ಜನರ ಉಜ್ವಲ ಭವಿಷ್ಯಕ್ಕೆ ಶಾಸಕ ಹಲಗೇಕರ ಅವಿರತ ಶ್ರಮ: ವಿಶ್ವೇಶ್ವರ ಹೆಗಡೆ ಕಾಗೇರಿ

| Published : Jan 08 2025, 12:17 AM IST

ಜನರ ಉಜ್ವಲ ಭವಿಷ್ಯಕ್ಕೆ ಶಾಸಕ ಹಲಗೇಕರ ಅವಿರತ ಶ್ರಮ: ವಿಶ್ವೇಶ್ವರ ಹೆಗಡೆ ಕಾಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು, ಜನಸಾಮಾನ್ಯರು ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಪ್ರತಿನಿಧಿಸುತ್ತಿರುವ ಹಲಗೇಕರ್‌ ಅವರು ಈ ಭಾಗದ ಜನರ ಉಜ್ವಲ ಭವಿಷ್ಯಕ್ಕಾಗಿ ಅವಿತರವಾಗಿ ಶ್ರಮಿಸುತ್ತಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗುಣಗಾನ ಮಾಡಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ರೈತರು, ಜನಸಾಮಾನ್ಯರು ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಪ್ರತಿನಿಧಿಸುತ್ತಿರುವ ಹಲಗೇಕರ್‌ ಅವರು ಈ ಭಾಗದ ಜನರ ಉಜ್ವಲ ಭವಿಷ್ಯಕ್ಕಾಗಿ ಅವಿತರವಾಗಿ ಶ್ರಮಿಸುತ್ತಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗುಣಗಾನ ಮಾಡಿದರು.

