ಸಾರಾಂಶ
ಶಿರಸಿ: ಇಲ್ಲಿನ ಪಂಡಿತ್ ಸಾರ್ವಜನಿಕ ಆಸ್ಪತ್ರೆ ವಿಚಾರವಾಗಿ ಸರ್ಕಾರ ವೈದ್ಯಕೀಯ ಸಲಕರಣೆಗಳಿಗೆ ₹೩೦ ಕೋಟಿ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಹೈಟೆಕ್ ಅಸ್ಪತ್ರೆಯನ್ನು ಕೆಳದರ್ಜೆಗೆ ಶಾಸಕ ಭೀಮಣ್ಣ ನಾಯ್ಕ ತಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ, ಕೂಡಲೇ ಅವರು ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.ಅವರು ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಶಾಸಕರ ಆಪ್ತರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಶಿರಸಿಯದು ಹೈಟೆಕ್ ಆಸ್ಪತ್ರೆಯಲ್ಲ, ತಾಲೂಕು ಆಸ್ಪತ್ರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಹೈಟೆಕ್ ಆಸ್ಪತ್ರೆಗೆ ಅವಶ್ಯವಿರುವ ಎಲ್ಲ ಸೌಲಭ್ಯವನ್ನು ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಜೂರು ಮಾಡಿಸಿಕೊಂಡು ಬಂದಿದ್ದರು. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದು ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರ ವೈದ್ಯಕೀಯ ಉಪಕರಣಗಳ ಖರೀದಿಗಾಗಿ ಮೀಸಲಿರಿಸಿದ್ದ ₹೩೦ ಕೋಟಿ ಕೊಡುವುದಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯನ್ನು ಕೆಳದರ್ಜೆಗೆ ಇಳಿಸುವ ಶಾಸಕರ ಪ್ರಯತ್ನ ಜನತೆಗೆ ಮಾಡುವ ದ್ರೋಹವಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಹಾಲಪ್ಪ ಜಕ್ಕಣ್ಣನವರ್, ಸಿದ್ದಾಪುರ ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಕೆ.ತಿಮ್ಮಪ್ಪ, ಶಿರಸಿ ತಾಲೂಕು ಅಧ್ಯಕ್ಷೆ ಉಷಾ ಹೆಗಡೆ, ರಂಗಪ್ಪ ದಾಸನಕೊಪ್ಪ ಇದ್ದರು.