಾ ನಿಮ್ಮ ಅಮ್ಮಂದಾ ಎಂದು ಖಾರವಾಗಿ ಪ್ರಶ್ನಿಸಿದರು. ಇನ್ನು ಮುಂದೆ ಹಾಸ್ಟೆಲ್ ಒಳಗೆ ನೀನು, ನಿಮ್ಮ ಅಮ್ಮ ಕಾಲು ಹಾಕಬಾರದು. ಕಾಲಿಟ್ಟರೆ ಕಾಲು ಕತ್ತರಿಸಿ ಬಿಡ್ತೀನಿ ಎಂದು ಕಠೋರವಾಗಿ ಹೇಳಿದರು.