ಬಾಲ್ಯ ವಿವಾಹದ ಅರಿವು ಕಾರ್ಯಕ್ರಮ ಆಯೋಜಿಸಲು ಶಾಸಕ ಜಿ.ಎಚ್.ಶ್ರೀನಿವಾಸ್ ಸೂಚನೆ

| Published : Sep 30 2025, 12:00 AM IST

ಬಾಲ್ಯ ವಿವಾಹದ ಅರಿವು ಕಾರ್ಯಕ್ರಮ ಆಯೋಜಿಸಲು ಶಾಸಕ ಜಿ.ಎಚ್.ಶ್ರೀನಿವಾಸ್ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಶಾಲಾ ಕಾಲೇಜುಗಳಲ್ಲಿ ಬಾಲ್ಯ ವಿವಾಹ, ಪೋಕ್ಸೋ ಮಕ್ಕಳ ಸಹಾಯವಾಣಿ 1098 ಕುರಿತು ಸಮೂದಾಯದಲ್ಲಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಶಾಸಕ ಜಿ.ಎಚ್. ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.

- ತರೀಕೆರೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಶಾಲಾ ಕಾಲೇಜುಗಳಲ್ಲಿ ಬಾಲ್ಯ ವಿವಾಹ, ಪೋಕ್ಸೋ ಮಕ್ಕಳ ಸಹಾಯವಾಣಿ 1098 ಕುರಿತು ಸಮೂದಾಯದಲ್ಲಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಶಾಸಕ ಜಿ.ಎಚ್. ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.ಸೋಮವಾರ ತಾಪಂನಲ್ಲಿ ನಡೆದ 2025-26ನೇ ಸಾಲಿನ 2ನೆ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಡೀ ಜಿಲ್ಲೆಯಲ್ಲಿ 84 ಬಾಲ ಗರ್ಭಿಣಿ ಪ್ರಕರಣಗಳು ಇದ್ದು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ 9 ಪ್ರಕರಣ ವರದಿ ಯಾಗಿದೆ. ಈ ಬಗ್ಗೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಸಭೆಗಳನ್ನು ನಡೆಸುವ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಅರಿವು ಮೂಡಿಸಿ ಬಾಲ್ಯ ವಿವಾಹ ತಡೆಗಟ್ಟಬೇಕೆಂದು ಆದೇಶಿಸಿದರು.

ನಾಗಬೋಗನಹಳ್ಲಿ ಕಿರಿಯ ಪ್ರಾಥಮಿಕ ಶಾಲೆಗೆ ಒಂದೇ ಕೊಠಡಿ ಇದ್ದು ಮಕ್ಕಳಿಗೆ ತೊಂದರೆಯಾಗುತ್ತಿದೆ. ಹೆಚ್ಚುವರಿ ಕೊಠಡಿ, ಅಡಿಗೆ ತಯಾರಿಕಾ ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಾಲೆಗಳಲ್ಲಿ ಪಾಠ ಚೆನ್ನಾಗಿ ಮಾಡುವ ಮೂಲಕ ಶಾಲೆ ಅಭಿವೃದ್ಧಿ ಮಾಡಿ, ಬಿಇಒ ಗಳಿಗೆ ಇರುವ ಹೆಚ್ಚು ಅಧಿಕಾರ ಉಪಯೋಗಿಸಿಕೊಳ್ಳಲು ತಿಳಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು ಹಾಸ್ಟೆಲ್ ಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಮಾತನಾಡಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಉತ್ತಮ ಪಡಿಸಲು ಇಲಾಖೆ 29 ಅಂಶಗಳನ್ನು ಶಾಲೆಗಳಲ್ಲಿ ಯಥಾವತ್ತಾಗಿ ಅನುಷ್ಟಾನಗೊಳಿಸ ಲಾಗುತ್ತಿದೆ. ಪಾಠ ಆಧಾರಿತ ಕಿರು ಪರೀಕ್ಷೆ, ಪ್ರತಿಯೊಂದು ಪಾಠದ ನಂತರ ಕಿರು ಪರೀಕ್ಷೆ ನಡೆಸಿ ಮಕ್ಕಳ ಕಲಿಕೆಯನ್ನು ದೃಢೀಕರಣ ಮಾಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ ಮಾಡುವುದಕ್ಕೆ ಕ್ರಮ. ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಕುರಿತು ಮಕ್ಕಳಿಗೆ ತರಗತಿವಾರು ಕ್ರಿಯಾ ಯೋಜನೆ ಮಾಡಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.ಕೆಡಿಪಿ ಸದಸ್ಯೆ ರಚನಾ ಶ್ರೀನಿವಾಸ್ ಮಾತನಾಡಿ ಮಕ್ಕಳು ಶಾಲೆ ಬಿಡದಂತೆ ನೋಡಿಕೊಳ್ಳಬೇಕು. ಬಾಲ್ಯ ವಿವಾಹ ತಡೆಗಟ್ಟಬೇಕು. ಇದಕ್ಕೆ ಶಿಕ್ಷಣ ಇಲಾಖೆ ಸಹಕಾರ ಅಗತ್ಯ ಎಂದು ಸಭೆಗೆ ತಿಳಿಸಿದರು.

ಕೆಡಿಪಿ ಸದಸ್ಯ ಎಚ್.ಈ. ಮಲ್ಲಿಕಾರ್ಜುನ್ ಮಾತನಾಡಿ ನೇರಲಕೆರೆ ಗ್ರಾಮದಲ್ಲಿರುವ 7 ಎಕರೆ 16 ಗುಂಟೆ ಕೆರೆ ಒತ್ತುವರಿಯಾಗಿದೆ. ಒತ್ತುವರಿ ಸರ್ವೆಯೂ ಆಗಿದೆ. ಆದರೆ ಒತ್ತುವರಿಯನ್ನು ಅಧಿಕಾರಿಗಳು ತೆರವುಗೊಳಿಸಿಲ್ಲ, ಅಧಿಕಾರಿ ಗಳು ಕೂಡಲೇ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.ತಾಲೂಕು ಅರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮಾತನಾಡಿ ಆರೋಗ್ಯ ಇಲಾಖೆ ಎಲ್ಲಾ ರಾಷ್ಟ್ರೀಯ ಕಾರ್ಯ ಕ್ರಮಗಳ ನಿಗಧಿತ ಪ್ರಗತಿ ಸಾಧಿಸಲಾಗಿದೆ. ಈಗಾಗಲೇ 7 ಗ್ರಾಪಂಗಳನ್ನು ಕ್ಷಯಮುಕ್ತ ವೆಂದು ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಪಂಗಳನ್ನು ಕ್ಷಯ ಮುಕ್ತ ಗೊಳಿಸಲು ಶ್ರಮ ವಹಿಸಲಾಗುವುದು ಎಂದರು.

ಕೆಡಿಪಿ ಸದಸ್ಯೆ ರಚನಾ ಶ್ರೀನಿವಾಸ್, ಎಚ್.ಎನ್.ಮಂಜುನಾಥ ಲಾಡ್, ಗಂಗಾಧರ್, ಮೆಹಬೂಬ್ ಮತ್ತು ಕೆಡಿಪಿ ಸದಸ್ಯರು ವಿವಿಧ ಚರ್ಚೆಗಳಲ್ಲಿ ಭಾಗವಹಿಸಿದ್ದರು. ಉಪವಿಭಾಗಾಧಿಕಾರಿ ಎನ್.ವಿ.ನಟೇಶ್, ತರೀಕೆರೆ ತಹಸೀಲ್ದಾರ್ ವಿಶ್ವಜೀತ್ ಮೇಹತ, ಅಜ್ಜಂಪುರ ತಾಲೂಕು ತಹಸೀಲ್ದಾರ್ ವಿನಾಯಕ ಸಾಗರ್, ತರೀಕೆರೆ ತಾಪಂ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್.ದೇವೇಂದ್ರಪ್ಪ, ಅಜ್ಜಂಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

29ಕೆಟಿಆರ್.ಕೆ.8ಃ

ತರೀಕೆರೆಯಲ್ಲಿ ತಾ.ಪಂನಲ್ಲಿ ನಡೆದ 2025-26ನೇ ಸಾಲಿನ 2ನೆ ತ್ರೈಮಾಸಿಕ ಕೆಡಿಪಿ ಸಭೆ ಅದ್ಯಕ್ಷತೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ ವಹಿಸಿ ಮಾತನಾಡಿದರು. ಉಪ ವಿಭಾಗಾಧಿಕಾರಿ ಎನ್.ವಿ.ನಟೇಶ್, ತರೀಕೆರೆ ತಾಲೂಕು ತಹಸೀಲ್ದಾರ್ ವಿಶ್ವಜೀತ್ ಮೇಹತ, ಅಜ್ಜಂಪುರ ತಾಲೂಕು ತಹಸೀಲ್ದಾರ್ ವಿನಾಯಕ ಸಾಗರ್, ತರೀಕೆರೆ ತಾಪಂ. ಇಒ ಡಾ.ಆರ್.ದೇವೇಂದ್ರಪ್ಪ, ಅಜ್ಜಂಪುರ ತಾಪಂ ಇಒವಿಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.