ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣಕ್ಕೆ ಶಾಸಕ ಎಚ್.ಟಿ.ಮಂಜು ಅನಿರೀಕ್ಷಿತ ಭೇಟಿ ನೀಡಿ ಅವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಶಾಸಕ ಎಚ್.ಟಿ.ಮಂಜು ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ ಹಲವು ಸಮಸ್ಯೆಗಳಿರುವ ಬಗ್ಗೆ ಶಾಸಕರ ಗಮನ ಸೆಳೆಯಲಾಯಿತು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದ ಒಳಗೆ ಸುಮಾರು 14 ಕೋಟಿ ರು. ಅಂದಾಜು ವೆಚ್ಚದಲ್ಲಿ ಬಿಜಿಎಸ್ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಿ ಜಿಲ್ಲಾ ಯುವಜನ ಸೇವಾ ಇಲಾಖೆ ಅಧೀನಕ್ಕೆ ಒಳಪಟ್ಟಿದರೂ ನಿರ್ವಹಣೆ ಕೊರತೆಯಿಂದ ನಲುಗುತ್ತಿದೆ.ಕ್ರೀಡಾಂಗಣದಲ್ಲಿ ಸುಸಜ್ಜಿತ ಜಿಮ್, ಈಜುಕೋಳ, ಟೆನ್ನಿಸ್ ಕೋರ್ಟ್, ಟೇಬಲ್ ಟೆನ್ನಿಸ್ ಕೋರ್ಟ್ ಮುಂತಾದ ಹತ್ತು ಹಲವು ಒಳಾಂಗಣ ಕ್ರೀಡಾ ಸೌಲಭ್ಯಗಳಿದ್ದರೂ ಸ್ಟೇಡಿಂಯಂನಲ್ಲಿ ಕ್ರೀಡಾಪಟುಗಳಿಗಾಗಿ ಶೌಚಾಲಯ ನಿರ್ಮಿಸಿದ್ದರೂ ಅದು ಸ್ಟೇಡಿಯಂ ಆರಂಭವಾದ ದಿನದಿಂದ ಹಿಡಿದು ಇಂದಿನವರೆಗೂ ಬಾಗಿಲು ತೆಗೆದು ಜನೋಪಯೋಗಿಯಾಗಿಲ್ಲ.
ಕ್ರೀಡಾಂಗಣದಲ್ಲಿ ಸಮರ್ಪಕ ನೀರು ಮತ್ತು ವಿದ್ಯುತ್ ಸಮಸ್ಯೆಯಿದೆ. ಕ್ರೀಡಾಂಗಣದ ಸುತ್ತ ಗಿಡಗೆಂಟೆಗಳು ಬೆಳೆದು ನಿಂತಿದ್ದರೂ ಯುವಜನ ಸೇವಾ ಇಲಾಖೆ ಅದನ್ನು ತೆಗೆಸಿ ಸ್ವಚ್ಛತೆ ಕಾಪಾಡುವತ್ತ ಕ್ರಮ ವಹಿಸಿಲ್ಲ. ಕ್ರೀಡಾಂಗಣದಲ್ಲಿ ಕಬಡ್ಡಿ ಮೈದಾನದ ಮ್ಯಾಟ್ ಗಳು ಬಳಕೆಯಾಗದೆ ದೂಳು ಹಿಡಿದು ಈಜುಕೊಳದ ಸುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.