ಪಟ್ಟಣದ ಶಾಂತಿನಕೇತನ ಶಾಲೆಯ ಸಭಾಗೃಹದಲ್ಲಿ ಮಂಗಳವಾರ ಕ್ಷೇತ್ರದ ಶಾಸಕ ವಿಠ್ಠಲ ಹಲಗೇಕರ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಮತ್ತು ಚಕ್ಕಡಿ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕರಾಗುವ ಪೂರ್ವದಲ್ಲೇ ಹಲವು ವರ್ಷಗಳಿಂದ ಸಹಕಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಅಪಾರ ಅನುಭವ ಹೊಂದಿದ್ದಾರೆ. ಇಂತಹ ದೂರದೃಷ್ಟಿಯ ನಾಯಕನ ಅಲ್ಪಾವಧಿ ರಾಜಕೀಯ ಪಯಣದಲ್ಲಿ ಕ್ಷೇತ್ರ ಬಹಳಷ್ಟು ಸುಧಾರಣೆ ಕಂಡಿದೆ. ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ತಮ್ಮ ಜನ್ಮದಿನದ ನಿಮಿತ್ತ ಕೃಷಿ ವಸ್ತು ಪ್ರದರ್ಶನ ಮತ್ತು ಸರ್ಕಾರಿ ಯೋಜನೆಗಳ ಮಾಹಿತಿ ಶಿಬಿರ ಆಯೋಜಿಸಿರುವುದು ಹಲಗೇಕರ ಅವರ ಜನಪರ ಕಾಳಜಿ ತೋರ್ಪಡಿಸುತ್ತಿದೆ. ಮುಂಬರುವ ದಿನಗಳಲ್ಲಿ ಕೇಂದ್ರದ ವಿವಿಧ ಯೋಜನೆಗಳ ಮೂಲಕ ತಾಲೂಕಿನಲ್ಲಿ ವಿಶೇಷ ಕಾಮಗಾರಿ ಆರಂಭಿಸುವ ಇರಾದೆ ಹೊಂದಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಈ ಭಾಗದ ಅಭಿವದ್ಧಿ ಹಾಗೂ ಕೃಷಿ ಹಾಗೂ ಕುಡಿಯುವ ನೀರಿನ ಯೋಜನೆ ಕಾಮಗಾರಿಯ ಅನುಷ್ಠಾನಕ್ಕೆ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಸರಳ ಜೀವಿ ವಿಠ್ಠಲ ಹಲಗೇಕರ ಅವರು ದೀನ ದಲಿತರು, ದುರ್ಬಲರು ಮತ್ತು ಅಸಂಘಟಿತರ ಪಾಲಿನ ಆಶಾಕಿರಣವಾಗಿ ಕ್ಷೇತ್ರದ ಜನರ ವಿಶ್ವಾಸ ಗಳಿಸಿದ್ದಾರೆ. ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಯೊಂದಿಗೆ ಸಹಕಾರಿ ಕ್ಷೇತ್ರವನ್ನು ಸುಧಾರಿಸುವತ್ತ ಶ್ರಮ ವಹಿಸಿದ್ದಾರೆ. ಕೈಗಾರಿಕೆ, ತಂತ್ರಜ್ಞಾನ, ಉನ್ನತ ಶಿಕ್ಷಣ ಸೇರಿದಂತೆ ಭವಿಷ್ಯದಲ್ಲಿ ರೈತರ ಮತ್ತು ನಿರುದ್ಯೋಗಿಗಳ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದಾರೆ. ಮುಚ್ಚಿದ್ದ ಕಾರ್ಖಾನೆ ಆರಂಭಕ್ಕೆ ಅವರು ಕೈಗೊಂಡ ಕ್ರಮಗಳು ಶ್ಲಾಘನೀಯ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪೋಷಣ ಅಭಿಯಾನದಡಿ ಗರ್ಭಿಣಿಯರ ಸೀಮಂತ, ಚಿಕ್ಕಮಕ್ಕಳ ಅನ್ನಪ್ರಾಶನ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಪಾಸ್ ಬುಕ್ ವಿತರಣೆ ಕಾರ್ಯಕ್ರಮ ಜರುಗಿತು. ಶಾಸಕರ ಪತ್ನಿ ರುಕ್ಮಿಣಿ ಹಲಗೇಕರ ಅವರು ಗರ್ಭಿಣಿಯರ ಸೀಮಂತ ಶಾಸ್ತ್ರ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಅರವಿಂದ ಪಾಟೀಲ, ಸಂಜಯ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಅವರೊಳ್ಳಿ-ಬಿಳಕಿಯ ಚನ್ನಬಸವ ದೇವರು, ಹಂಡಿ ಭಡಂಗನಾಥ ಮಠದ ಮಂಗಳನಾಥ ಸ್ವಾಮಿ, ತೋಫಿನಕಟ್ಟಿ ಸಿದ್ಧಾರೂಢ ಮಠದ ರಾಮದಾಸ ಸ್ವಾಮೀಜಿ, ಧನಶ್ರೀ ದೇಸಾಯಿ, ಬಸವರಾಜ ಸಾಣಿಕೊಪ್ಪ ಮತ್ತಿತರರು ಉಪಸ್ಥಿತರಿದ್ದರು. ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ ಸ್ವಾಗತಿಸಿದರು. ಮಲ್ಲಪ್ಪ ಮಾರಿಹಾಳ ನಿರೂಪಿಸಿದರು. ತುಕಾರಾಮ ಹುಂದರೆ ವಂದಿಸಿದರು.

ಎತ್ತಿನಗಾಡಿ ಸ್ಪರ್ಧೆ ಉದ್ಘಾಟನೆ: ಶಾಸಕರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಶಾಸಕ ವಿಠ್ಠಲ ಹಲಗೇಕರ ಇತರರು ಉದ್ಘಾಟಿಸಿದರು. ಮಾಜಿ ಶಾಸಕ ಅರವಿಂದ ಪಾಟೀಲ ಎತ್ತಿನಗಾಡಿ ಪೂಜೆ ನೆರವೇರಿಸಿದರು. ನಂತರ ಗಣ್ಯರು ಅಖಾಡದಲ್ಲಿ ಎತ್ತಿನಗಾಡಿ ಸ್ಪರ್ಧೆಗೆ ಚಾಲನೆ ನೀಡಿದರು.

ಆರೋಗ್ಯ ಶಿಬಿರ: ಶಾಸಕರ ಜನ್ಮದಿನದ ನಿಮಿತ್ತ ಶಾಂತಿನಿಕೇತನ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ಖಾನಾಪುರದ ಸರ್ಕಾರಿ ಆಸ್ಪತ್ರೆ ಹಾಗೂ ಕೆಎಲ್‌ಇ ಸೆಂಟೆನರಿ ಆಸ್ಪತ್ರೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ 500ಕ್ಕೂ ಅಧಿಕ ನಾಗರಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ರಕ್ತದಾನ ಶಿಬಿರದಲ್ಲಿ 200ಕ್ಕೂ ಅಧಿಕ ಜನರು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿದರು.