ಕನ್ನಡಿಗರ ಕೈಗೆ ಚೊಂಬು ನೀಡಿದೆ ಕಾಂಗ್ರೆಸ್

| Published : Apr 23 2024, 12:46 AM IST

ಕನ್ನಡಿಗರ ಕೈಗೆ ಚೊಂಬು ನೀಡಿದೆ ಕಾಂಗ್ರೆಸ್
Share this Article
  • FB
  • TW
  • Linkdin
  • Email

ಸಾರಾಂಶ

ಹುಣಸೂರು ನಗರಸಭೆ ವ್ಯಾಪ್ತಿಯ ವಾರ್ಡ್ ಗಳಲ್ಲಿ ಸೋಮವಾರ ಮನೆ ಮನೆ ಭೇಟಿ ಮೂಲಕ ಮತಯಾಚನೆ ಕಾರ್ಯಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಹುಣಸೂರು

ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ 11 ತಿಂಗಳಿನಲ್ಲಿ ಗ್ಯಾರಂಟಿ ಯೋಜನೆಯ ನೆಪದಲ್ಲಿ ಕನ್ನಡಿಗರ ಕೈಗೆ ಚೊಂಬು ನೀಡಿರುವುದೇ ದೊಡ್ಡ ಸಾಧನೆಯಾಗಿದೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ವ್ಯಂಗ್ಯವಾಡಿದರು.

ಹುಣಸೂರು ನಗರಸಭೆ ವ್ಯಾಪ್ತಿಯ ವಾರ್ಡ್ ಗಳಲ್ಲಿ ಸೋಮವಾರ ಮನೆ ಮನೆ ಭೇಟಿ ಮೂಲಕ ಮತಯಾಚನೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಗ್ಯಾರಂಟಿಯ ಗುಮ್ಮನನ್ನು ಮುಂದಿಟ್ಟುಕೊಂಡಿದೆ. ಇದರಿಂದ ಅಭಿವೃದ್ಧಿಯೆನ್ನುವುದು ಮರೀಚಿಕೆಯಾಗಿದೆ. ಒಂದೆಡೆ ಗ್ಯಾರಂಟಿ ಯೋಜನೆಗಳೂ ಸಂಪೂರ್ಣವಾಗಿ ಜನರ ಕೈಗೆ ಸಿಗುತ್ತಿಲ್ಲ. ಮತ್ತೊಂದೆಡೆ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತವಾಗಿದೆ ಎಂದು ಅವರು ತಿಳಿಸಿದರು.ತಾಲೂಕಿನಲ್ಲಿ ಪ್ರಮುಖ ರಸ್ತೆಗಳು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಕನಿಷ್ಟ ಪಕ್ಷ ದುರಸ್ತಿಗೆ ಕೂಡ ಹಣ ಬಿಡುಗಡೆಯಾಗುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಟೀಕಿಸಿದರು. ಅಪಪ್ರಚಾರವೇ ಅವರ ಬಂಡವಾಳ

ತಾಲೂಕಿನಲ್ಲಿ ಕಾಂಗ್ರಸ್ ಪ್ರಚಾರ ಸಭೆಗಳಲ್ಲಿ ಮೋದಿ ಸರ್ಕಾರ ಬಂದರೆ ಮೀಸಲಾತಿ ರದ್ದುಗೊಳಿಸುತ್ತಾರೆ ಎಂಬಿತ್ಯಾದಿ ಸುಳ್ಳುಗಳನ್ನು ಹೇಳುತ್ತಿರುವುದು ಖಂಡನಿಯ. ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡದ ವಿಪಕ್ಷಗಳಿಗೆ ಇಂತಹ ಸುಳ್ಳುಗಳೇ ವಿಷಯವಾಗಿರುವುದು ಹಾಸ್ಯಾಸ್ಪದ. ಅಂಬೇಡ್ಕರ್ ಅವರೇ ಮತ್ತೆ ಹುಟ್ಟಿ ಬಂದರೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದು ಮೋದಿ ಅವರೇ ಹೇಳಿದ್ದಾರೆ. ಹಾಗಿದ್ದೂ ಕಾಂಗ್ರೆಸ್ ಪಕ್ಷದವರು ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಯತ್ನಿಸುತ್ತಿದ್ದಾರೆ ಎಂದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನೀಡುತ್ತೇವೆ ಎನ್ನುವ ಗ್ಯಾರಂಟಿ ಯೋಜನೆ ಯಾರಾದರೂ ನಂಬಲು ಸಾಧ್ಯವೇ? ಇಂತಹ ಮಾತುಗಳಿಗೆ ಜನತೆ ಮರುಳಾಗಬಾರದು. ಮೈತ್ರಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮತ ನೀಡಿ ಗೆಲ್ಲಿಸುವ ಮೂಲಕ ಮೋದಿ ಅವರ ಕೈಬಲಪಡಿಸಬೇಕು ಎಂದು ಅವರು ಕೋರಿದರು.

ಈ ವೇಳೆ ಜೆಡಿಎಸ್ ಮುಖಂಡ ಹರವೆ ಶ್ರೀಧರ್, ನಗರಸಭೆ ಸದಸ್ಯರಾದ ದೇವರಾಜ್, ಗಣೇಶ್ ಕುಮಾರಸ್ವಾಮಿ, ಸತೀಶ್ ಕುಮಾರ್, ರಾಣಿ ಪೆರುಮಾಳ್, ಹರೀಶ್, ಬಿಜೆಪಿ ಹಿಂದುಳಿದ ವರ್ಗಗಳ ನಗರಮಂಡಲ ಅಧ್ಯಕ್ಷ ಅರುಣ್ ಚವ್ಹಾಣ್, ರಮೇಶ್, ಶಿವಾನಂದ್, ನಾಗೇಂದ್ರ ಗುಪ್ತ, ವೆಂಕಟರಮಣ ಮೊದಲಾದವರು ಇದ್ದರು.