ಈಜುಕೊಳದ ನೀರು ಕಾಲ ಕಾಲಕ್ಕೆ ಬದಲಾಯಿಸಿದೆ ಗಲೀಜಾಗಿದೆ. ನಿರ್ವಹಣಾ ಕೊರತೆಯಿಂದ ನಲುಗುತ್ತಿರುವ ಒಳಾಂಗಣ ಕ್ರೀಡಾಂಗಣಕ್ಕೆ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಅದರ ಉಪಯೋಗ ಪಡೆಯುತ್ತಿಲ್ಲ. ಲಕ್ಷಾಂತರ ರು ವ್ಯಹಿಸಿ ರಾಜ್ಯ ಸರ್ಕಾರ ಸುಸಜ್ಜಿತ ಜಿಮ್ ಯಂತ್ರೋಪಕರಣಗಳನ್ನು ತಂದಿಟ್ಟಿದ್ದರೂ ಕೇವಲ 6 ಜನ ಮಾತ್ರ ಇಲ್ಲಿ ಜಿಮ್ ಮಾಡುತ್ತಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಒಳಾಂಗಣ ಕ್ರೀಡಾಂಗಣ ಅವ್ಯವಸ್ಥೆ ಬಗ್ಗೆ ನಾನು ಈಗಾಗಲೇ ವಿಧಾನ ಸಭೆಯಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆದಿದ್ದೇನೆ. ದರಪಟ್ಟಿಗಿಂತ ಮೂರುಪಟ್ಟು ಹೆಚ್ಚಿನ ಬೆಲೆಗೆ ಕ್ರೀಡಾ ಸಾಮಗ್ರಿಗಳ ಖರೀದಿ ಮಾಡಿದ್ದು, ಈ ಬಗ್ಗೆ ಇಲಾಖೆಗೆ ಸಲ್ಲಿಸಿದ್ದ ಪ್ರಸ್ತಾವನೆ ತಿರಸ್ಕೃತವಾಗಿದ್ದರೂ ಬಿಲ್ ಮಾಡಲಾಗಿದೆ. ಇದರ ಬಗ್ಗೆ ತನಿಖೆಯಾಗಬೇಕಾಗಿದೆ ಎಂದರು.ಸುಮಾರು 8 ಲಕ್ಷ ವಿದ್ಯುತ್ ಬಿಲ್ ಬಾಕಿಯಿದ್ದು, ವಿದ್ಯುತ್ ಇಲಾಖೆ ಕ್ರೀಡಾಂಗಣದ ವಿದ್ಯತ್ ಸಂಪರ್ಕ ಕಡಿತ ಮಾಡಿದೆ. ನಿರ್ವಹಣಾ ಏಜೆನ್ಸಿ ಬದಲಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಸದನದಲ್ಲಿ ತಿಳಿಸಿದ್ದು, ಅದರಂತೆ ಆಗಸ್ಟ್ 18 ರಿಂದ ಕ್ರೀಡಾಂಗಣ ನಿರ್ವಹಣೆಯ ಏಜೆನ್ಸಿ ಬದಲಾಗಿದೆ. ನೂತನ ಏಜೆನ್ಸಿಯವರು ಉತ್ತಮವಾಗಿ ನಿರ್ವಹಿಸುವ ನಂಬಿಕೆ ನನಗಿದೆ ಎಂದು ಹೇಳಿದರು.
ಕ್ರೀಡಾಂಗಣ ನಿರ್ವಹಣೆಗೆ ಅಗತ್ಯ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಕ್ರೀಡಾಪಟುಗಳು ಒಳಾಂಗಣ ಕ್ರೀಡಾಂಗಣದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕ್ರೀಡಾ ಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವಂತಾಗಬೇಕು. ನೀರು ಮತ್ತು ವಿದ್ಯುತ್ ಕೊರತೆ ಸೇರಿದಂತೆ ಎಲ್ಲವನ್ನೂ ಸರಿಪಡಿಸಿ ಕ್ರೀಡಾಂಗಣವನ್ನು ಜನಸ್ನೇಹಿಯನ್ನಾಗಿ ಪರಿವರ್ತಿಸುವಂತೆ ನೂತನ ಏಜೆನ್ಸಿಯವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.ಈ ವೇಳೆ ಪುರಸಭಾ ಸದಸ್ಯ ಗಿರೀಶ್ ಸೇರಿದಂತೆ ಹಲವರಿದ್ದರು.