ಸಾರಾಂಶ
ಕಂಪ್ಲಿ: ಶಾಸಕ ಜೆ.ಎನ್. ಗಣೇಶ್ ಹಾಗೂ ಕಾಂಗ್ರೆಸ್ ಪಕ್ಷವು ಕಂಪ್ಲಿ ಪುರಸಭೆಯ ಮೂರು ಬಿಜೆಪಿ ಸದಸ್ಯರನ್ನು ಹಣ ಕೊಟ್ಟು ಖರೀದಿ ಮಾಡಿ ಚುನಾವಣೆಗೆ ಗೈರಾಗುವಂತೆ ಮಾಡಿದೆ ಎಂದು ಬಿಜೆಪಿ ಕ್ಷೇತ್ರ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಆರೋಪಿಸಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಗೈರು ಆಗುವ ಮೂಲಕ ಕಾಂಗ್ರೆಸ್ ಬೆಂಬಲಿಸಿದ ಬಿಜೆಪಿ ಸದಸ್ಯರ ವಿರುದ್ಧ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಇಡೀ ಪಟ್ಟಣದ ಜನತೆ ಪುರಸಭೆಯ 23 ವಾರ್ಡ್ ಪೈಕಿ 13 ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಪುರಸಭೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಿದ್ದರು. ಆದರೆ ಇಂದು ಕಾಂಗ್ರೆಸ್ ವಾಮಮಾರ್ಗದಿಂದ ಬಿಜೆಪಿ ಸದಸ್ಯರಿಗೆ ಲಕ್ಷ ಲಕ್ಷ ಹಣ ನೀಡಿ ಅವರನ್ನು ಖರೀದಿಸಿ ಜನಾದೇಶದ ವಿರುದ್ಧ ನಡೆದುಕೊಂಡಿದೆ. ಮೂರು ದಿನದ ಹಿಂದೆಯೇ ಈ ಮೂರು ಸದಸ್ಯರಿಗೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಅನಿಲಕುಮಾರ್ ಮೋಕಾ ವಿಪ್ ಜಾರಿ ಮಾಡಿದ್ದಾರೆ. ಚುನಾವಣೆಗೆ ಗೈರು ಆಗುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲಿಸಿರುವ ಬಿಜೆಪಿ ಸದಸ್ಯರಾದ ಕೆ.ನಿರ್ಮಲ, ಪಾರ್ವತಿ, ಉಡೆಗೊಳ್ ಗಂಗಮ್ಮ ಅವರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಈ ಮೂರು ಸದಸ್ಯರನ್ನು 6 ವರ್ಷಗಳವರಗೆ ಪಕ್ಷದಿಂದ ಉಚ್ಚಾಟನೆಗೊಳಿಸಲಾಗುವುದು ಎಂದರು.
ಬಳಿಕ ಪುರಸಭೆ ಅಧ್ಯಕ್ಷ ಸ್ಥಾನ ಪರಾಜಿತ ಅಭ್ಯರ್ಥಿ, ಸದಸ್ಯ ಟಿ.ವಿ. ಸುದರ್ಶನ್ ರೆಡ್ಡಿ ಮಾತನಾಡಿ, ಕಾಂಗ್ರೆಸ್‌ನಿಂದ ಹಣ ಪಡೆದು, ಪಕ್ಷದಲ್ಲಿದ್ದುಕೊಂಡು ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣರಾದ ಸದಸ್ಯರು ತಮ್ಮ ವಾರ್ಡ್ ಗಳ ಜನತೆಗೆ ವಂಚಿಸಿದ್ದಾರೆ. ಹಣದ ಮೂಲಕ ಅಧಿಕಾರ ವಹಿಸಿಕೊಂಡ ಕಾಂಗ್ರೆಸ್ ನ ನಡೆ ಖಂಡನೀಯ ಎಂದರು.ಸದಸ್ಯರಾದ ಡಾ.ವಿ.ಎಲ್.ಬಾಬು, ಎಸ್.ಎಂ. ನಾಗರಾಜ, ಸಿ.ಆರ್. ಹನುಮಂತ, ರಾಮಾಂಜಿನಿ, ರಮೇಶ್ ಹೂಗಾರ್, ವಿ.ಶಾಂತಲಾ, ಹೇಮಾವತಿ, ಆರ್.ಆಂಜನೇಯ, ತಿಮ್ಮಕ್ಕ, ಮುಖಂಡರಾದ ಪಿ.ಬ್ರಹ್ಮಯ್ಯ, ಪುರುಷೋತ್ತಮ್, ಚಂದ್ರಕಾಂತ್ ರೆಡ್ಡಿ, ಭಾಸ್ಕರ್ ರೆಡ್ಡಿ, ವಿರೂಪಾಕ್ಷಿ ಇದ್ದರು.