ಕೂಡ್ಲಿಗಿ: ತಾಲೂಕಿನ ನೂರಾರು ಹಳ್ಳಿಗಳಲ್ಲಿ ವಿಂಡ್ ಫ್ಯಾನ್ ಹಾಗೂ ಸೋಲಾರ್ ಅಳವಡಿಕೆಯಿಂದ ಕಾಡುಪ್ರಾಣಿಗಳು, ಹಳ್ಳಿಯ ಜನತೆಗೆ ನಿತ್ಯ ಕಿರಿಕಿರಿ, ಮಾನವ ಹಾಗೂ ಜೀವವೈವಿಧ್ಯ ವಾಸಸ್ಥಾನಗಳಿಗೆ ಕುತ್ತು ಬಂದಿರುವ ಬಗ್ಗೆ ಕಳೆದ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕನ್ನಡಪ್ರಭ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಸದನದಲ್ಲಿ ಗುಡುಗಿದ್ದಾರೆ.
ವಿಂಡ್ ಫ್ಯಾನ್‌ನಿಂದ ಹಳ್ಳಿಗಳಲ್ಲಿ ನಿತ್ಯ ಶಬ್ದಮಾಲಿನ್ಯ ಉಂಟಾಗುತ್ತಿದೆ. ಇದರಿಂದ ಶಾಲೆಯ ಮಕ್ಕಳಿಗೆ ತೊಂದರೆಯಾಗುವುದಲ್ಲದೇ ವೖದ್ಧರು, ರೋಗಿಗಳಿಗೆ ರಾತ್ರಿ ನಿದ್ದೆ ಬರುವುದಿಲ್ಲ. ಏಷ್ಯಾದ 2 ನೇ ಕರಡಿಧಾಮವಾಗಿರುವ ಗುಡೇಕೋಟೆಯ ಸುತ್ತಮುತ್ತ ವಿಂಡ್ ಫ್ಯಾನ್ ಅಬ್ಬರದ ಶಬ್ದದ ಅಲೆಗಳಿಗೆ ಅಪರೂಪದ ಕಪ್ಪು ಕರಡಿಗಳು ವಲಸೆ ಹೋಗುವ ಅಪಾಯವಿದೆ. ಕರಡಿಗಳು ಕಾಡಿನಲ್ಲಿ ಬರುವ ಶಬ್ದಕ್ಕೆ ಬೆದರಿ ರೈತರ ಜಮೀನುಗಳಿಗೆ ಹೋಗುತ್ತವೆ. ರೈತರು ಕರಡಿಗಳನ್ನು ಕೊಲ್ಲುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ದೊಡ್ಡ ಫ್ಯಾನ್ ಹೊತ್ತ ದೈತ್ಯಾಕಾರದ ಲಾರಿಗಳಿಂದ ಗ್ರಾಮೀಣ ರಸ್ತೆಗಳು ಹಾಳಾಗಿರುವ ಬಗ್ಗೆ ಕನ್ನಡಪ್ರಭ ಮಾನವೀಯ ಕಳಕಳಿಯ ವರದಿಗಳನ್ನು ಪ್ರಕಟಿಸಿತ್ತು. ಕನ್ನಡಪ್ರಭ ಹೆಸರು ಹೇಳದೇ ಶಾಸಕರು ದಿನಪತ್ರಿಕೆಯಲ್ಲಿ ಸರಣಿ ವರದಿಗಳು ಪ್ರಕಟವಾಗಿ ನನ್ನ ಗಮನ ಸೆಳೆದಿವೆ ಎಂದಿದ್ದಾರೆ.ಜಿ.ಪರಮೇಶ್ವರ್ ಸ್ಪಂದನೆ:ವಿಂಡ್ ಫ್ಯಾನ್ ಅವಾಂತರ ಬಗ್ಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸದನದಲ್ಲಿ ಕೇಳಿದ ಪ್ರಶ್ನೆಗೆ ಗೃಹ ಸಚಿವ ಸಿ.ಪರಮೇಶ್ವರ್ ಪ್ರತಿಕ್ರಿಯಿಸಿ, 2022ರಿಂದ 2027ರವರೆಗೆ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ಒಂದು ನೀತಿಯನ್ನು ತಯಾರಿಸಲಾಗಿತ್ತು. ಹೀಗಾಗಿ ಖಾಸಗಿ ಜಮೀನುಗಳಲ್ಲಿ ವಿಂಡ್ ಫ್ಯಾನ್, ಸೋಲಾರ್‌ಗೆ ಅನುಮತಿ ನೀಡಲಾಗಿದೆ. ಆದರೆ ದೈತ್ಯಾಕಾರದ ಲಾರಿಗಳು ಸಂಚರಿಸಿ ಗ್ರಾಮೀಣ ರಸ್ತೆಗಳು ಹಾಳಾದರೆ ವಿಂಡ್ ಕಂಪನಿಯವರೇ ರಸ್ತೆ ಪುನರ್ ನಿರ್ಮಿಸಿಕೊಡಬೇಕು ಎಂಬುದು ಯೋಜನೆಯಲ್ಲಿ ಇದೆ. ವಿಂಡ್ ಫ್ಯಾನ್, ಸೋಲಾರ್‌ನಿಂದ ಸಮಸ್ಯೆಯಾದರೆ ಜಿಲ್ಲಾಧಿಕಾರಿ ಇದಕ್ಕೆ ಉತ್ತರ ನೀಡಬೇಕು. ಸಮಸ್ಯೆ ಪರಿಹರಿಸಲು ಮುಂದಾಗಬೇಕಿದೆ ಎಂದರು. ರೈತರಿಗೆ ತೊಂದರೆಯಾಗದಂತೆ ಖಾಸಗಿ ಕಂಪನಿಗಳು ನೋಡಿಕೊಳ್ಳಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.