ಸರ್ಕಾರಿ ಆಸ್ಪತ್ರೆ ಬಡವರು ಹಾಗೂ ಸಾಮಾನ್ಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅವಲಂಬಿಸಿದ್ದಾರೆ

ಕಂಪ್ಲಿ: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಸಾರ್ವಜನಿಕರ ನಿರಂತರ ದೂರಿನ ಹಿನ್ನೆಲೆ ಶಾಸಕ ಜೆ.ಎನ್. ಗಣೇಶ್ ಶನಿವಾರ ರಾತ್ರಿ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆ ಪರಿಶೀಲಿಸಿದರು.

ಈ ವೇಳೆ ಕರ್ತವ್ಯ ನಿರತ ವೈದ್ಯರು ಹಾಗೂ ಸ್ಟಾಫ್ ನರ್ಸ್ ಸ್ಥಳದಲ್ಲಿ ಇರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಆಸ್ಪತ್ರೆಯ ಅವ್ಯವಸ್ಥೆ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಡಾ. ಅಲಕಾನಂದ ಮಾಳಗಿಗೆ ದೂರವಾಣಿ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಆಸ್ಪತ್ರೆ ಬಡವರು ಹಾಗೂ ಸಾಮಾನ್ಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅವಲಂಬಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾತ್ರಿ ವೇಳೆ ವೈದ್ಯರು ಹಾಗೂ ಸಿಬ್ಬಂದಿ ಲಭ್ಯವಿಲ್ಲದಿದ್ದರೆ ತುರ್ತು ಚಿಕಿತ್ಸೆಗಾಗಿ ಬರುವ ರೋಗಿಗಳ ಪರಿಸ್ಥಿತಿ ಏನಾಗಬೇಕು? ರೋಗಿಗಳ ಸಮಸ್ಯೆ ಆಲಿಸಿ ಚಿಕಿತ್ಸೆ ನೀಡುವವರು ಯಾರು? ಎಂದು ಪ್ರಶ್ನಿಸಿದ ಶಾಸಕರು, ಆಸ್ಪತ್ರೆಯಲ್ಲಿನ ಕರ್ತವ್ಯ ನಿರ್ವಹಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕರ್ತವ್ಯಕ್ಕೆ ಹಾಜರಾಗಬೇಕಾದ ವೈದ್ಯರು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿದ್ದರೂ ಕರ್ತವ್ಯದ ಸಮಯದಲ್ಲಿ ಸ್ಥಳದಲ್ಲಿ ಲಭ್ಯವಿಲ್ಲದಿರುವುದು ಗಂಭೀರ ವಿಚಾರವಾಗಿದೆ. ಹಾಜರಿ ಪುಸ್ತಕದಲ್ಲಿ ಅ.27ರವರೆಗೆ ಕೆಲ ವೈದ್ಯರು ಮುಂಗಡವಾಗಿ ಸಹಿ ಮಾಡಿದ್ದಾರೆ ಎಂಬುದು ಕಂಡುಬಂದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕರ್ತವ್ಯ ನಿರ್ಲಕ್ಷ್ಯ ತೋರುವ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದರು.

ವೈದ್ಯರು, ಸಿಬ್ಬಂದಿಗೆ ಶೋಕಾಸ್ ನೋಟಿಸ್: ಡಿಎಚ್‌ಒ

ಶಾಸಕರ ದೂರಿನ ಹಿನ್ನೆಲೆ ಡಿಎಚ್‌ಒ ಡಾ. ಅಲಕಾನಂದ ಮಾಳಗಿ ಭಾನುವಾರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಎಂಟು ಜನ ವೈದ್ಯರು ಹಾಗೂ ಒಬ್ಬ ಆಯುಷ್ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಸಕರು ವ್ಯಕ್ತಪಡಿಸಿರುವ ಆಕ್ಷೇಪಗಳ ಹಿನ್ನೆಲೆ ಸಂಬಂಧಿಸಿದ ವೈದ್ಯರು ಮತ್ತು ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.

ಶಾಸಕರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ 24/7 ಸೇವೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಹೆರಿಗೆ ಪ್ರಕ್ರಿಯೆ ಮುಗಿಸಿ ಊಟಕ್ಕೆ ತೆರಳಿದ್ದರು. ವೈದ್ಯರ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸಿಸಿ ಕ್ಯಾಮೆರಾ ದೃಶ್ಯಾವಳಿ ವೀಕ್ಷಿಸಿದ್ದೇನೆ. ಆಸ್ಪತ್ರೆಯ ಕಾರ್ಯ ನಿರ್ವಹಣೆಯಲ್ಲಿ ಕೆಲವು ಸಣ್ಣಪುಟ್ಟ ಲೋಪಗಳಿರುವುದು ಗಮನಕ್ಕೆ ಬಂದಿದೆ. ಅವುಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸರಾಸರಿ 52ರಿಂದ 60 ಹೆರಿಗೆಗಳು ನಡೆಯುತ್ತಿದ್ದು, ಇದರಲ್ಲಿ 15ರಿಂದ 20 ಸಿಜೇರಿಯನ್ ಹೆರಿಗೆ ಸೇರಿವೆ. ಇದರ ಜತೆಗೆ ಟ್ಯೂಬೆಕ್ಟಮಿ ಸೇರಿದಂತೆ ಇತರ ಆರೋಗ್ಯ ಸೇವೆ ನಿಯಮಿತವಾಗಿ ಒದಗಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ನಡೆಯುತ್ತಿದ್ದರೂ, ಕರ್ತವ್ಯ ನಿರ್ವಹಣೆ ಹಾಗೂ ರೋಗಿಗಳೊಂದಿಗೆ ವರ್ತಿಸುವ ವಿಚಾರದಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ ಎಂದು ಹೇಳಿದರು.

ಹಾಜರಿ ಪುಸ್ತಕದ ಸಹಿ ಕುರಿತು ಸ್ಪಷ್ಟನೆ

ಹಾಜರಿ ಪುಸ್ತಕದಲ್ಲಿ ಮುಂಗಡವಾಗಿ ಸಹಿ ಮಾಡಲಾಗಿದೆ ಎಂಬ ಆರೋಪದ ಕುರಿತು ಸ್ಪಷ್ಟನೆ ನೀಡಿದ ಡಿಎಚ್‌ಒ, ಅದು ಕರ್ತವ್ಯಕ್ಕೆ ನೇಮಕಾತಿ ಅಥವಾ ನಿಯೋಜನೆಗೆ ಸಂಬಂಧಿಸಿದ ರುಜುವಾತು ಆಗಿದ್ದು, ಮುಂಗಡ ಹಾಜರಾತಿ ಎಂದು ಅರ್ಥೈಸಬಾರದು ಎಂದು ಹೇಳಿದರು.

ಆಸ್ಪತ್ರೆಯ ಆಡಳಿತಾತ್ಮಕ ವ್ಯವಸ್ಥೆ ಸುಧಾರಿಸಲು ಪ್ರತಿ ಆರು ತಿಂಗಳಿಗೊಮ್ಮೆ ಒಂದು ಆಡಳಿತಾತ್ಮಕ ಸಭೆ ಹಾಗೂ ಮತ್ತೊಂದು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕಿದೆ. ಈ ಸಭೆ ನಿಯಮಿತವಾಗಿ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಭೆಗಳ ಮೂಲಕ ಆಸ್ಪತ್ರೆಯ ಸಮಸ್ಯೆ ಚರ್ಚಿಸಿ, ವೈದ್ಯರು ಮತ್ತು ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಆಸ್ಪತ್ರೆಯ ಸಿಬ್ಬಂದಿಯಿಂದ ಯಾವುದೇ ತಪ್ಪುಗಳಾಗಿದ್ದರೆ ಅವುಗಳನ್ನು ಸರಿಪಡಿಸಿ ಮುಂದೆ ಇಂತಹ ಲೋಪ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಘಟನೆಗೆ ಸಂಬಂಧಿಸಿದಂತೆ ಸಿಬ್ಬಂದಿಯ ಪರ ಕ್ಷಮೆಯಾಚಿಸುತ್ತೇನೆ ಎಂದು ಡಿಎಚ್‌ಒ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಮೇಲ್ವಿಚಾರಕ ಡಾ. ಜಿ.ಅರುಣ್, ವೈದ್ಯ ಡಾ.ರವೀಂದ್ರ ಕನಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕೆ.ಎಸ್.ಚಾಂದ್‌ಬಾಷ, ಬಿ.ಸಿದ್ದಪ್ಪ, ಸಿ.ಆರ್.ಹನುಮಂತ, ಕೆ.ಷಣ್ಮುಖಪ್ಪ, ಬಿ.ಜಾಫರ್ ಸೇರಿದಂತೆ ಇತರರು ಶಾಸಕರೊಂದಿಗೆ ಇದ್ದರು.