ಶಾಸಕ ಜಿ.ಎಸ್. ಪಾಟೀಲ ಮಾತನಾಡಿ‌, ನನ್ನ ಕ್ಷೇತ್ರದ ಜನತೆ ನನ್ನ ಮೇಲೆ ಅಪಾರ ಪ್ರೀತಿ ವಿಶ್ವಾಸ ಹೊಂದಿದ್ದಾರೆ. ನನ್ನ ಅರ್ಥ ಮಾಡಿಕೊಳ್ಳುವ ಮನೊ ಶ್ರೀಮಂತಿಕೆ ಕ್ಷೇತ್ರದ ಜನರಲ್ಲಿದೆ ಎಂಬುದು ಖುಷಿ ತಂದಿದೆ ಎಂದರು.

ರೋಣ: ಸರ್ವಜನಾಂಗದ ಪ್ರೀತಿ, ವಿಶ್ವಾಸ ಗಳಿಸಿ, ಸಮಾನತೆಯಿಂದ ಎಲ್ಲರೊಂದಿಗೂ ಬೆರೆಯುವ ಮುತ್ಸದ್ಧಿ, ಸರಳ ಸ್ವಭಾವದ, ಮೇರು ವ್ಯಕ್ತಿತ್ವವನ್ನು ರೋಣ ಶಾಸಕ ಜಿ.ಎಸ್. ಪಾಟೀಲ ಅವರು ಹೊಂದಿದ್ದು, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರ ಅಪಾರ ಕೊಡುಗ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಶ್ಲಾಘಿಸಿದರು.

ಶುಕ್ರವಾರ ಪಟ್ಟಣದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಎಸ್.ಆರ್. ಪಾಟೀಲ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಉದ್ಯೋಗ ಕ್ರಾಂತಿ- 2026 ಮತ್ತು ಅಭಿಮಾನಿಗಳಿಂದ ಶಾಸಕ ಜಿ.ಎಸ್. ಪಾಟೀಲರಿಗೆ ಜನ್ಮದಿನದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಐದು ದಶಕ ಸಮಾಜಸೇವೆಯಲ್ಲಿ ವಿವಿಧ ರೂಪದಲ್ಲಿ ಕೊಡುಗೆ ನೀಡಿದ್ದಾರೆ. ಯುವಕರಾಗಿದ್ದಾಗ, ಪುರಸಭೆ ಸದಸ್ಯರಾಗಿದ್ದಾಗ, ಎಪಿಎಂಸಿ, ದೊಡ್ಡ ದೊಡ್ಡ ನಿಗಮದ ಅಧ್ಯಕ್ಷರಾಗಿ, ಶಾಸಕರಾಗಿ ಜಿಲ್ಲೆಗೆ ಎಲ್ಲ ವರ್ಗಗದವರನ್ನು ಕೂಡಿಸಿಕೊಂಡು ಜಿಲ್ಲೆಯೆ ಜನತೆ ಸಾಮರಸ್ಯದಿಂದ ಬದುಕಬೇಕು ಎನ್ನುವ ಹಿನ್ನೆಲೆ ಶ್ರಮಿಸಿದ ಧೀಮಂತ ನಾಯಕರಾಗಿದ್ದಾರೆ. ಕೆರೆ ನಿರ್ಮಿಸಿದರೆ ಸಾವಿರ ಕೆರೆ ನಿರ್ಮಿಸಬೇಕು, ಗಿಡ ಹಚ್ಚಿದರೆ ಲಕ್ಷಗಟ್ಟಲೆ ಗಿಡ ಹಚ್ಚಬೇಕು, ಉದ್ಯೋಗ ಕೊಟ್ಟರೆ ಸಾವಿರಾರು ಯುವಕರು, ಯುವತಿಯರಿಗೆ ಉದ್ಯೋಗ ನೀಡಬೇಕು ಎಂಬ ಧ್ಯೇಯದೊಂದಿಗೆ ಸಾಧಿಸಿದ್ದಾರೆ ಎಂದರು.

ಶಾಸಕ ಜಿ.ಎಸ್. ಪಾಟೀಲ ಮಾತನಾಡಿ‌, ನನ್ನ ಕ್ಷೇತ್ರದ ಜನತೆ ನನ್ನ ಮೇಲೆ ಅಪಾರ ಪ್ರೀತಿ ವಿಶ್ವಾಸ ಹೊಂದಿದ್ದಾರೆ. ನನ್ನ ಅರ್ಥ ಮಾಡಿಕೊಳ್ಳುವ ಮನೊ ಶ್ರೀಮಂತಿಕೆ ಕ್ಷೇತ್ರದ ಜನರಲ್ಲಿದೆ ಎಂಬುದು ಖುಷಿ ತಂದಿದೆ. ಸಮಾನತೆಯ ತತ್ವ ಸಿದ್ಧಾಂತದಡಿ ನಾವು ಕೆಲಸ ಮಾಡುತ್ತಿದ್ದೇವೆ. ದೇಶದಲ್ಲಿ ಸಮಾನತೆ ಜತೆಗೆ ಆರ್ಥಿಕ ಸಮಾನತೆ ಬರಬೇಕಿದೆ. ಮಹಿಳಾ ಸಬಲಕರವಾಗಬೇಕು, ಮಹಿಳೆಯರು ಆರ್ಥಿಕವಾಗಿ ಪ್ರಗತಿ ಹೊಂದಿಬೇಕು ಹಾಗೂ ಯುವ ಯುವತಿಯರು ಉದ್ಯೋಗಿಗಳಾಗಬೇಕು ಎಂಬ ಉದ್ದೇಶದಿಂದ ಎಸ್.ಆರ್. ಪಾಟೀಲ‌ ಪ್ರತಿಷ್ಠನಾದಿಂದ ಸ್ವಯಂ ಮಹಿಳಾ ಉದ್ಯಮಿ, ಯುವಕ, ಉವತಿಯರಿಗೆ ಉದ್ಯೋಗಕ್ಕಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.

ಅರಣ್ಯ ನಿಗಮದ ಮಾಜಿ ಅಧ್ಯಕ್ಷ ಟಿ. ಈಶ್ವರ ಮಾತನಾಡಿ, ವರ್ಷವಿಡಿ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಸೋಲು ಗೆಲುವು ಲೆಕ್ಕಿಸದೆ ಜನಪ್ರತಿನಿಧಿಯಾಗಿ ಸದಾಕಾಲ ಜನರಿಗಾಗಿ ಸೇವೆಯಲ್ಲಿ ಜಿ.ಎಸ್. ಪಾಟೀಲರು ತೊಡಗಿಸಿಕೊಂಡಿದ್ದಾರೆ ಎಂದರು.

ಎಸ್‌ಬಿಎಸ್ ಬೆಂಗಳೂರಿನ ಮುಖ್ಯಸ್ಥೆ ಭವ್ಯಾ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲರ ಜನ್ಮದಿನದ ನಿಮಿತ್ತ ಉದ್ಯೋಗ ಕ್ರಾಂತಿಯ ಮೂಲಕ ಮಹಿಳೆಯರು ಸ್ವಾವಲಂಬನೆಯಾಗಬೇಕು ಎನ್ನುವ ಹಿನ್ನೆಲೆ ಜೋಳದ ರೊಟ್ಟಿ, ಚಟ್ನಿ ತಯಾರಿಕೆ ತರಬೇತಿ ಗ್ರಾಮೀಣ ಮಹಿಳೆಯರಿಗೆ ವೇದಿಕೆಯಾಗಲಿದೆ. ವಿವಿಧ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ತಯಾರಿಸಿ ವೇದಿಕೆ ಒದಗಿಸಿದ್ದಾರೆ ಎಂದರು.

ಕುದುರಿಮೋತಿ ಮಹಾಂತ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿ, ಶಾಸಕ‌ ಜಿ.ಎಸ್‌. ಪಾಟೀಲ ಅವರು ಮಂತ್ರಿಯಾಗಬೇಕು.‌ ಅದಕ್ಕಾಗಿ ಕಾರ್ಯಕರ್ತರು ಒತ್ತಾಯಿಸಬೇಕು. ಸುಮ್ಮನೆ ಕುಳಿತರೆ ಇವರನ್ನು ಮಂತ್ರಿ ಮಾಡಲ್ಲ, 5 ಬಾರಿ ಎಂಎಲ್ಎ ಆಗಿದ್ದಾರೆ. ಒಂದು ಬಾರಿಯಾದರೂ ಮಂತ್ರಿಯಾಗಬೇಕಲ್ಲ. ಜಿ.ಎಸ್‌. ಪಾಟೀಲ ಅವರು ಮುತ್ಸದ್ಧಿ ರಾಜಕಾರಣಿಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಆರ್.ಎಸ್. ಪಾಟೀಲ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಐ.ಎಸ್‌. ಪಾಟೀಲ, ಮಿಥುನ‌ ಪಾಟೀಲ, ಅಕ್ಷಯ ಪಾಟೀಲ, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಹಾಗೂ ಶರಣಗೌಡ ಪಾಟೀಲ ಸರ್ಜಾಪೂರ, ಪ್ರಭು ಮೇಟಿ, ವೀರಣ್ಣ ಶೆಟ್ಟರ, ರಮೇಶ ಪಲ್ಲೇದ, ಯಚ್ಚರಗೌಡ ಗೋವಿಂದಗೌಡ್ರ, ಸಿದ್ದಣ್ಣ ಬಂಡಿ, ಎಚ್.ಎಸ್. ಸೋಂಪೂರ, ಸಿದ್ದಲಿಂಗೇಶ ಪಾಟೀಲ, ಬಸವರಡ್ಡಿ ರಡ್ಡೇರ, ಸುಜಾತ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು. ಅಂದಾನಯ್ಯ ವಿರಕ್ತಮಠ ನಿರೂಪಿಸಿದರು.